ಗಾಝಾ ಆಕ್ರಮಣ: ಇಸ್ರೇಲ್ ಜೊತೆ ವ್ಯಾಪಾರ ಮಾತುಕತೆ ನಿಲ್ಲಿಸಿದ ಬ್ರಿಟನ್

PC | AFP
ಲಂಡನ್: ಫೆಲೆಸ್ತೀನ್ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆ ವಿಸ್ತರಿಸಿರುವ ಇಸ್ರೇಲ್ ನಡೆಯನ್ನು ಖಂಡಿಸಿರುವ ಬ್ರಿಟನ್ ಮಂಗಳವಾರ ಇಸ್ರೇಲ್ ಜೊತೆಗಿನ ಮುಕ್ತ ವ್ಯಾಪಾರ ಮತುಕತೆಯನ್ನು ಅಮಾನತುಗೊಳಿಸಿತು ಮತ್ತು ಇಸ್ರೇಲ್ ನ ರಾಯಭಾರಿಯನ್ನು ವಿದೇಶಾಂಗ ಇಲಾಖೆಗೆ ಕರೆಸಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗಾಝಾ ಜನಸಂಖ್ಯೆಯನ್ನು ಸ್ಥಳಾಂತರಿಸುವ ಇಸ್ರೇಲ್ ಸರಕಾರದ ಯೋಜನೆ ಮತ್ತು ನಾಗರಿಕರಿಗೆ ಸಹಾಯವನ್ನು ಸೀಮಿತಗೊಳಿಸುವುದು ಹಸಿವಿನಿಂದ ಬಳಲುವ ಮತ್ತು ಮಾನಸಿಕ ಆಘಾತದ ಸಮಸ್ಯೆಗೆ ಕಾರಣವಾಗಲಿದ್ದು ಸಂಘರ್ಷವು ಕರಾಳ ಹೊಸ ಹಂತಕ್ಕೆ ಪ್ರವೇಶಿಸುತ್ತಿದೆ. ವಾರಗಳಿಂದ ಮುಂದುವರಿದಿರುವ ಇಸ್ರೇಲ್ ನ ದಿಗ್ಬಂಧನವು ಕ್ರೂರ ಮತ್ತು ಅಸಮರ್ಥನೀಯ ಎಂದು ಬ್ರಿಟನ್ ನ ವಿದೇಶಾಂಗ ಸಚಿವ ಡೇವಿಡ್ ಲ್ಯಾಮಿ ಖಂಡಿಸಿದ್ದಾರೆ.
ಗಾಝಾದಲ್ಲಿ ಮಿಲಿಟರಿ ಚಟುವಟಿಕೆಯ ಸಂಪೂರ್ಣ ಅಸಮಾನ ಉಲ್ಬಣದ ವಿರುದ್ಧ ಪ್ರತಿಭಟನೆಯಾಗಿ ಇಸ್ರೇಲ್ ರಾಯಭಾರಿ ಟ್ವಿಪಿ ಹೊಟೊವೆಲಿಯನ್ನು ವಿದೇಶಾಂಗ ಕಚೇರಿಗೆ ಕರೆಸಿಕೊಳ್ಳಲಾಗಿದೆ. ಬ್ರಿಟನ್-ಇಸ್ರೇಲ್ ಸಂಬಂಧಗಳಿಗಾಗಿ ರೂಪಿಸಿರುವ `ಮಾರ್ಗಸೂಚಿ 2030'ನಡಿ ಸಹಕಾರ ಸಂಬಂಧವನ್ನು ಬ್ರಿಟನ್ ಪುನರ್ ಪರಿಶೀಲಿಸಲಿದೆ. ನೆತನ್ಯಾಹು ಸರಕಾರದ ಕ್ರಮಗಳು ಇದನ್ನು ಅಗತ್ಯವಾಗಿಸಿವೆ ಎಂದು ಸಚಿವರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಸರಕಾರ ` ಬಾಹ್ಯ ಒತ್ತಡವು ಇಸ್ರೇಲ್ ನ ವಿನಾಶವನ್ನು ಬಯಸುವ ಶತ್ರುಗಳ ವಿರುದ್ಧ ತನ್ನ ಅಸ್ತಿತ್ವ ಮತ್ತು ಸುರಕ್ಷತೆಯನ್ನು ರಕ್ಷಿಸಿಕೊಳ್ಳುವ ಹಾದಿಯಿಂದ ಇಸ್ರೇಲನ್ನು ವಿಮುಖಗೊಳಿಸುವುದಿಲ್ಲ. ಇಸ್ರೇಲಿ ವಿರೋಧಿ ಬ್ರಾಂತಿ ಮತ್ತು ಸ್ಥಳೀಯ ರಾಜಕೀಯ ಪರಿಗಣನೆಗಳ ಕಾರಣದಿಂದಾಗಿ ಬ್ರಿಟಿಷ್ ಸರಕಾರವು ಬ್ರಿಟನ್ ನ ಆರ್ಥಿಕತೆಗೆ ಹಾನಿ ಮಾಡಲು ಸಿದ್ಧವಿದ್ದರೆ ಅದು ಅವರ ಆಯ್ಕೆಗೆ ಬಿಟ್ಟ ವಿಷಯವಾಗಿದೆ' ಎಂದು ಹೇಳಿದೆ.







