Gazaದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚಳ: ಅಧ್ಯಯನ ವರದಿಯಲ್ಲಿ ಉಲ್ಲೇಖ

ಸಾಂದರ್ಭಿಕ ಚಿತ್ರ
ಲಂಡನ್, ಜ.15: ಗಾಝಾ ಪ್ರದೇಶದ ಮೇಲೆ ಇಸ್ರೇಲ್ ನ ಯುದ್ಧದಿಂದಾಗಿ ಅಲ್ಲಿನ ಜನನ ಪ್ರಮಾಣ 41% ಕುಸಿದಿದ್ದು, ಸಂಘರ್ಷದ ಪರಿಣಾಮವಾಗಿ ತಾಯಂದಿರ ಸಾವು, ಗರ್ಭಪಾತಗಳು ಮತ್ತು ಗರ್ಭಧಾರಣೆಯ ತೊಡಕುಗಳು ಗರಿಷ್ಠ ಮಟ್ಟ ತಲುಪಿವೆ ಎಂದು ಎರಡು ಅಧ್ಯಯನ ವರದಿಗಳು ತಿಳಿಸಿವೆ.
ಯುದ್ಧದಿಂದ ಹಾನಿಗೊಳಗಾದ ಫೆಲೆಸ್ತೀನಿಯನ್ ಪ್ರದೇಶದಲ್ಲಿ ಗರ್ಭಿಣಿಯರು, ಶಿಶುಗಳು ಹಾಗೂ ಮಾತೃತ್ವ ಆರೈಕೆಗೆ ಸಂಬಂಧಿಸಿದ ಅಂಕಿಅಂಶಗಳು ನವಜಾತ ಶಿಶುಗಳ ಮರಣ ಹಾಗೂ ಅಕಾಲಿಕ ಜನನಗಳ ಹೆಚ್ಚಳವನ್ನು ಬಹಿರಂಗಪಡಿಸಿವೆ. ಅಪಾಯಕಾರಿ ಯುದ್ಧಕಾಲದ ಪರಿಸ್ಥಿತಿಗಳು ಹಾಗೂ ಗಾಝಾದ ಆರೋಗ್ಯ ವ್ಯವಸ್ಥೆಯನ್ನು ಇಸ್ರೇಲ್ ವ್ಯವಸ್ಥಿತವಾಗಿ ವಿನಾಶಗೊಳಿಸಿರುವುದೇ ಈ ಆತಂಕಕಾರಿ ಸ್ಥಿತಿಗೆ ಕಾರಣ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಚಿಕಾಗೋ ವಿಶ್ವವಿದ್ಯಾಲಯದ ಕಾನೂನು ವಿದ್ಯಾಲಯದ ಗ್ಲೋಬಲ್ ಹ್ಯೂಮನ್ ರೈಟ್ಸ್ ಕ್ಲಿನಿಕ್ ಮತ್ತು ಇಸ್ರೇಲ್ನ ಫಿಜಿಶಿಯನ್ಸ್ ಫಾರ್ ಹ್ಯೂಮನ್ ರೈಟ್ಸ್ (ಪಿಎಚ್ಆರ್) ಈ ಎರಡು ಅಧ್ಯಯನ ವರದಿಗಳನ್ನು ಬಿಡುಗಡೆಗೊಳಿಸಿವೆ. ಫೆಲೆಸ್ತೀನೀಯರಲ್ಲಿ ಜನನವನ್ನು ತಡೆಯುವ ಇಸ್ರೇಲ್ ನ ಉದ್ದೇಶಪೂರ್ವಕ ಕ್ರಮಗಳು ಜನಾಂಗೀಯ ಹತ್ಯೆಯ ಮಾನದಂಡಕ್ಕೆ ಸಮಾನವಾಗಿವೆ ಎಂದು ಸಂಶೋಧಕರು ಒತ್ತಿಹೇಳಿದ್ದಾರೆ.
2025ರ ಜನವರಿ ಮತ್ತು ಜೂನ್ ತಿಂಗಳ ಅವಧಿಯಲ್ಲಿ 2,600 ಗರ್ಭಪಾತಗಳು, 220 ಗರ್ಭಧಾರಣೆ ಸಂಬಂಧಿತ ಸಾವುಗಳು, 1,460 ಅವಧಿಪೂರ್ವ ಜನನಗಳು, ಸುಮಾರು 1,700 ಕಡಿಮೆ ತೂಕದ ನವಜಾತ ಶಿಶುಗಳು ಹಾಗೂ ತೀವ್ರ ನಿಗಾ ಅಗತ್ಯವಿರುವ 2,500ಕ್ಕೂ ಹೆಚ್ಚು ನವಜಾತ ಶಿಶುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.
