ಗಾಝಾದ ಅಸ್ತಿತ್ವ ಅಪಾಯದಲ್ಲಿ: ವಿಶ್ವಸಂಸ್ಥೆ ಕಳವಳ

Photo Credit : hrw.org
ಜಿನೇವಾ,ಎ.25: ಗಾಝಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯು ಫೆಲೆಸ್ತೀನ್ ನ ಈ ಪ್ರಾಂತದ ಆರ್ಥಿಕತೆಯನ್ನು ನಾಶಪಡಿಸಿದ್ದು, ಅದರ ಅಸ್ತಿತ್ವಕ್ಕೆ ಬೆದರಿಕೆಯೊಡ್ಡಿದೆ ಎಂದು ವಿಶ್ವಸಂಸ್ಥೆಯು ಮಂಗಳವಾರ ಎಚ್ಚರಿಕೆ ನೀಡಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯವು ತಕ್ಷಣವೇ ಮಧ್ಯಪ್ರವೇಶಿಸುವಂತೆ ಅದು ಆಗ್ರಹಿಸಿದೆ.
ಯುದ್ಧದಿಂದಾಗಿ ನಾಶಗೊಂಡಿರುವ ಗಾಝಾಪಟ್ಟಿಯನ್ನು ಪುನರ್ನಿರ್ಮಿಸಲು 70 ಶತಕೋಟಿ ಡಾಲರ್ ಗೂ ಅಧಿಕ ವೆಚ್ಚ ತಗಲಲಿದ್ದು, ಅದು ಪೂರ್ಣಗೊಳ್ಳಲು ಹಲವಾರು ದಶಕಗಳೇ ಬೇಕಾಗಬಹುದು ಎಂದು ವಿಶ್ವಸಂಸ್ಥೆಯ ವ್ಯಾಪಾರ ಹಾಗೂ ಅಭಿವೃದ್ಧಿ ಏಜೆನ್ಸಿ (ಯುಎನ್ಸಿಟಿಎಡಿ)ಯ ನೂತನ ವರದಿ ತಿಳಿಸಿದೆ. ಗಾಝಾ ಯುದ್ಧ ಹಾಗೂ ಆ ಪ್ರದೇಶದ ಮೇಲೆ ಹೇರಲಾದ ನಿರ್ಬಂಧಗಳು ಫೆಲೆಸ್ತೀನ್ ಆರ್ಥಿಕತೆಯನ್ನು ಪತನಗೊಳಿಸಿವೆ ಎಂದು ಅದು ಹೇಳಿದೆ.
ಗಾಝಾದಲ್ಲಿ ನಡೆಸಲಾದ ಸೇನಾ ಕಾರ್ಯಾಚರಣೆಗಳು ಆಹಾರ, ಆಶ್ರಯದಿಂದ ಹಿಡಿದು ಆರೋಗ್ಯಪಾಲನೆಯವರೆಗೆ ಪ್ರತಿಯೊಬ್ಬ ಬದುಕುಳಿದಿರುವ ವ್ಯಕ್ತಿಯ ಜೀವನಾಧಾರವನ್ನು ಗಣನೀಯವಾಗಿ ದುರ್ಬಲಗೊಳಿಸಿದೆ.
ಗಾಝಾದಲ್ಲಿ ಸ್ಥಿರವಾಗಿ, ವ್ಯವಸ್ಥಿತವಾಗಿ ನಡೆಸಾದ ವಿನಾಶವು, ಆ ಪ್ರದೇಶವು ಜೀವನಯೋಗ್ಯ ಸ್ಥಳವ ಹಾಗೂ ಸಮಾಜವಾಗಿ ಪುನಾರಚನೆಗೊಳ್ಳುವ ಸಾಮರ್ಥ್ಯವನ್ನು ಉಳಿಸಿಕೊಂಡಿರುವ ಬಗ್ಗೆ ಗಣನೀಯ ಸಂದೇಹವನ್ನುಂಟು ಮಾಡಿದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.
2023ರ ಆಕ್ಟೋಬರ್ ನಲ್ಲಿ ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ದಾಳಿ ನಡೆಸಿದ ಬಳಿ ಇಸ್ರೇಲ್ ನಡೆಸಿದ ಪ್ರತೀಕಾರ ದಾಳಿಯು ಎರಡು ವರ್ಷಗಳ ಕಾಲ ಮುಂದುವರಿದು, 69 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
ಗಾಝಾದ ಸಮಗ್ರ ಜನಸಂಖ್ಯೆಯು ತೀವ್ರ, ಬಹು ಆಯಾಮದ ಬಡತನವನ್ನು ಎದುರಿಸುತ್ತಿವೆಯೆಂದು ಹೇಳಿರುವ ವರದಿಯು, ಅಲ್ಲಿನ ಪ್ರತಿಯೊಬ್ಬ ನಿವಾಸಿಗೂ ಪುನರ್ನವೀಕರಣಯೋಗ್ಯ ಹಾಗೂ ನಿಶ್ಶರ್ತವಾದ ನಗದು ವರ್ಗಾವಣೆಯನ್ನು ಮಾಡುವಂತೆ ಆಗ್ರಹಿಸಿದೆ.
2023-24ರ ಸಾಲಿನಲ್ಲಿ ಗಾಝಾದ ಆರ್ಥಿಕತೆಯು ಶೇ.87ರಷ್ಟು ಕುಗ್ಗಿದ್ದು, ಅದರ ಒಟ್ಟು ಆಂತರಿಕ ಉತ್ಪನ್ನ ಕೇವಲ 161 ಡಾಲರ್ ಆಗಿದ್ದು, ಜಾಗತಿಕವಾಗಿ ಅತ್ಯಂತ ಕನಿಷ್ಠವಾಗಿದೆಯೆಂದು ವರದಿ ತಿಳಿಸಿದೆ.







