ಗಾಝಾವು ಭವಿಷ್ಯದ ಫೆಲೆಸ್ತೀನ್ ರಾಷ್ಟ್ರದ ಅವಿಭಾಜ್ಯ ಅಂಗ: ವಿಶ್ವಸಂಸ್ಥೆ ಸಹಾಯಕ ಮುಖ್ಯಸ್ಥ ಮಿರೊಸ್ಲಾವ್ ಜೆಂಕಾ

PC : news.un.org
ನ್ಯೂಯಾರ್ಕ್, ಆ.6: ಗಾಝಾ ಪಟ್ಟಿಯಾದ್ಯಂತ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸುವ ಇಸ್ರೇಲ್ ನ ಸಂಭವನೀಯ ನಿರ್ಧಾರದ ಕುರಿತ ವರದಿ ಒಂದು ವೇಳೆ ನಿಜವಾಗಿದ್ದರೆ ತೀವ್ರ ಆತಂಕಕಾರಿಯಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಗಾಝಾದಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಸಹಾಯಕ ಪ್ರಧಾನ ಕಾರ್ಯದರ್ಶಿ ಮಿರೊಸ್ಲಾವ್ ಜೆಂಕಾ `ಇಂತಹ ನಡೆಯು ದುರಂತದ ಪರಿಣಾಮಗಳ ಅಪಾಯಕ್ಕೆ ಕಾರಣವಾಗುತ್ತದೆ ಮತ್ತು ಗಾಝಾದಲ್ಲಿ ಉಳಿದಿರುವ ಒತ್ತೆಯಾಳುಗಳ ಜೀವಕ್ಕೆ ಮತ್ತಷ್ಟು ಅಪಾಯವನ್ನುಂಟು ಮಾಡುತ್ತದೆ' ಎಂದು ಕಳವಳ ವ್ಯಕ್ತಪಡಿಸಿದರು.
ಈ ವಿಷಯದಲ್ಲಿ ಅಂತರಾಷ್ಟ್ರೀಯ ಕಾನೂನು ಸ್ಪಷ್ಟವಾಗಿದೆ. ಗಾಝಾವು ಭವಿಷ್ಯದ ಫೆಲೆಸ್ತೀನ್ ರಾಷ್ಟ್ರದ ಅವಿಭಾಜ್ಯ ಅಂಗವಾಗಿದೆ ಮತ್ತು ಅಂಗವಾಗಿಯೇ ಉಳಿದಿದೆ ಎಂದ ಅವರು ಗಾಝಾದಲ್ಲಿ ಮುಂದುವರಿದಿರುವ ಹಿಂಸಾಚಾರ ಮತ್ತು ಮಾನವೀಯ ದುರಂತಗಳನ್ನು ಕೊನೆಗೊಳಿಸಲು ಹಾಗೂ ಎಲ್ಲಾ ಒತ್ತೆಯಾಳುಗಳ ತಕ್ಷಣ ಮತ್ತು ಬೇಷರತ್ ಬಿಡುಗಡೆಗೆ ಇರುವ ಏಕೈಕ ಮಾರ್ಗವೆಂದರೆ ಪೂರ್ಣ ಮತ್ತು ಶಾಶ್ವತ ಕದನ ವಿರಾಮ ಜಾರಿಯಾಗುವುದು' ಎಂದು ಮಿರೊಸ್ಲಾವ್ ಜೆಂಕಾ ಹೇಳಿದ್ದಾರೆ.
