ಯುದ್ಧದ ಭೀಕರತೆಯ ನಡುವೆಯೂ ಗಾಝಾದಲ್ಲಿ 250 ಜೋಡಿಗಳ ಸಾಮೂಹಿಕ ವಿವಾಹ
UAEಯ ಮಾನವೀಯ ಕಾರ್ಯಾಚರಣೆಯಡಿ ಆಯೋಜನೆ; ಆರ್ಥಿಕ ಸಂಕಷ್ಟದಿಂದ ಮದುವೆ ಮುಂದೂಡಿದ್ದ ಯುವಕ-ಯುವತಿಯರಿಗೆ ನೆರವು

Screengrab ; X
ಗಾಝಾ: ನಿರಂತರ ಯುದ್ಧ, ಬಾಂಬ್ ದಾಳಿ ಮತ್ತು ವಿನಾಶದ ನಡುವೆಯೇ ಗಾಝಾ ಪಟ್ಟಿಯಲ್ಲಿ 250 ಫೆಲೆಸ್ತೀನಿ ಜೋಡಿಗಳು ಶುಕ್ರವಾರ ಸಾಮೂಹಿಕ ವಿವಾಹದ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿವೆ.
ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಹಮ್ಮಿಕೊಂಡಿರುವ ‘ಆಪರೇಷನ್ ಗ್ಯಾಲಂಟ್ ನೈಟ್ 3’ ಮಾನವೀಯ ಕಾರ್ಯಾಚರಣೆಯಡಿ ಈ ಸಾಮೂಹಿಕ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು.
ಗಾಝಾ ನಗರದ ಕರಾವಳಿ ತೀರದಲ್ಲಿರುವ ಮ್ಯಾರಿಟೈಮ್ ಕ್ಲಬ್ ನಲ್ಲಿ ನಡೆದ ಸಮಾರಂಭದಲ್ಲಿ ವಧು-ವರರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಕುಟುಂಬಸ್ಥರ ಸಮ್ಮುಖದಲ್ಲಿ ನಿಖಾಹ್ ನೆರವೇರಿಸಿಕೊಂಡರು. ನಿರಂತರ ಬಾಂಬ್ ದಾಳಿ ಮತ್ತು ಕಟ್ಟಡಗಳ ಅವಶೇಷಗಳ ನಡುವೆ ಮೊಳಗಿದ ಸುಮಧುರ ಸಂಗೀತ ಹಾಗೂ ಮದುವೆಯ ಸಂಭ್ರಮವು ಅಲ್ಲಿನ ಜನರಿಗೆ ದೈನಂದಿನ ಸಂಕಷ್ಟಗಳಿಂದ ಕ್ಷಣಕಾಲ ಬಿಡುವು ನೀಡಿತು.
ನಿರಾಶ್ರಿತ ಸ್ಥಿತಿ, ತೀವ್ರ ಆರ್ಥಿಕ ಕುಸಿತ ಹಾಗೂ ಸ್ವಂತ ಸೂರು ಕಳೆದುಕೊಂಡಿರುವ ಕಾರಣ ಈ ಯುವಕ-ಯುವತಿಯರು ಹಲವು ತಿಂಗಳುಗಳಿಂದ ಮದುವೆಯನ್ನು ಮುಂದೂಡುತ್ತಲೇ ಬಂದಿದ್ದರು. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಮದುವೆಯ ವೆಚ್ಚವನ್ನು ಸ್ವತಃ ಭರಿಸುವುದು ಅವರಿಗೆ ಅಸಾಧ್ಯವಾಗಿತ್ತು. UAE ಆಯೋಜಿಸಿದ ಉಚಿತ ಸಾಮೂಹಿಕ ವಿವಾಹವು ಅವರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ.
