ಗಾಝಾ: ಇಸ್ರೇಲ್ನಿಂದ ನಿಲ್ಲದ ನರಮೇಧ; ವಾಯುದಾಳಿ, ಗುಂಡುಹಾರಾಟಕ್ಕೆ 82 ಫೆಲೆಸ್ತೀನಿಯರು ಬಲಿ

Photo | Reuters (ಸಾಂದರ್ಭಿಕ ಚಿತ್ರ)
ಗಾಝಾನಗರ: ಗಾಝಾದಲ್ಲಿ ಇಸ್ರೇಲ್ ಸೇನೆ ಬುಧವಾರ ರಾತ್ರಿ ಹಾಗೂ ಗುರುವಾರ ನಸುಕಿನ ನಡುವೆ ನಡೆಸಿದ ವಾಯುದಾಳಿಯಲ್ಲಿ ಹಾಗೂ ಗುಂಡುಹಾರಾಟದಲ್ಲಿ 82 ಫೆಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಅವರಲ್ಲಿ 38 ಮಂದಿ ಮಾನವೀಯ ನೆರವನ್ನು ಪಡೆಯಲು ಪ್ರಯತ್ನಿಸುತ್ತಿದ್ದವರೆಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಆದರೆ ಈ ದಾಳಿಗಳ ಬಗ್ಗೆ ಇಸ್ರೇಲ್ ಸೇನೆಯು ತಕ್ಷಣವೇ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಯುದ್ಧಪೀಡಿತ ಗಾಝಾಪಟ್ಟಿಯ ಜನತೆಗೆತ ಆಹಾರ ವಿತರಣೆಗಾಗಿ ಸೃಷ್ಟಿಯಾದ ಗಾಜಾ ಮಾನವೀಯತಾ ಪ್ರತಿಷ್ಠಾನಕ್ಕೆ ಸಂಬಂಧಿಸಿದ ಸ್ಥಳಗಳ ಮೇಲೂ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಐವರು ಸಾವನ್ನಪ್ಪಿದ್ದಾರೆ. ಇತರ 33 ಮಂದಿ ಗಾಜಾಪಟ್ಟಿಯ ಇತರ ಸ್ಥಳಗಳಲ್ಲಿ ನೆರವು ಪೂರೈಕೆಯ ಟ್ರಕ್ ಗಳ ಆಗಮನಕ್ಕಾಗಿ ಕಾಯುತ್ತಿದ್ದಾಗ ಬಾಂಬ್ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.
ಸಂತ್ರಸ್ತ ಫೆಲೆಸ್ತೀನಿಯರಿಗೆ ಆಶ್ರಯ ನೀಡಿದ್ದ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು, ಅವರಲ್ಲಿ ಹೆಚ್ಚಿನವರು ಮಹಿಳೆಯರು ಹಾಗೂ ಮಕ್ಕಳೆಂದು ತಿಳಿದುಬಂದಿದೆ.





