20 ತಿಂಗಳ ಸಂಘರ್ಷದಲ್ಲಿ 55 ಸಾವಿರಕ್ಕೂ ಅಧಿಕ ಫೆಲೆಸ್ತೀನ್ ನಾಗರಿಕರು ಮೃತ್ಯು : ಮಾಹಿತಿ ನೀಡಿದ ಗಾಝಾ ಆರೋಗ್ಯ ಸಚಿವಾಲಯ

PC : PTI
ಗಾಝಾ: 20 ತಿಂಗಳುಗಳ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ 55 ಸಾವಿರಕ್ಕೂ ಅಧಿಕ ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ ಎಂದು ಗಾಝಾ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ಮೃತಪಟ್ಟ ಫೆಲೆಸ್ತೀನಿಯರಲ್ಲಿ ನಾಗರಿಕರು ಹಾಗೂ ಹೋರಾಟಗಾರರೆಂದು ಸಚಿವಾಲಯ ವರ್ಗೀಕರಿಸಿಲ್ಲ. ಆದರೆ ಮೃತಪಟ್ಟವರಲ್ಲಿ ಅರ್ಧಾಂಶಕ್ಕಿಂತಲೂ ಅಧಿಕ ಮಹಿಳೆಯರು ಹಾಗೂ ಮಕ್ಕಳೆಂದು ಅದು ಹೇಳಿದೆ.
2023ರ ಆಕ್ಟೋಬರ್ 7ರಂದು ಹಮಾಸ್ ದಕ್ಷಿಣ ಇಸ್ರೇಲ್ ಮೇಲೆ ದಾಳಿ ನಡೆಸಿದ ಬಳಿಕ ಭುಗಿಲೆದ್ದ ಸಂಘರ್ಷವು, ಈವರೆಗೆ ನಿಲ್ಲುವ ಲಕ್ಷಣಗಳನ್ನು ಪ್ರದರ್ಶಿಸಿಲ್ಲ. ತಾನು ಕೇವಲ ಹಮಾಸ್ ಹೋರಾಟಗಾರರನ್ನು ಗುರಿಯಿರಿಸಿ ದಾಳಿಗಳನ್ನು ನಡೆಸಿರುವುದಾಗಿ ಇಸ್ರೇಲ್ ಹೇಳಿಕೊಳ್ಳುತ್ತಿದೆ. ಫೆಲೆಸ್ತೀನ್ ನಾಗರಿಕರ ಸಾವಿಗೆ ಅದು ಹಮಾಸ್ ಅನ್ನು ಹೊಣೆಯಾಗಿಸುತ್ತಿದೆ. ಹಮಾಸ್ ಹೋರಾಟಗಾರರು ಜನಬಾಹುಳ್ಯದ ಸ್ಥಳಗಳಿಂದ ಕಾರ್ಯಾಚರಿಸುತ್ತಿದ್ದು, ನಾಗರಿಕರೊಂದಿಗೆ ಅವಿತುಕೊಂಡು ದಾಳಿಗಳನ್ನು ನಡೆಸುತ್ತಿದ್ದಾರೆಂದು ಇಸ್ರೇಲ್ ಆಪಾದಿಸಿದೆ.
2023ರ ಆಕ್ಟೋಬರ್ 7ರಂದು ಹಮಾಸ್ ಹಾಗೂ ಇಸ್ರೇಲ್ ಸೇನೆ ನಡುವ ಯದ್ಧ ಆರಂಭವಾದಾಗನಿಂದ 55,104 ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ ಹಾಗೂ 1, 27,394 ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ಹೇಳಿದೆ. ಇನ್ನೂ ಹಲವಾರು ಮಂದಿಯ ಮೃತದೇಹಗಳು ಕುಸಿದುಬಿದ್ದ ಕಟ್ಟಡಗಳ ಅವಶೇಷಗಳಡಿ ಸಿಲುಕಿಕೊಂಡಿದೆ ಎಂದು ಹೇಳಿದೆ.
ಇಸ್ರೇಲ್ ಪಡೆಗಳು ಗಾಝಾದ ವಿಶಾಲ ಪ್ರದೇಶಗಳನ್ನು ನಾಶಪಡಿಸಿವೆ. ಅಲ್ಲಿನ ಶೇ.90ರಷ್ಟು ಜನರನ್ನು ಸ್ಥಳಾಂತರಗೊಳಿಸಿದೆ ಹಾಗೂ ಇತ್ತೀಚಿನ ವಾರಗಳಲ್ಲಿ ದಕ್ಷಿಣದ ರಫಾ ನಗರ ಸೇರಿದಂತೆ ಅರ್ಧಕ್ಕಿಂತ ಅಧಿಕ ಕರಾವಳಿ ಪ್ರಾಂತವನ್ನು ಸೇನಾ ವಲಯವಾಗಿ ಪರಿವರ್ತಿಸಿದೆ ಎಂದು ಗಾಝಾದ ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.







