ಗಾಝಾದ ಆಡಳಿತದಲ್ಲಿ ಹಮಾಸ್ ಭಾಗಿಯಾಗುವುದಕ್ಕೆ ಸಮ್ಮತಿಸುವುದಿಲ್ಲ : ಅಮೆರಿಕ

ಮಾರ್ಕೊ ರೂಬಿಯೊ | Credit : NDTV
ಟೆಲ್ಅವೀವ್, ಅ.25: ಗಾಝಾದಲ್ಲಿ ನೆರವು ವಿತರಿಸುವಲ್ಲಿ ಫೆಲೆಸ್ತೀನಿಯನ್ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಏಜೆನ್ಸಿ(ಯುಎನ್ಆರ್ಡಬ್ಲ್ಯೂಎ) ಯಾವುದೇ ಪಾತ್ರವನ್ನು ನಿರ್ವಹಿಸುವುದಿಲ್ಲ. ಅಂತೆಯೇ ಗಾಝಾ ಪಟ್ಟಿಯ ಯಾವುದೇ ಭವಿಷ್ಯದ ಆಡಳಿತದಲ್ಲಿ ಹಮಾಸ್ ಭಾಗಿಯಾಗುವ ಸಾಧ್ಯತೆಯನ್ನು ಅಮೆರಿಕಾ ತಿರಸ್ಕರಿಸುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ.
ಟೆಲ್ಅವೀವ್ನಲ್ಲಿ ಇಸ್ರೇಲ್ ನಿಯೋಗದ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೂಬಿಯೊ
`ಯುಎನ್ಆರ್ಡಬ್ಲ್ಯೂಎ ಹಮಾಸ್ನ ಅಂಗ ಸಂಸ್ಥೆಯಾಗಿರುವುದರಿಂದ ಗಾಝಾದಲ್ಲಿ ನೆರವು ವಿತರಣೆಯಲ್ಲಿ ಅದು ಒಳಗೊಳ್ಳುವಂತಿಲ್ಲ' ಎಂದು ಪ್ರತಿಪಾದಿಸಿದರು. ಗಾಝಾ ಪಟ್ಟಿಯಲ್ಲಿ ಮುಂದಿನ ದಿನದ ಆಡಳಿತದಲ್ಲಿ ಹಮಾಸ್ಗೆ ಯಾವುದೇ ಪಾತ್ರವಿರುವುದಿಲ್ಲ. ಫೆಲೆಸ್ತೀನಿಯನ್ ಪ್ರಾಧಿಕಾರ(ಪಿಎ)ದ ಸಂಭಾವ್ಯ ಪಾತ್ರವನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ರೂಬಿಯೊ ಹೇಳಿದ್ದಾರೆ. ಗಾಝಾದಲ್ಲಿ ಕದನ ವಿರಾಮದ `ರಕ್ಷಣೆ'ಗಾಗಿ ಅಂತರಾಷ್ಟ್ರೀಯ ಭದ್ರತಾ ಪಡೆ ಶೀಘ್ರದಲ್ಲೇ ರಚನೆಯಾಗಲಿದೆ. ಇಸ್ರೇಲ್ ವಿಶ್ವಾಸವಿರಿಸಿರುವ ದೇಶಗಳ ತುಕಡಿಗಳು ಮಾತ್ರ ಈ ಪಡೆಯಲ್ಲಿ ಸೇರಲಿವೆ ಎಂದು ರೂಬಿಯೊ ಸ್ಪಷ್ಟಪಡಿಸಿದ್ದಾರೆ.
ರೂಬಿಯೊ ಹೇಳಿಕೆಗೆ ಪ್ರತಿಕ್ರಿಯಿಸಿರುವ ಯುಎನ್ಆರ್ಡಬ್ಲ್ಯೂಎ` ಬಾಂಬ್ ದಾಳಿಯಿಂದ ಜರ್ಝರಿತಗೊಂಡಿರುವ ಮತ್ತು ಹಸಿವಿನಿಂದ ಬಳಲುತ್ತಿರುವ ಗಾಝಾ ಪ್ರದೇಶದಲ್ಲಿ ತುರ್ತು ಮಾನವೀಯ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಲು ವಿಶ್ವಸಂಸ್ಥೆ ಏಜೆನ್ಸಿಯ ಉಪಸ್ಥಿತಿಯು ಅತ್ಯಗತ್ಯವಾಗಿದೆ. ಗಾಝಾದ ಜನರನ್ನು ಬೆಂಬಲಿಸುವಲ್ಲಿ ಯುಎನ್ಆರ್ಡಬ್ಲ್ಯೂಎ ಪಾತ್ರವನ್ನು ಯಾವುದೇ ಸಂಸ್ಥೆಯು ಬದಲಿಸಲು ಸಾಧ್ಯವಿಲ್ಲ ಎಂದು ಅಂತರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ಹೇಳಿದೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ಕದನ ವಿರಾಮ ಮೇಲ್ವಿಚಾರಣೆಗೆ ಡ್ರೋನ್ ಬಳಸಿದ ಅಮೆರಿಕ
ಇಸ್ರೇಲ್ ಮತ್ತು ಹಮಾಸ್ ಎರಡೂ ಕದನ ವಿರಾಮದ ನಿಯಮಾವಳಿಯನ್ನು ಪಾಲಿಸುತ್ತಿವೆ ಎಂದು ಖಚಿತಪಡಿಸಿಕೊಳ್ಳಲು ಅಮೆರಿಕ ಗಾಝಾ ಪಟ್ಟಿಯ ಮೇಲೆ ಕಣ್ಗಾವಲು ಡ್ರೋನ್ಗಳನ್ನು ಹಾರಿಸುತ್ತಿದೆ ಎಂದು ವರದಿಯಾಗಿದೆ.
