ಗಾಝಾ ಕದನ ವಿರಾಮ | ಇಸ್ರೇಲ್ ಸೈನ್ಯ ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ : ಮನೆಗಳತ್ತ ವಾಪಸಾಗುತ್ತಿರುವ ಫೆಲೆಸ್ತೀನ್ ನಾಗರಿಕರು

Photo Credit : aljazeera.com
ಗಾಝಾ, ಅ.10: ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಶುಕ್ರವಾರ ಮಧ್ಯಾಹ್ನದಿಂದ ಜಾರಿಗೆ ಬಂದಿದ್ದು ಗಾಝಾದ್ಯಂತ ಹಲವು ಪ್ರದೇಶಗಳಿಂದ ಇಸ್ರೇಲ್ ಪಡೆಗಳು ಹಿಂದಕ್ಕೆ ಸರಿಯುತ್ತಿರುವುದಾಗಿ ವರದಿಯಾಗಿದೆ.
ಶುಕ್ರವಾರ ಮಧ್ಯಾಹ್ನ(ಸ್ಥಳೀಯ ಕಾಲಮಾನ)ದಿಂದ ಗುಂಡಿನ ದಾಳಿಯನ್ನು ನಿಲ್ಲಿಸಿದ್ದು ಪೂರ್ವ ಸಮ್ಮತಿಸಿದ ಸ್ಥಾನಗಳಿಗೆ ಸೈನ್ಯವನ್ನು ಹಿಂಪಡೆಯುತ್ತಿರುವುದಾಗಿ ಇಸ್ರೇಲ್ ಸೇನೆ ದೃಢಪಡಿಸಿದೆ. ಆದರೆ ಹಮಾಸ್ ನಿಶ್ಯಸ್ತ್ರಗೊಳಿಸುವವರೆಗೆ ಐಡಿಎಫ್ ಗಾಝಾ ಪಟ್ಟಿಯಲ್ಲಿ ಉಳಿಯಲಿದೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ.
ಈ ಕ್ರಮವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ನಡೆದ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕ್ರಿಯೆಯಾಗಿದೆ. ಕದನ ವಿರಾಮ, ಒತ್ತೆಯಾಳುಗಳು, ಕೈದಿಗಳ ವಿನಿಮಯ ಪ್ರಥಮ ಹಂತದಲ್ಲಿ ನಡೆಯಲಿದೆ. ಯೋಜನೆಯ ರೂಪರೇಖೆಯನ್ನು ಇಸ್ರೇಲ್ ಸಂಪುಟ ಅನುಮೋದಿಸಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಹೇಳಿದೆ. ಆದರೆ ಗಾಝಾದ ಆಡಳಿತವನ್ನು ಯಾರು ನಿಯಂತ್ರಿಸುತ್ತಾರೆ, ಹಮಾಸ್ ನಿಶ್ಯಸ್ತ್ರವಾಗುತ್ತದೆಯೇ (ಶಸ್ತ್ರಾಸ್ತ್ರ ಕೆಳಗಿಡುತ್ತದೆಯೇ) ಇತ್ಯಾದಿ ಪ್ರಮುಖ ಅಂಶಗಳು ಬಗೆಹರಿಯದೆ ಉಳಿದಿವೆ.
ಕದನ ವಿರಾಮದ ಒಪ್ಪಂದಕ್ಕೆ ಅನುಗುಣವಾಗಿ ದಕ್ಷಿಣ ಕಮಾಂಡ್ನ ತುಕಡಿಗಳನ್ನು ಮತ್ತೊಂದು ಸ್ಥಳಕ್ಕೆ ಸರಿಸಲಾಗಿದೆ ಮತ್ತು ಯಾವುದೇ ತಕ್ಷಣದ ಬೆದರಿಕೆಯನ್ನು ನಿವಾರಿಸಲು ಗರಿಷ್ಠ ಎಚ್ಚರಿಕೆಯ ಸ್ಥಿತಿಯಲ್ಲಿವೆ ಎಂದು ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಸಾಮಾಜಿಕ ಮಾಧ್ಯಮದಲ್ಲಿ ದೃಢಪಡಿಸಿದೆ.
ಶಸ್ತ್ರಸಜ್ಜಿತ ವಾಹನಗಳು ಮತ್ತು ಯೋಧರು ಗಾಝಾ ನಗರದ ಕೆಲವು ಭಾಗಗಳು ಮತ್ತು ಖಾನ್ ಯೂನಿಸ್ನಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಹೇಳಿದೆ.
