ಗಾಝಾ ಸ್ಥಳಾಂತರದ ಯೋಜನೆ ನರಮೇಧದ ಹೊಸ ಅಲೆ

ಸಾಂದರ್ಭಿಕ ಚಿತ್ರ|PC : Reuters
ಗಾಝಾ, ಆ.18: ಗಾಝಾ ನಗರದಿಂದ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಇಸ್ರೇಲ್ ನ ಯೋಜನೆಯನ್ನು ಹಮಾಸ್ ತಿರಸ್ಕರಿಸಿದ್ದು ಈ ಯೋಜನೆಯು ಪ್ರದೇಶದ ಸಾವಿರಾರು ನಿವಾಸಿಗಳಿಗೆ ಸ್ಥಳಾಂತರ ಮತ್ತು ನರಮೇಧದ ಹೊಸ ಅಲೆಯಾಗಿದೆ ಎಂದು ಟೀಕಿಸಿದೆ.
ಯುದ್ಧ ವಲಯಗಳಿಂದ ನಿವಾಸಿಗಳನ್ನು `ಅವರ ಸುರಕ್ಷತೆಯನ್ನು ಖಚಿತರಿಪಡಿಸಿಕೊಳ್ಳಲು' ಗಾಝಾ ಪಟ್ಟಿಯ ದಕ್ಷಿಣಕ್ಕೆ ಸ್ಥಳಾಂತರಿಸುವ ಯೋಜನೆಯ ಪೂರ್ವಭಾವಿ ಕ್ರಮವಾಗಿ ಟೆಂಟ್ಗಳು ಹಾಗೂ ಇತರ ಸಾಧನಗಳನ್ನು ಒದಗಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿತ್ತು. ಇದರ ಬೆನ್ನಲ್ಲೇ ಗಾಝಾ ನಗರದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಹೊಸ ಆಕ್ರಮಣವನ್ನು ಪ್ರಾರಂಭಿಸಲು ಉದ್ದೇಶಿಸಿರುವುದಗಿ ಇಸ್ರೇಲ್ ಘೋಷಿಸಿತ್ತು.
ದಕ್ಷಿಣ ಗಾಝಾಗೆ ಇಸ್ರೇಲಿನಿಂದ ಡೇರೆಗಳು ಹಾಗೂ ಇತರ ಆಶ್ರಯ ಸಾಧನಗಳ ಯೋಜಿತ ನಿಯೋಜನೆಯು `ಆಕ್ರಮಣ ಪಡೆಗಳು ಕಾರ್ಯಗತಗೊಳಿಸಲು ಸಿದ್ಧಪಡಿಸುವ ಕ್ರೂರ ಅಪರಾಧವನ್ನು ಮುಚ್ಚಿಡುವ ಕಪಟ ನಾಟಕವಾಗಿದೆ' ಎಂದು ಹಮಾಸ್ ಟೀಕಿಸಿದೆ.
ಮಿಲಿಟರಿ ಕಾರ್ಯಾಚರಣೆಯನ್ನು ಗಾಝಾ ನಗರ ಮತ್ತು ಸುತ್ತಮುತ್ತಲಿನ ನಿರಾಶ್ರಿತರ ಶಿಬಿರಗಳಲ್ಲಿ ವಿಸ್ತರಿಸುವ ಇಸ್ರೇಲ್ ನ ಯೋಜನೆಗೆ ಅಂತರಾಷ್ಟ್ರೀಯ ಸಮುದಾಯದಿಂದ ವ್ಯಾಪಕ ಖಂಡನೆಯ ಜೊತೆಗೆ ಸ್ವದೇಶದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.
ಯುದ್ಧದಿಂದ ಜರ್ಝರಿತಗೊಂಡಿರುವ ಗಾಝಾದಿಂದ ದಕ್ಷಿಣ ಸುಡಾನ್ಗೆ ಫೆಲೆಸ್ತೀನೀಯರ ಸಂಭಾವ್ಯ ಸ್ಥಳಾಂತರದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಕಳೆದ ವಾರ `ರಾಯ್ಟರ್ಸ್' ವರದಿ ಮಾಡಿತ್ತು. ಇದುವರೆಗೆ ಯಾವುದೇ ಒಪ್ಪಂದ ಏರ್ಪಟ್ಟಿಲ್ಲ, ಆದರೆ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ.