ಈ ಅಂಕಿಅಂಶಗಳು ಯುದ್ಧದ ಆಘಾತ, ಹಸಿವು, ಸ್ಥಳಾಂತರ ಮತ್ತು ತಾಯಿಯ ಆರೋಗ್ಯ ಸೇವೆಯ ಕುಸಿತದ ದುರಂತವನ್ನು ದಾಖಲಿಸುತ್ತವೆ. ಈ ಪರಿಸ್ಥಿತಿಗಳು ತಾಯಂದಿರು, ಹುಟ್ಟಲಿರುವ ಶಿಶುಗಳು, ನವಜಾತರು ಹಾಗೂ ಹಾಲುಣಿಸುವ ಶಿಶುಗಳಿಗೆ ತೀವ್ರ ಅಪಾಯವನ್ನುಂಟು ಮಾಡುತ್ತವೆ ಮತ್ತು ಪೀಳಿಗೆಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತವೆ ಎಂದು ಪಿಎಚ್ಆರ್ನ ಮನಶಾಸ್ತ್ರಜ್ಞೆ ಹಾಗೂ ಪ್ರಾಜೆಕ್ಟ್ ಮ್ಯಾನೇಜರ್ ಲಾಮಾ ಬಕ್ರಿ ಹೇಳಿದ್ದಾರೆ.
ಇಸ್ರೇಲ್ ನಿಂದ ಆರೋಗ್ಯ ಮೂಲಸೌಕರ್ಯಗಳ ನಾಶ, ಇಂಧನ ಕೊರತೆ, ನಿರ್ಬಂಧಿತ ವೈದ್ಯಕೀಯ ಸರಬರಾಜು, ಸಾಮೂಹಿಕ ಸ್ಥಳಾಂತರ ಹಾಗೂ ನಿರಂತರ ಬಾಂಬ್ ದಾಳಿಗಳಿಂದ ಗಾಝಾದಲ್ಲಿ ತಾಯಿಯ ಹಾಗೂ ನವಜಾತ ಶಿಶುಗಳ ಆರೈಕೆ ಗಂಭೀರವಾಗಿ ಹಾನಿಗೊಳಗಾಗಿದೆ. ಪರಿಣಾಮವಾಗಿ ಕಿಕ್ಕಿರಿದ ಡೇರೆಗಳಲ್ಲಿ ನೆಲೆಸುವುದೇ ಗರ್ಭಿಣಿಯರು ಮತ್ತು ತಾಯಂದಿರಿಗೆ ಏಕೈಕ ಆಯ್ಕೆಯಾಗಿದೆ.
ಈ ಪ್ರದೇಶದಲ್ಲಿ ಇಸ್ರೇಲ್ ನ ಯುದ್ಧದ ಮೊದಲ ಆರು ತಿಂಗಳಲ್ಲಿ 6,000ಕ್ಕೂ ಹೆಚ್ಚು ತಾಯಂದಿರು ಹತರಾಗಿದ್ದಾರೆ (ಸರಾಸರಿ ಗಂಟೆಗೆ ಇಬ್ಬರು) ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ. ಸಂಘರ್ಷದ ಪರಿಣಾಮವಾಗಿ ಸುಮಾರು 1.5 ಲಕ್ಷ ಗರ್ಭಿಣಿ ಮಹಿಳೆಯರು ಮತ್ತು ಎಳೆಯ ಮಕ್ಕಳಿರುವ ತಾಯಂದಿರು ಬಲವಂತವಾಗಿ ಸ್ಥಳಾಂತರಗೊಂಡಿದ್ದಾರೆ.
ಕಳೆದ ವರ್ಷದ ಮೊದಲ ತಿಂಗಳಲ್ಲಿ ಗಾಝಾದಲ್ಲಿ ಕೇವಲ 17,000 ಜನನಗಳು ದಾಖಲಾಗಿದ್ದು, ಇದು 2022ರ ಇದೇ ಅವಧಿಗೆ ಹೋಲಿಸಿದರೆ 41% ಕಡಿಮೆಯಾಗಿದೆ. ಫೆಲೆಸ್ತೀನಿಯನ್ ಜನನಗಳನ್ನು ದುರ್ಬಲಗೊಳಿಸುವ ಇಸ್ರೇಲ್ ನ ಸ್ಪಷ್ಟ ತಂತ್ರಗಳನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ.
2023ರ ಡಿಸೆಂಬರ್ನಲ್ಲಿ ಗಾಝಾದ ಅತಿದೊಡ್ಡ ಫಲವತ್ತತೆ ಕೇಂದ್ರವಾದ ಅಲ್-ಬಾಸ್ಮಾ ಐವಿಎಫ್ ಕ್ಲಿನಿಕ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸುಮಾರು 5,000 ಸಂತಾನೋತ್ಪತ್ತಿ ಮಾದರಿಗಳು ನಾಶಗೊಂಡಿವೆ. ಫೆಲೆಸ್ತೀನೀಯರ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡೇ ಈ ದಾಳಿ ನಡೆಸಲಾಗಿದೆ ಎಂದು ಸ್ವತಂತ್ರ ಅಂತಾರಾಷ್ಟ್ರೀಯ ತನಿಖಾ ಆಯೋಗದ ವರದಿ ತಿಳಿಸಿದೆ.