ಈ ಮಧ್ಯೆ, ಟಿವಿ ವಾಹಿನಿಯಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಇಸ್ರೇಲ್ ಪ್ರಧಾನಿ ನೆತನ್ಯಾಹು, ಸೋಮವಾರ ರಾತ್ರಿಯಿಂದ ಆರಂಭಗೊಳ್ಳುವ ಸಿಮ್ಹಾತ್ ತೊರಾಹ್ ಉತ್ಸವವು ಒತ್ತೆಯಾಳುಗಳ ವಾಪಸಾತಿಯೊಂದಿಗೆ ರಾಷ್ಟ್ರೀಯ ಸಂತಸದ ದಿನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕದನ ವಿರಾಮದ ಹೊರತಾಗಿಯೂ ಒಂದು ವೇಳೆ ಹಮಾಸ್ ಒಪ್ಪಂದದ ನಿಯಮಗಳನ್ನು ಅನುಸರಿಸದಿದ್ದರೆ ಯುದ್ಧ ಪುನರಾರಂಭಗೊಳ್ಳಬಹುದು. ಹಮಾಸ್ ನಿಶಸ್ತ್ರಗೊಳ್ಳಲೇಬೇಕು ಮತ್ತು ಗಾಝಾ ಮಿಲಿಟರಿ ರಹಿತ ಪ್ರದೇಶವಾಗಿರಬೇಕು. ಇದನ್ನು ಸುಲಭ ಮಾರ್ಗದಲ್ಲಿ ಸಾಧಿಸಿದರೆ ಅದ್ಭುತವಾಗಿರುತ್ತದೆ. ಇಲ್ಲದಿದ್ದರೆ ಅದನ್ನು ಕಠಿಣ ಮಾರ್ಗದ ಮೂಲಕ ಸಾಧಿಸಲಾಗುತ್ತದೆ. ಇಸ್ರೇಲ್ನ ಷರತ್ತುಗಳನ್ನು ಪೂರೈಸದಿದ್ದರೆ ಕದನ ವಿರಾಮ ತಾತ್ಕಾಲಿಕವಾಗಿರುತ್ತದೆ' ಎಂದು ನೆತನ್ಯಾಹು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ಮನೆಯತ್ತ ಹಿಂದಿರುಗುತ್ತಿರುವ ಫೆಲೆಸ್ತೀನ್ ನಾಗರಿಕರು
ಎರಡು ವರ್ಷಗಳ ತೀವ್ರ ಸಂಘರ್ಷದಿಂದ ಸ್ಥಳಾಂತರಗೊಂಡಿರುವ ಸಾವಿರಾರು ಫೆಲೆಸ್ತೀನ್ ನಾಗರಿಕರು ಕದನ ವಿರಾಮ ಜಾರಿಗೊಳ್ಳುತ್ತಿದ್ದಂತೆಯೇ ಗಾಝಾದ ನದಿ ತೀರ ಪ್ರದೇಶದ ಮೂಲಕ ತಮ್ಮ ಮನೆಯತ್ತ ಹಿಂತಿರುಗುತ್ತಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಸ್ಥಳೀಯ ಕಾಲಮಾನ ಶುಕ್ರವಾರ ಮಧ್ಯಾಹ್ನ ಮಧ್ಯ ಗಾಝಾದ ವಾಡಿ ಗಾಝಾದಲ್ಲಿ ಒಟ್ಟು ಸೇರಿದ ಹತ್ತಾರು ಸಾವಿರ ಜನರು ಕದನ ವಿರಾಮ ಜಾರಿಗೊಂಡ ಮಾಹಿತಿ ತಿಳಿಯುತ್ತಿದ್ದಂತೆಯೇ ತಮ್ಮ ಮನೆಯತ್ತ ಹೊರಟಿದ್ದಾರೆ ಎಂದು ವರದಿ ಹೇಳಿದೆ.
ಅಂತಿಮ ಕ್ಷಣದವರೆಗೂ ಇಸ್ರೇಲ್ ಬಾಂಬ್ ದಾಳಿ : ವರದಿ
ಶುಕ್ರವಾರ ಬೆಳಗ್ಗಿನವರೆಗೂ ಗಾಝಾದ ಹಲವು ಪ್ರದೇಶಗಳಲ್ಲಿ ಇಸ್ರೇಲ್ ಸೇನೆ ತೀವ್ರ ವೈಮಾನಿಕ ದಾಳಿ ಮುಂದುವರಿಸಿದೆ. ಆದರೆ ಕದನ ವಿರಾಮ ಜಾರಿಗೆ ಬಂದ ಬಳಿಕ ಬಾಂಬ್ ದಾಳಿಯ ವರದಿಯಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಅಲ್-ಜಝೀರಾ ಶುಕ್ರವಾರ ವರದಿ ಮಾಡಿದೆ.
ಗಾಝಾ ನಗರದ ಪೂರ್ವದ ಸ್ಥಳದಲ್ಲಿ ಇಸ್ರೇಲ್ ಪಡೆ ಹೆಲಿಕಾಪ್ಟರ್ಗಳ ಮೂಲಕ ಮಾರಣಾಂತಿಕ ದಾಳಿ ಮತ್ತು ದಕ್ಷಿಣದ ಖಾನ್ ಯೂನಿಸ್ ಪ್ರದೇಶದಲ್ಲಿ ವೈಮಾನಿಕ ದಾಳಿ ಮತ್ತು ಟ್ಯಾಂಕ್ ಮೂಲಕ ಗುಂಡಿನ ದಾಳಿ ನಡೆಸಿದೆ. ಶುಕ್ರವಾರ ಬೆಳಗ್ಗಿನಿಂದ ಗಾಝಾ ನಗರದ ಹಲವು ಪ್ರದೇಶಗಳಿಂದ 7 ಜನರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ ಎಂದು ಗಾಝಾ ನಗರದ ಅಲ್-ಅಹ್ಲಿ ಆಸ್ಪತ್ರೆಯ ಮೂಲಗಳು ಹೇಳಿವೆ.