ಜೀವ ಉಳಿಸುವ ಮಾನವೀಯ ನೆರವು ಗಾಝಾಕ್ಕೆ ಪೂರ್ಣ ಪ್ರಮಾಣದಲ್ಲಿ ಅಡೆತಡೆಯಿಲ್ಲದೆ ಹರಿಯಬೇಕು ಮತ್ತು ನಾಗರಿಕರಿಗೆ ಸಹಾಯ ಪಡೆಯಲು ಸುರಕ್ಷಿತ, ಅಡೆತಡೆಯಿಲ್ಲದ ಪ್ರವೇಶವನ್ನು ಖಾತರಿಪಡಿಸಬೇಕು. ಗಾಝಾದಲ್ಲಿನ ಸಂಘರ್ಷಕ್ಕೆ ಅಥವಾ ವಿಶಾಲವಾದ ಇಸ್ರೇಲಿ-ಫೆಲೆಸ್ತೀನಿಯನ್ ಸಂಘರ್ಷಕ್ಕೆ ಯಾವುದೇ ಮಿಲಿಟರಿ ಪರಿಹಾರವಿಲ್ಲ. ಗಾಝಾದಲ್ಲಿನ ಮಾನವೀಯ ದುರಂತವನ್ನು ನಿವಾರಿಸಬಲ್ಲ ರಾಜಕೀಯ ಮತ್ತು ಭದ್ರತಾ ಚೌಕಟ್ಟುಗಳನ್ನು ನಾವು ಸ್ಥಾಪಿಸಬೇಕು. ಮರು ನಿರ್ಮಾಣ ಕಾರ್ಯವನ್ನು ಬೇಗನೇ ಆರಂಭಿಸಬೇಕು, ಇಸ್ರೇಲಿಯನ್ನರು ಮತ್ತು ಫೆಲೆಸ್ತೀನೀಯನ್ನರ ಕಾನೂನುಬದ್ಧ ಭದ್ರತಾ ಕಾಳಜಿಗಳ ಬಗ್ಗೆ ಗಮನ ಹರಿಸಬೇಕು, ಇಸ್ರೇಲ್ ನ ಕಾನೂನುಬಾಹಿರ ಆಕ್ರಮಣವನ್ನು ಕೊನೆಗೊಳಿಸಬೇಕು ಮತ್ತು ಸುಸ್ಥಿರ ಎರಡು ರಾಷ್ಟ್ರಗಳ ಪರಿಹಾರ ಸೂತ್ರವನ್ನು ಸಾಧಿಸಬೇಕು. ಇಸ್ರೇಲ್ ಮತ್ತು ಸಂಪೂರ್ಣ ಸ್ವತಂತ್ರ, ಪ್ರಜಾಸತ್ತಾತ್ಮಕ, ಕಾರ್ಯಸಾಧ್ಯವಾದ ಮತ್ತು ಸಾರ್ವಭೌಮ ಫೆಲೆಸ್ತೀನಿಯನ್ ರಾಷ್ಟ್ರ(ಗಾಝಾ ಅವಿಭಾಜ್ಯ ಅಂಗವಾಗಿರುವ) ಅಕ್ಕಪಕ್ಕದಲ್ಲಿ ಶಾಂತಿಯಿಂದ ಬದುಕುವ, ಸುಭದ್ರ ಮತ್ತು ಮಾನ್ಯತೆ ಹೊಂದಿರುವ ಗಡಿಗಳನ್ನು ಹೊಂದಿರುವ, ಜೆರುಸಲೇಂ ಎರಡೂ ದೇಶಗಳ ರಾಜಧಾನಿ ಆಗಿರುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ವಿಶ್ವಸಂಸ್ಥೆ ಸಹಾಯಕ ಮುಖ್ಯಸ್ಥರು ಪ್ರತಿಪಾದಿಸಿದ್ದಾರೆ.
► ಇಸ್ರೇಲ್ ಆರೋಪ
ಇದಕ್ಕೂ ಮುನ್ನ ಮಾತನಾಡಿದ್ದ ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾ'ರ್ `ಫೆಲೆಸ್ತೀನ್ ರಾಷ್ಟ್ರಕ್ಕೆ ಮಾನ್ಯತೆ ನೀಡುವುದಾಗಿ ಇತ್ತೀಚೆಗೆ ಕೆಲವು ರಾಷ್ಟ್ರಗಳು ನೀಡಿರುವ ಹೇಳಿಕೆ ಹಮಾಸ್ ಗುಂಪಿನೊಂದಿಗಿನ ಮಾತುಕತೆ ಒಪ್ಪಂದವನ್ನು ಹಾಳುಗೆಡವಿದೆ ಎಂದು ಆರೋಪಿಸಿದರು. `ಮಾತುಕತೆ ಸೂಕ್ಷ್ಮಹಂತದಲ್ಲಿದ್ದಾಗ ಈ ದೇಶಗಳ ಹೇಳಿಕೆಯು ಹಮಾಸ್ ಮೇಲೆ ಒತ್ತಡ ಹೇರುವ ಬದಲು ಇಸ್ರೇಲ್ ನ ಮೇಲೆ ಒತ್ತಡ ಹೇರುವ ಉದ್ದೇಶ ಹೊಂದಿತ್ತು. ಇದರಿಂದ ಹಮಾಸ್ ಈ ಯುದ್ಧವನ್ನು ಮುಂದುವರಿಸಲು ಪ್ರೋತ್ಸಾಹ ದೊರಕಿತು' ಎಂದು ಸಾ'ರ್ ಪ್ರತಿಪಾದಿಸಿದ್ದಾರೆ.
ಸೆಪ್ಟಂಬರ್ ನಲ್ಲಿ ಫೆಲೆಸ್ತೀನಿಯನ್ ರಾಷ್ಟ್ರಕ್ಕೆ ಮಾನ್ಯತೆ ನೀಡುವುದಾಗಿ ಬ್ರಿಟನ್, ಫ್ರಾನ್ಸ್, ಕೆನಡಾ ಹಾಗೂ ಇತರ ಕೆಲವು ದೇಶಗಳು ಕಳೆದ ತಿಂಗಳು ಘೋಷಿಸಿವೆ.







