ಗಾಝಾದಲ್ಲಿ ಆಹಾರ ನೆರವು ಲೂಟಿ ಮಾಡುತ್ತಿದ್ದ ಕುಖ್ಯಾತ ಸಶಸ್ತ್ರ ಗುಂಪಿಗೆ ಇಸ್ರೇಲ್ ಬೆಂಬಲ: ವರದಿ
ಹಮಾಸ್ ವಿರೋಧಿ ಸ್ಥಳೀಯ ಗುಂಪಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಪೂರೈಕೆ: ಆರೋಪ

PC : PTI
ಜೆರುಸಲೇಂ: ಗಾಝಾದಲ್ಲಿ ಹಮಾಸ್ ಅನ್ನು ಎದುರಿಸಲು ಇಸ್ರೇಲ್ ಹೊಸ ನಡೆಯನ್ನು ಮುಂದಿರಿಸಿದ್ದು ಹಮಾಸ್ ಅನ್ನು ವಿರೋಧಿಸುವ ಸ್ಥಳೀಯ ಸಶಸ್ತ್ರ ಹೋರಾಟಗಾರರ ಗುಂಪನ್ನು ಬೆಂಬಲಿಸುತ್ತಿರುವುದಾಗಿ ವರದಿಯಾಗಿದೆ. ಆದರೆ ಈ ಗುಂಪು ವಿಶ್ವಸಂಸ್ಥೆ ಸೇರಿದಂತೆ ನೆರವು ವಿತರಣಾ ಏಜೆನ್ಸಿಗಳ ಟ್ರಕ್ಗಳಿಂದ ನೆರವನ್ನು ಲೂಟಿ ಮಾಡುವುದಕ್ಕೆ ಕುಖ್ಯಾತಿ ಗಳಿಸಿದೆ ಎಂಬ ವ್ಯಾಪಕ ಟೀಕೆ ಕೇಳಿಬಂದಿದೆ.
ಆದರೆ ಲೂಟಿ ಮಾಡುವ ಗುಂಪಿಗೆ ಬೆಂಬಲ ನೀಡಲಾಗುತ್ತಿದೆ ಎಂಬ ವರದಿಯನ್ನು ಇಸ್ರೇಲ್ ತಳ್ಳಿಹಾಕಿದೆ.
ಗಾಝಾದ ಸಶಸ್ತ್ರ ಗುಂಪುಗಳು ಪ್ರಭಾವಿ ಬುಡಕಟ್ಟು ಅಥವಾ ವಿಸ್ತೃತ ಕುಟುಂಬಗಳೊಂದಿಗೆ ಸಂಬಂಧ ಹೊಂದಿದ್ದು ಸಾಮಾನ್ಯವಾಗಿ ಕ್ರಿಮಿನಲ್ ಗ್ಯಾಂಗ್ಗಳಾಗಿ ಕಾರ್ಯನಿರ್ವಹಿಸುತ್ತಿವೆ. ಸ್ಥಳೀಯ ಗುಂಪುಗಳನ್ನು ಬೆಂಬಲಿಸುವುದು ಗಾಝಾ ಪಟ್ಟಿಯಲ್ಲಿ ಎಲ್ಲಾ ನೆರವು ವಿತರಣೆಗಳನ್ನು ನಿಯಂತ್ರಿಸುವ ವ್ಯಾಪಕ ಪ್ರಯತ್ನದ ಭಾಗವಾಗಿದೆ ಎಂದು ನೆರವು ವಿತರಣಾ ಏಜೆನ್ಸಿಗಳು ಆರೋಪಿಸಿವೆ. ಗಾಝಾದಲ್ಲಿ ಬುಡಕಟ್ಟುಗಳು, ವಿಸ್ತೃತ ಕುಟುಂಬಗಳ ಮುಖಂಡರು ಪ್ರಭಾವಶಾಲಿಗಳಾಗಿದ್ದು ವಿವಾದಗಳನ್ನು ಪರಿಹರಿಸಲು ಮಧ್ಯಸ್ಥಿಕೆ ವಹಿಸುತ್ತಾರೆ. ಕೆಲವು ಗುಂಪುಗಳು ತಮ್ಮ ಹಿತಾಸಕ್ತಿಯ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳಿಂದ ಸಜ್ಜುಗೊಂಡಿವೆ. ಇನ್ನು ಕೆಲವು ಗುಂಪುಗಳು ಮಾದಕ ವಸ್ತುಗಳ ಕಳ್ಳಸಾಗಣೆಯಂತಹ ಕ್ರಿಮಿನಲ್ ಕೃತ್ಯದಲ್ಲಿ ಸಕ್ರಿಯವಾಗಿವೆ. 2007ರಲ್ಲಿ ಗಾಝಾದಲ್ಲಿ ಅಧಿಕಾರ ವಶಪಡಿಸಿಕೊಂಡ ನಂತರ ಹಮಾಸ್ ಬಲಪ್ರಯೋಗಿಸಿ ಎಲ್ಲಾ ಗುಂಪುಗಳನ್ನು ಬಗ್ಗುಬಡಿಯಿತು. ಆದರೆ ಇಸ್ರೇಲ್ನೊಂದಿಗಿನ 20 ತಿಂಗಳ ಯುದ್ಧವು ಹಮಾಸ್ ಅನ್ನು ದುರ್ಬಲಗೊಳಿಸಿದ ನಂತರ ಸ್ಥಳೀಯ ಗುಂಪುಗಳು ಮತ್ತೆ ಸಕ್ರಿಯಗೊಂಡಿವೆ. ಶತ್ರುವಿನ ಶತ್ರು ಮಿತ್ರ ಎಂಬ ಮಾತಿನಂತೆ ಇದರಲ್ಲಿ ಕೆಲವು ಸಶಸ್ತ್ರ ಗುಂಪುಗಳು ಇಸ್ರೇಲ್ ಜೊತೆ ಸಹಕಾರದ ಘೋಷಣೆ ಮಾಡಿವೆ. ಇದರಲ್ಲಿ ಅಬು ಶಬಾಬ್ ನೇತೃತ್ವದ `ನ್ಯಾಷನಲಿಸ್ಟ್ ಫೋರ್ಸ್(ರಾಷ್ಟ್ರೀಯತಾವಾದಿ ಪಡೆ) ಪ್ರಮುಖವಾಗಿದೆ ಎಂದು ವರದಿಯಾಗಿದೆ.
