ಗಾಝಾ: ಇಸ್ರೇಲ್ ದಾಳಿಯಲ್ಲಿ ಕನಿಷ್ಠ 34 ಮಂದಿ ಸಾವು

Photo | PTI (ಸಾಂದರ್ಭಿಕ ಚಿತ್ರ)
ಗಾಝಾ, ಜು.28: ಗಾಝಾದ್ಯಂತ ಸೋಮವಾರ ಹಲವು ಸ್ಥಳಗಳಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 34 ಫೆಲೆಸ್ತೀನೀಯರು ಸಾವನ್ನಪ್ಪಿರುವುದಾಗಿ ಸ್ಥಳೀಯ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ಮಧ್ಯ ಗಾಝಾದಲ್ಲಿ ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ಮಾನವೀಯ ನೆರವು ವಿತರಣಾ ಕೇಂದ್ರದ ಬಳಿ ಸೋಮವಾರ ಇಸ್ರೇಲ್ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ 7 ಫೆಲೆಸ್ತೀನೀಯರು ಸಾವನ್ನಪ್ಪಿದ್ದು ಇತರ 20 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಆಸ್ಪತ್ರೆಯ ಮೂಲಗಳು ಹೇಳಿವೆ. ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರದ ಪಶ್ಚಿಮದಲ್ಲಿರುವ ಮುವಾಸಿ ಪ್ರದೇಶದಲ್ಲಿನ ಮನೆಯೊಂದರ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ 7 ತಿಂಗಳ ಗರ್ಭಿಣಿ ಮಹಿಳೆ ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದಾರೆ. ಸಂಕೀರ್ಣ ಶಸ್ತ್ರಚಿಕಿತ್ಸೆಯಲ್ಲಿ ಮಹಿಳೆಯ ಭ್ರೂಣವನ್ನು ಬದುಕಿಸಲಾಗಿದೆ ಎಂದು ಫೆಲೆಸ್ತೀನಿಯನ್ ರೆಡ್ಕ್ರೆಸೆಂಟ್ ಅಧಿಕಾರಿಗಳು ಹೇಳಿದ್ದಾರೆ. ಖಾನ್ ಯೂನಿಸ್ ನಗರದ ಹೊರವಲಯದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಎರಡು ಅಂತಸ್ತಿನ ಮನೆಗೆ ಹಾನಿಯಾಗಿದ್ದು ಮಹಿಳೆಯರು, ಮಕ್ಕಳು ಸೇರಿದಂತೆ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ. ಇದೇ ಪ್ರದೇಶದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಕನಿಷ್ಠ 4 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.





