ಗಾಝಾ ಕದನವಿರಾಮದ ಸನಿಹದಲ್ಲಿದೆ: ಟ್ರಂಪ್

ಡೊನಾಲ್ಡ್ ಟ್ರಂಪ್ | PTI
ಜೆರುಸಲೇಂ: ಗಾಝಾದಲ್ಲಿ ಇಸ್ರೇಲ್-ಹಮಾಸ್ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಭಾರೀ ಪ್ರಗತಿ ಸಾಧಿಸಲಾಗಿದೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಿಳಿಸಿದ್ದಾರೆ. ನೆದರ್ ಲ್ಯಾಂಡ್ನ ಹೇಗ್ನಲ್ಲಿ ಸುದ್ದಿಗಾರರ ನಡೆದ ನ್ಯಾಟೋ ಶೃಂಗಸಭೆಯ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಝಾವು ಕದನವಿರಾಮಕ್ಕೆ ಅತ್ಯಂತ ಸನಿಹದಲ್ಲಿದೆ ಎಂದು ತನ್ನ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ತಿಳಿಸಿರುವುದಾಗಿ ಹೇಳಿದರು.
ಇಸ್ರೇಲ್ ಹಾಗೂ ಹಮಾಸ್ ನ ಬೆಂಬಲಿಗನಾಗಿರುವ ಇರಾನ್ ನಡುವೆ 12 ದಿನಗಳ ಭೀಕರ ಯುದ್ಧ ನಡೆದ ಬಳಿಕ ಕದನವಿರಾಮ ಏರ್ಪಟ್ಟ ಬಳಿಕ ಗಾಝಾಪಟ್ಟಿ ಪ್ರದೇಶದ ಜನರಿಗೂ ಅತ್ಯಂತ ಶುಭ ಸುದ್ದಿ ದೊರೆಯಲಿದೆ ಎಂಬ ಆಶಾವಾದವನ್ನು ತಾನು ಹೊಂದಿರುವುದಾಗಿ ಟ್ರಂಪ್ ತಿಳಿಸಿದರು.
ಇರಾನ್ ಹಾಗೂ ಇಸ್ರೇಲ್ ನಡುವೆ ಕದನವಿರಾಮಕ್ಕೆ ಸಂಬಂಧಿಸಿ ಮುಂದಿನ ವಾರ ಮಾತುಕತೆ ನಡೆಯಲಿದೆ. ಈ ಸಂದರ್ಭದಲ್ಲಿ ಒಪ್ಪಂದವೊಂದು ಏರ್ಪಡಲೂ ಬಹುದು ಎಂದು ಅವರು ಹೇಳಿದರು. ಅಮೆರಿಕ ನಡೆಸಿದ ದಾಳಿಗಳು ಇರಾನ್ನ ಅಣುಸ್ಥಾವರಗಳನ್ನು ನ ಾಶಪಡಿಸಿರುವುದರಿಂದ ಆ ದೇಶದ ಜೊತೆ ಅಣುಶಕ್ತಿ ಕಾರ್ಯಕ್ರಮದ ಕುರಿತಾಗಿ ಮಾತುಕತೆಗಳನ್ನು ಪುನಾರಂಭಿಸುವುದಕ್ಕೆ ತಾನು ಆಸಕ್ತಿ ಹೊಂದಿಲ್ಲವೆಂದರು.
ಅಮೆರಿಕ ಅಧ್ಯಕ್ಷರ ಈ ಹೇಳಿಕೆಯು, ಒಂದು ವೇಳೆ ಇರಾನ್ ಅಣುಶಕ್ತಿ ಕಾರ್ಯಕ್ರಮವನ್ನು ಕೈಬಿಡದಿದ್ದರೂ, ಆ ಪ್ರದೇಶದಲ್ಲಿ ದೀರ್ಘಕಾಲದವರೆಗೆ ಶಾಂತಿ ಸ್ಥಾಪನೆಯಾಗುವ ಬಗ್ಗೆ ಭರವಸೆ ಮೂಡಿಸಿದೆಯೆಂದು ವಿಶ್ಲೇಷಕರು ತಿಳಿಸಿದ್ದಾರೆ.