ಗಾಝಾದಲ್ಲಿ ನೆರವು ವಿತರಣೆಗೆ ಅಮೆರಿಕ-ಇಸ್ರೇಲ್ ಬೆಂಬಲಿತ ಜಿಎಚ್ಎಫ್ ನಿರ್ವಹಿಸುವ ವಿತರಣಾ ಕೇಂದ್ರಗಳಿಗೆ ಭದ್ರತೆ ಒದಗಿಸುವುದಾಗಿ ನ್ಯಾಷನಲಿಸ್ಟ್ ಫೋರ್ಸ್ ಹೇಳಿಕೊಂಡಿದೆ. ಈ ಗುಂಪಿನಲ್ಲಿ ಸುಮಾರು 1 ಸಾವಿರ ಹೋರಾಟಗಾರರು ಇರಬಹುದು ಎಂದು ನೆರವು ಏಜೆನ್ಸಿಗಳು ಅಂದಾಜಿಸಿವೆ. ಆಹಾರ ಮತ್ತು ಔಷಧಗಳು ಫಲಾನುಭವಿಗಳಿಗೆ ತಲುಪುವುದನ್ನು ಖಾತರಿಪಡಿಸಲು ಜಿಎಚ್ಎಫ್ ಜೊತೆ ಸಹಕರಿಸುತ್ತಿರುವುದಾಗಿ ಅಬು ಶಬಾಬ್ ಅವರ ಗುಂಪಿನ ಮಾಧ್ಯಮ ಕಚೇರಿಯ ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಹಮಾಸ್ನ ಬಂಧನದಲ್ಲಿದ್ದ ಶಬಾಬ್:
ಯುದ್ಧಕ್ಕೂ ಮೊದಲು, ಗಡಿದಾಟು ಮತ್ತು ಸುರಂಗ ಮಾರ್ಗಗಳ ಮೂಲಕ ಗಾಝಾಕ್ಕೆ ಈಜಿಪ್ಟ್ ಮತ್ತು ಇಸ್ರೇಲ್ನಿಂದ ಸಿಗರೇಟುಗಳು ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ಅಬು ಶಬಾಬ್ ಪಾಲ್ಗೊಂಡಿದ್ದ. ಈತನನ್ನು ಇಬ್ಬರು ಸಂಗಡಿಗರೊಂದಿಗೆ ಹಮಾಸ್ ಬಂಧಿಸಿತ್ತು. ಆದರೆ 2023ರ ಅಕ್ಟೋಬರ್ ನಲ್ಲಿ ಯುದ್ಧ ಪ್ರಾರಂಭಗೊಂಡ ಬಳಿಕ ಬಿಡುಗಡೆಗೊಳಿಸಿತ್ತು.
ನೆರವು ವಿತರಣಾ ಏಜೆನ್ಸಿಗಳ ಟ್ರಕ್ನಿಂದ ಆಹಾರ ವಸ್ತುಗಳನ್ನು ಲೂಟಿ ಮಾಡುತ್ತಿರುವ ಆರೋಪವನ್ನು `ನ್ಯಾಷನಲಿಸ್ಟ್ ಫೋರ್ಸ್' ತಿರಸ್ಕರಿಸಿದ್ದು ತನ್ನ ಸದಸ್ಯರು ಅಗತ್ಯವಿದ್ದಾಗ ಕನಿಷ್ಠ ಮಟ್ಟದ ಆಹಾರ ಮತ್ತು ನೀರನ್ನು ಪಡೆದಿದ್ದಾರೆ' ಎಂದು ಸಮರ್ಥಿಸಿಕೊಂಡಿದ್ದಾರೆ.