ಗ್ರೆಟಾ ಥನ್ಬರ್ಗ್ ಸೇರಿದಂತೆ ಸಾಮಾಜಿಕ ಕಾರ್ಯಕರ್ತರಿದ್ದ ನೌಕೆಯನ್ನು ಗಾಝಾಗೆ ತೆರಳದಂತೆ ತಡೆದ ಇಸ್ರೇಲ್ ಪಡೆಗಳು

Photo credit: AP
ಜೆರುಸಲೇಂ: ಗಾಝಾಕ್ಕೆ ನೆರವು ಸಾಗಿಸುತ್ತಿದ್ದ ಗ್ರೆಟಾ ಥನ್ಬರ್ಗ್ ಹಾಗೂ ಇತರ ಪ್ರಮುಖ ಕಾರ್ಯಕರ್ತರಿದ್ದ ನೌಕೆಯನ್ನು ಇಸ್ರೇಲ್ ತಡೆದಿದ್ದು ನೌಕೆಯಲ್ಲಿದ್ದವರನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಕಾರ್ಯಕರ್ತರಿದ್ದ ನೌಕೆಯನ್ನು ಇಸ್ರೇಲ್ಗೆ ಕರೆದೊಯ್ಯಲಾಗಿದೆ. `ಸೆಲೆಬ್ರಿಟಿಗಳ ಸೆಲ್ಫೀ ವಿಹಾರ ನೌಕೆ' ಸುರಕ್ಷಿತವಾಗಿ ಗಾಝಾ ತೀರಕ್ಕೆ ಹೋಗುತ್ತಿದೆ ಎಂದು ವಿದೇಶಾಂಗ ಇಲಾಖೆಯ ಮೂಲಗಳು ಸೋಮವಾರ ಬೆಳಿಗ್ಗೆ ಹೇಳಿದೆ.
ಮಾನವ ಹಕ್ಕುಗಳ ಸಂಸ್ಥೆ ನಿರ್ವಹಿಸುವ ಹಡಗು ಗಾಝಾ ಪಟ್ಟಿಯ ನಿವಾಸಿಗಳಿಗೆ ಆಹಾರ, ಔಷಧ ಹಾಗೂ ಇತರ ನೆರವು ಸಾಮಾಗ್ರಿಗಳನ್ನು ಒದಗಿಸುವ ಗುರಿ ಹೊಂದಿತ್ತು. `ನೌಕೆಯು ಇಸ್ರೇಲ್ನ ತೀರದತ್ತ ಸುರಕ್ಷಿತವಾಗಿ ಸಾಗುತ್ತಿದೆ. ಅದರಲ್ಲಿದ್ದ ಪ್ರಯಾಣಿಕರು ತಮ್ಮ ದೇಶಗಳಿಗೆ ಮರಳುವ ನಿರೀಕ್ಷೆಯಿದೆ' ಎಂದು ವಿದೇಶಾಂಗ ಇಲಾಖೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ನೌಕೆಯು ಗಾಝಾ ಪ್ರದೇಶ ತಲುಪುವುದನ್ನು ತಡೆಯಬೇಕೆಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಇಸ್ರೇಲ್ ಪಡೆಗಳಿಗೆ ಆದೇಶಿಸಿದ್ದರು. ಗಾಝಾದಲ್ಲಿ ಸಮುದ್ರ ತೀರವನ್ನು ತಲುಪುವ ಮೊದಲೇ ಇಸ್ರೇಲ್ ಯೋಧರು ನೌಕೆಯೊಳಗೆ ಪ್ರವೇಶಿಸಿದ್ದರು ಎಂದು ಮಾನವ ಹಕ್ಕುಗಳ ಸಂಘಟನೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ಇಸ್ರೇಲ್ ವಿದೇಶಾಂಗ ಸಚಿವಾಲಯ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಇಸ್ರೇಲ್ ಪಡೆಗಳು ನೌಕೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಲೈಫ್ ಜಾಕೆಟ್ಗಳನ್ನು ಧರಿಸಿದ್ದ ಸಾಮಾಜಿಕ ಕಾರ್ಯಕರ್ತರಿಗೆ ಉಪಹಾರಗಳನ್ನು ಒದಗಿಸುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದೆ. ʼಇದು ಪ್ರಚಾರದ ಭಾಗ ಎಂದು ಹೇಳಿದ ಇಸ್ರೇಲ್ ಸೇನೆ, ಹಡಗಿನಲ್ಲಿರುವ ನೆರವು ಸಾಮಾಗ್ರಿಗಳು ಒಂದೇ ಟ್ರಕ್ ಲೋಡ್ಗಿಂತ ಕಡಿಮೆ ಇದೆʼ ಎಂದು ಹೇಳಿಕೊಂಡಿದೆ.
ಬ್ರಿಟನ್ ಧ್ವಜ ಹೊಂದಿದ್ದ ಮಾಡ್ಲೀನ್ ನೌಕೆಯನ್ನು ಸೋಮವಾರ ಬೆಳಿಗ್ಗೆ ಇಸ್ರೇಲ್ ಪಡೆಗಳು ತಡೆದಿದ್ದು ಗಾಝಾ ಪ್ರವೇಶಿಸುವ ಸಮುದ್ರ ಮಾರ್ಗಕ್ಕೆ ಇಸ್ರೇಲ್ ಪಡೆಗಳು ವಿಧಿಸಿದ್ದ ತಡೆಯನ್ನು ಬೇಧಿಸುವ ಪ್ರಯತ್ನ ನಡೆಸಿದ್ದ ಸ್ವೀಡನ್ನ ಮಾನವ ಹಕ್ಕುಗಳ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಹಾಗೂ ಇತರ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇಟಲಿಯ ಸಿಸಿಲಿ ದ್ವೀಪದಿಂದ ಜೂನ್ 1ರಂದು ನಿರ್ಗಮಿಸಿದ್ದ `ಫ್ರೀಡಂ ಫ್ಲೊಟಿಲಾ ಕೋಲಿಷನ್' ನೌಕೆಯು ಗಾಝಾ ಪ್ರದೇಶದಲ್ಲಿ ಅಕ್ಕಿ, ವೈದ್ಯಕೀಯ ಸರಬರಾಜು ಸೇರಿದಂತೆ ಸಾಂಕೇತಿಕ ನೆರವು ವಿತರಿಸುವ ಉದ್ದೇಶ ಹೊಂದಿತ್ತು. ನೌಕೆಯಲ್ಲಿದ್ದವರಿಗೆ ಸ್ಯಾಂಡ್ವಿಚ್ ಮತ್ತು ನೀರು ಒದಗಿಸಲಾಗಿದೆ. ನೌಕೆಯಲ್ಲಿರುವ ಸಣ್ಣ ಪ್ರಮಾಣದ ನೆರವಿನ ಸರಕುಗಳನ್ನು ನಿಜವಾದ ಮಾನವೀಯ ವ್ಯವಸ್ಥೆಗಳ ಮೂಲಕ ಗಾಝಾಕ್ಕೆ ವರ್ಗಾಯಿಸಲಾಗುವುದು ಎಂದು ಇಸ್ರೇಲ್ ಸರಕಾರ ಹೇಳಿದೆ.
ಮಾಲ್ದೀನ್ ನೌಕೆಯ ಸಿಬ್ಬಂದಿಗಳನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಕ್ರಮಿತ ಫೆಲಸ್ತೀನ್ ಪ್ರಾಂತಗಳಿಗೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಫ್ರಾನ್ಸೆಸ್ಕಾ ಅಲ್ಬಾನೀಸ್ ಆಗ್ರಹಿಸಿದ್ದಾರೆ.