UAE ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಡಾ. ಅನ್ವರ್ ಗರ್ಗಾಶ್ ಅವರ ಪ್ರಕಾರ, ಮಾನವೀಯ ನೆರವು ಕೇವಲ ಸಂಕಷ್ಟವನ್ನು ತಗ್ಗಿಸುವುದಕ್ಕೆ ಸೀಮಿತವಾಗಬಾರದು. ಅದು ಜನರಲ್ಲಿ ಭರವಸೆ ಮತ್ತು ನಗೆಯನ್ನು ಮರಳಿ ತರಬೇಕು. ಸಂಘರ್ಷದ ನೆಲದಲ್ಲಿಯೂ ಸಾಮಾನ್ಯ ಬದುಕು ಕಟ್ಟಿಕೊಳ್ಳಲು ಇಂತಹ ಬೆಂಬಲ ಅನಿವಾರ್ಯವಾಗಿದೆ.
►ಗಾಝಾದಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರು
ಯುದ್ಧದ ಪರಿಣಾಮವಾಗಿ ಗಾಝಾದ 20 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಆಹಾರ ಮತ್ತು ಅಗತ್ಯ ವೈದ್ಯಕೀಯ ಸೇವೆಗಳ ಕೊರತೆಯೂ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ.
2023ರ ನವೆಂಬರ್ನಲ್ಲಿ ಆರಂಭವಾದ UAEಯ ಈ ಮಾನವೀಯ ಕಾರ್ಯಾಚರಣೆಗೆ ಇತ್ತೀಚೆಗೆ ಮೂರು ವರ್ಷ ಪೂರ್ಣಗೊಂಡಿದೆ. ಈವರೆಗೆ 4.16 ಶತಕೋಟಿ ಡಾಲರ್ ಮೌಲ್ಯದ 1.36 ಲಕ್ಷ ಟನ್ಗೂ ಹೆಚ್ಚು ನೆರವನ್ನು ಒದಗಿಸಲಾಗಿದೆ.
ಪ್ರಸ್ತುತ ಗಾಝಾಕ್ಕೆ ತಲುಪುತ್ತಿರುವ ಒಟ್ಟು ಅಂತರರಾಷ್ಟ್ರೀಯ ನೆರವಿನಲ್ಲಿ UAEಯ ಪಾಲು ಶೇ. 46ರಷ್ಟಿದೆ.
ಯುದ್ಧ ಮುಂದುವರಿದಿರುವ ಸಂದರ್ಭದಲ್ಲಿ ನೆರವಿನ ಸ್ವರೂಪವು ಕೇವಲ ಆಹಾರ ಮತ್ತು ಅಗತ್ಯ ವಸ್ತುಗಳ ಪೂರೈಕೆಗೆ ಸೀಮಿತವಾಗದೆ, ಇಂತಹ ಸಾಮಾಜಿಕ ಪುನರ್ನಿರ್ಮಾಣದ ಪ್ರಯತ್ನಗಳಿಗೂ ವಿಸ್ತರಿಸಬೇಕಾದ ಅಗತ್ಯವಿದೆ.
ಈ ಸಾಮೂಹಿಕ ವಿವಾಹವು ಕೇವಲ ಒಂದು ಆಚರಣೆಯಾಗಿ ಉಳಿದಿಲ್ಲ. ವಿನಾಶದ ನಡುವೆಯೂ ಬದುಕನ್ನು ಮುನ್ನಡೆಸುವ ಗಾಝಾದ ಜನರ ಛಲ ಮತ್ತು ಹೊಸ ಬದುಕಿನ ಭರವಸೆಯನ್ನು ಪ್ರತಿಬಿಂಬಿಸಿದೆ. ರಾಜಕೀಯ ತೀರ್ಮಾನಗಳು ಏನೇ ಇರಲಿ, ಸಂಘರ್ಷದ ತೀವ್ರತೆಯ ನಡುವೆಯೂ ಸಾಮಾನ್ಯ ಜೀವನವನ್ನು ಉಳಿಸಿಕೊಳ್ಳುವ ಇಂತಹ ಪ್ರಯತ್ನಗಳು ಗಾಝಾದ ಭವಿಷ್ಯದ ದೃಷ್ಟಿಯಿಂದ ಮಹತ್ವ ಪಡೆದಿವೆ.