ಗಾಝಾದಲ್ಲಿನ ಪರಿಸ್ಥಿತಿಯನ್ನು ಪ್ರತ್ಯಕ್ಷವಾಗಿ ಪರಿಶೀಲಿಸುವ ಉದ್ದೇಶದಿಂದ, ಇಸ್ರೇಲ್ನ ಸಮ್ಮತಿಯೊಂದಿಗೆ ಅಮೆರಿಕಾದ ಕಣ್ಗಾವಲು ಡ್ರೋನ್ಗಳು ಗಾಝಾ ಪಟ್ಟಿಯಲ್ಲಿ ಹಾರಾಟ ನಡೆಸಿವೆ. ಕದನ ವಿರಾಮದ ಪ್ರಯತ್ನಗಳನ್ನು ನಿಯಂತ್ರಣದಲ್ಲಿಡಲು ದಕ್ಷಿಣ ಇಸ್ರೇಲ್ನಲ್ಲಿ ಕಳೆದ ವಾರ ಅಮೆರಿಕಾದ ಸೆಂಟ್ರಲ್ ಕಮಾಂಡ್ ಸ್ಥಾಪಿಸಿದ ನಾಗರಿಕ-ಮಿಲಿಟರಿ ಸಮನ್ವಯ ಕೇಂದ್ರದ ಕಾರ್ಯಗಳನ್ನು ಬೆಂಬಲಿಸಲು ಡ್ರೋನ್ಗಳನ್ನು ಬಳಸಲಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ `ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.
ಗಾಝಾದಲ್ಲಿ ಅಂತರಾಷ್ಟ್ರೀಯ ಪಡೆಯ ತ್ವರಿತ ನಿಯೋಜನೆಯ ನಿರೀಕ್ಷೆ: ರೂಬಿಯೊ
ಯುದ್ಧಾನಂತರ ಗಾಝಾದ ನಿರ್ವಹಣೆಯನ್ನು ತಂತ್ರಜ್ಞರ ಸ್ವತಂತ್ರ ಸಮಿತಿ ವಹಿಸಿಕೊಳ್ಳುವುದಕ್ಕೆ ಹಮಾಸ್ ಸೇರಿದಂತೆ ಪ್ರಮುಖ ಫೆಲೆಸ್ತೀನಿಯನ್ ಬಣಗಳು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಗಾಝಾದಲ್ಲಿ ಕದನ ವಿರಾಮದ ಆರಕ್ಷಣೆಗಾಗಿ ತ್ವರಿತವಾಗಿ ಅಂತರಾಷ್ಟ್ರೀಯ ಪಡೆಯನ್ನು ನಿಯೋಜಿಸುವ ನಿರೀಕ್ಷೆಯಿದೆ ಎಂದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ.
ಕದನ ವಿರಾಮ ಒಪ್ಪಂದವನ್ನು ಗೌರವಿಸಲು ಇಸ್ರೇಲ್ ಮತ್ತು ಹಮಾಸ್ ಗುಂಪಿನ ಮನವೊಲಿಸುವ ಪ್ರಯತ್ನದ ಅಂಗವಾಗಿ ರೂಬಿಯೊ ಶುಕ್ರವಾರ ಇಸ್ರೇಲ್ಗೆ ಆಗಮಿಸಿದ್ದಾರೆ. `ಅಂತರಾಷ್ಟ್ರೀಯ ಪಡೆಯ ರಚನೆ ಮತ್ತು ನಿಯೋಜನೆ ಕದನ ವಿರಾಮ ಒಪ್ಪಂದದ ಉಳಿವಿಗೆ ಅತ್ಯಂತ ನಿರ್ಣಾಯಕವಾಗಿದೆ' ಎಂದು ರೂಬಿಯೊ ಪ್ರತಿಪಾದಿಸಿದ್ದಾರೆ.
ಕೈರೋದಲ್ಲಿ ನಡೆದ ಸಭೆಯಲ್ಲಿ ಗಾಝಾ ಪಟ್ಟಿಯ ಆಡಳಿತವನ್ನು ಸ್ವತಂತ್ರ ತಂತ್ರಜ್ಞರನ್ನು ಒಳಗೊಂಡ ತಾತ್ಕಾಲಿಕ ಫೆಲೆಸ್ತೀನಿಯನ್ ಸಮಿತಿಗೆ ಹಸ್ತಾಂತರಿಸಲು ಫೆಲೆಸ್ತೀನ್ ಬಣಗಳು ಒಪ್ಪಿಕೊಂಡಿವೆ ಎಂದು ಶುಕ್ರವಾರ ವರದಿಯಾಗಿತ್ತು.







