ಗಾಝಾಕ್ಕೆ ಸೇನಾ ತುಕಡಿ ಕಳುಹಿಸಲು ಟ್ರಂಪ್ ಒತ್ತಾಯ; ಇಕ್ಕಟ್ಟಿನಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್: ವರದಿ

ಡೊನಾಲ್ಡ್ ಟ್ರಂಪ್ , ಆಸಿಮ್ ಮುನೀರ್ | Photo Credit : PTI
ಇಸ್ಲಾಮಾಬಾದ್, ಡಿ.17: ಗಾಝಾದಲ್ಲಿ ನಿಯೋಜನೆಗೊಳ್ಳಲಿರುವ ಅಂತಾರಾಷ್ಟ್ರೀಯ ಸ್ಥಿರೀಕರಣ ಪಡೆಗೆ ಯೋಧರನ್ನು ಕಳುಹಿಸುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಮೇಲೆ ನಿರಂತರ ಒತ್ತಡ ಹಾಕುತ್ತಿರುವುದರಿಂದ ಪಾಕಿಸ್ತಾನದ ಸಶಸ್ತ್ರ ಪಡೆಗಳ ಮುಖ್ಯಸ್ಥ ಆಸಿಮ್ ಮುನೀರ್ ಇಕ್ಕಟ್ಟಿಗೆ ಸಿಲುಕಿರುವುದಾಗಿ ವರದಿಯಾಗಿದೆ.
ಟ್ರಂಪ್ ಒತ್ತಾಯವನ್ನು ನಿರಾಕರಿಸಿದರೆ ಅಮೆರಿಕಾದ ಬೆಂಬಲವನ್ನು ಕಳೆದುಕೊಳ್ಳುವ ಅಪಾಯ, ಒಪ್ಪಿದರೆ ದೇಶದಲ್ಲಿ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ಎದುರಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮುನೀರ್ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಗಾಝಾ ಯುದ್ಧ ಆರಂಭಗೊಂಡಂದಿನಿಂದಲೂ ಪಾಕಿಸ್ತಾನದಲ್ಲಿ ಫೆಲೆಸ್ತೀನೀಯರ ಪರ ಸಾರ್ವಜನಿಕ ಅಭಿಪ್ರಾಯ ಬಲವಾಗಿದೆ. ಮುಂದಿನ ವಾರದಲ್ಲಿ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅಮೆರಿಕಾಕ್ಕೆ ಪ್ರಯಾಣಿಸುವ ನಿರೀಕ್ಷೆಯಿದೆ. 6 ತಿಂಗಳಲ್ಲಿ ಮೂರನೇ ಬಾರಿ ಟ್ರಂಪ್ ರೊಂದಿಗೆ ನಡೆಸಲಿರುವ ಸಭೆಯಲ್ಲಿ ಗಾಝಾ ಸ್ಥಿರೀಕರಣ ಪಡೆಗೆ ತುಕಡಿಯನ್ನು ಕಳುಹಿಸುವ ವಿಷಯ ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.
ಟ್ರಂಪ್ ಅವರ 20 ಅಂಶಗಳ ಗಾಝಾ ಶಾಂತಿ ಯೋಜನೆಯು `ಗಾಝಾದಲ್ಲಿ ಪುರ್ನನಿರ್ಮಾಣ ಮತ್ತು ಆರ್ಥಿಕ ಚೇತರಿಕೆಯ ಮೇಲೆ ಕೇಂದ್ರೀಕರಿಸಿದ ಪರಿವರ್ತನೆಯ ಹಂತವನ್ನು ಮೇಲ್ವಿಚಾರಣೆ ಮಾಡಲು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಸೈನ್ಯವನ್ನು ನಿಯೋಜಿಸಲು' ಕರೆ ನೀಡುತ್ತದೆ. ಹಮಾಸ್ ಗುಂಪನ್ನು ನಿಶ್ಯಸ್ತ್ರಗೊಳಿಸುವುದನ್ನು ಒಳಗೊಂಡಿರುವ ಕಾರ್ಯಾಚರಣೆಗೆ ಪಡೆಗಳನ್ನು ಕಳುಹಿಸುವ ಬಗ್ಗೆ ಹಲವಾರು ದೇಶಗಳು ಎಚ್ಚರಿಕೆಯಿಂದ ಪರಿಶೀಲಿಸುತ್ತಿವೆ. ಇದು ತಮ್ಮನ್ನೂ ನೇರವಾಗಿ ಸಂಘರ್ಷಕ್ಕೆ ಎಳೆಯಬಹುದು ಎಂಬ ಭಯವೂ ಇದಕ್ಕೆ ಕಾರಣವಾಗಿದೆ.
ಶಾಂತಿಪಾಲನೆ ಕರ್ತವ್ಯಗಳಿಗೆ ತುಕಡಿಗಳನ್ನು ಒದಗಿಸುವ ಬಗ್ಗೆ ಪಾಕಿಸ್ತಾನ ಪರಿಗಣಿಸಬಹುದು. ಆದರೆ ಹಮಾಸ್ ಅನ್ನು ನಿಶ್ಯಸ್ತ್ರಗೊಳಿಸುವುದು ನಮ್ಮ ಕೆಲಸವಲ್ಲ' ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಷಾಕ್ ದಾರ್ ಕಳೆದ ತಿಂಗಳು ಹೇಳಿದ್ದರು.
ಗಾಝಾ ಸ್ಥಿರೀಕರಣ ಪಡೆಗೆ ಯೋಧರನ್ನು ಕಳುಹಿಸದಿರುವುದು ಟ್ರಂಪ್ರನ್ನು ಕೆರಳಿಸಬಹುದು. ಅಮೆರಿಕಾ ಅಧ್ಯಕ್ಷರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರೆ ಅಮೆರಿಕಾದ ಹೂಡಿಕೆ ಮತ್ತು ಭದ್ರತಾ ಸಹಾಯವನ್ನು ಪಡೆಯಬಹುದು ಎಂಬುದು ಪಾಕಿಸ್ತಾನಕ್ಕೆ ತಿಳಿದಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.







