ಗಾಝಾದಲ್ಲಿ ಪ್ರತಿ 10ರಲ್ಲಿ 1 ಮಗುವಿಗೆ ಅಪೌಷ್ಟಿಕತೆ: ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ

PC : unrwa.org
ಜಿನೀವ: ಗಾಝಾದಲ್ಲಿ ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ (ಯುಎನ್ಆರ್ಡಬ್ಲ್ಯುಎ) ನಡೆಸುತ್ತಿರುವ ಕ್ಲಿನಿಕ್ ಗಳಲ್ಲಿ ತಪಾಸಣೆಗೊಳಗಾಗಿರುವ ಪ್ರತಿ 10 ಮಕ್ಕಳಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ಬಳಲುತ್ತಿದೆ ಎಂದು ಸಂಸ್ಥೆಯು ಮಂಗಳವಾರ ತಿಳಿಸಿದೆ.
‘‘ನಾಲ್ಕು ತಿಂಗಳ ಹಿಂದೆ ಗಾಝಾದ ಮೇಲಿನ ಮುತ್ತಿಗೆಯನ್ನು ಇಸ್ರೇಲ್ ಸೈನಿಕರು ಬಿಗಿಗೊಳಿಸಿದ ಬಳಿಕ, ಗಾಝಾದಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚುತ್ತಿರುವುದನ್ನು ನಮ್ಮ ಆರೋಗ್ಯ ತಂಡಗಳು ಪತ್ತೆಹಚ್ಚಿವೆ’’ ಎಂದು ಯುಎನ್ಆರ್ಡಬ್ಲ್ಯುಎಯ ಸಾರ್ವಜನಿಕ ಸಂಪರ್ಕಗಳ ನಿರ್ದೇಶಕಿ ಜೂಲಿಯಟ್ ಟೌಮ ಹೇಳಿದರು.
ಅವರು ಜೋರ್ಡಾನ್ ನ ಅಮ್ಮಾನ್ನಿಂದ ವೀಡಿಯೊ ಲಿಂಕ್ ಮೂಲಕ ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ಮಾಹಿತಿಯನ್ನು ನೀಡಿದ್ದಾರೆ.
2024ರ ಜನವರಿಯ ಬಳಿಕ, ಗಾಝಾದಲ್ಲಿರುವ ತನ್ನ ಐದು ಕ್ಲಿನಿಕ್ ಗಳಲ್ಲಿ, ಐದು ವರ್ಷಕ್ಕಿಂತ ಕೆಳಗಿನ 2,40,000ಕ್ಕೂ ಅಧಿಕ ಗಂಡು ಮತ್ತು ಹೆಣ್ಣು ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಜೂಲಿಯಟ್ ತಿಳಿಸಿದರು. ಯುದ್ಧಕ್ಕಿಂತ ಮೊದಲು, ಗಾಝಾ ಪಟ್ಟಿಯಲ್ಲಿ ತೀವ್ರ ಅಪೌಷ್ಟಿಕತೆ ಅಪರೂಪವಾಗಿತ್ತು ಎಂದು ಅವರು ನುಡಿದರು.
‘‘ಹಿಂದೆ, ಇಂಥ ಅಪೌಷ್ಟಿಕತೆಯ ಪ್ರಕರಣಗಳನ್ನು ತಾನು ಪಠ್ಯಪುಸ್ತಕಗಳು ಮತ್ತು ಸಾಕ್ಷ್ಯಚಿತ್ರಗಳಲ್ಲಿ ಮಾತ್ರ ನೋಡಿರುವುದಾಗಿ ನಾವು ಮಾತನಾಡಿದ ಓರ್ವ ನರ್ಸ್ ಹೇಳಿದ್ದಾರೆ’’ ಎಂದು ಅವರು ಹೇಳಿದರು.
‘‘ಔಷಧ, ಪೌಷ್ಟಿಕ ಆಹರ, ಸ್ವಚ್ಛತಾ ಸಲಕರಣೆಗಳು, ಇಂಧನ ಎಲ್ಲವೂ ಕ್ಷಿಪ್ರವಾಗಿ ಮುಗಿಯುತ್ತಿದೆ’’ ಎಂದು ಅವರು ತಿಳಿಸಿದರು.
ಗಾಝಾದ ಮೇಲಿನ 11 ವಾರಗಳ ದಿಗ್ಬಂಧನವನ್ನು ಇಸ್ರೇಲ್ ಮೇ 19ರಂದು ತೆರವುಗೊಳಿಸಿದೆ. ಆ ಮೂಲಕ, ವಿಶ್ವಸಂಸ್ಥೆಯಿಂದ ಸೀಮಿತ ಪ್ರಮಾಣದ ಸರಬರಾಜುಗಳಿಗೆ ಅವಕಾಶ ನೀಡಿದೆ. ಆದರೆ, ಯುಎನ್ಆರ್ಡಬ್ಲ್ಯುಎ ಗಾಝಾಕ್ಕೆ ನೆರವು ತರುವುದನ್ನು ನಿಷೇಧಿಸಿದೆ.







