ಗಾಝಾ- ಈಜಿಪ್ಟ್ ಗಡಿದಾಟು ಪುನರಾರಂಭ
ಮತ್ತೆ ತೆರೆದ ರಫಾ ಗಡಿದಾಟು

Photo- PTI
ಗಾಝಾ: ವಿದೇಶೀಯರು, ಅವಳಿ ಪೌರತ್ವ ಹೊಂದಿರುವವರು ಹಾಗೂ ಗಾಯಗೊಂಡಿರುವ ಫೆಲೆಸ್ತೀನೀಯರ ಸ್ಥಳಾಂತರಕ್ಕೆ ಅವಕಾಶ ನೀಡಲು ಗಾಝಾ ಪಟ್ಟಿ ಮತ್ತು ಈಜಿಪ್ಟ್ ನಡುವಿನ ರಫಾ ಗಡಿದಾಟು ಮತ್ತೆ ತೆರೆಯಲಾಗಿದೆ ಎಂದು ಹಮಾಸ್ ಸರಕಾರ ಹೇಳಿದೆ.
ಗಾಯಗೊಂಡ ಫೆಲೆಸ್ತೀನೀಯರು ಹಾಗೂ ವಿದೇಶಿ ಪಾಸ್ಪೋರ್ಟ್ ಹೊಂದಿರುವವರನ್ನು ಸ್ಥಳಾಂತರಗೊಳಿಸಲು ರಫಾ ಗಡಿದಾಟನ್ನು ಬುಧವಾರ, ಗುರುವಾರ ಮತ್ತು ಶುಕ್ರವಾರ ತೆರೆಯಲಾಗಿತ್ತು. ಆದರೆ ಗಾಝಾ ಪಟ್ಟಿಯಲ್ಲಿ ಆಂಬ್ಯುಲೆನ್ಸ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ ಬಳಿಕ ಶನಿವಾರ ಮತ್ತು ರವಿವಾರ ಮುಚ್ಚಲಾಗಿತ್ತು.
ಇದೀಗ ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಜತೆ ಒಪ್ಪಂದಕ್ಕೆ ಬರಲಾಗಿದ್ದು ಗಾಯಾಳುಗಳನ್ನು ಸಾಗಿಸುವ ಆಂಬ್ಯುಲೆನ್ಸ್ಗಳು ರಫಾ ಗಡಿದಾಟಿನ ಬಳಿ ಬಂದಿದೆ ಎಂದು ಗಡಿ ಅಧಿಕಾರಿಯನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಗಾಝಾ ಪಟ್ಟಿಯಿಂದ 300 ಅಮೆರಿಕ ಪ್ರಜೆಗಳನ್ನು ಸ್ಥಳಾಂತರಿಸಲಾಗಿದೆ ಎಂದು ಶ್ವೇತಭವನ ಹೇಳಿದೆ. ರಫಾ ಗಡಿದಾಟುವಿನ ಮೂಲಕ ಸುಮಾರು 100 ಬ್ರಿಟನ್ ನಾಗರಿಕರು ಸ್ಥಳಾಂತರಗೊಂಡಿದ್ದಾರೆ ಎಂದು ಬ್ರಿಟನ್ ಸರಕಾರ ಸೋಮವಾರ ಹೇಳಿದೆ. ರಫಾ ಗಡಿದಾಟುವಿನ ಮೂಲಕ ಸುಮಾರು 7,000 ವಿದೇಶೀಯರನ್ನು ಸ್ಥಳಾಂತರಗೊಳಿಸಲು ನೆರವಾಗುವುದಾಗಿ ಈಜಿಪ್ಟ್ ಸೋಮವಾರ ಘೋಷಿಸಿದೆ.
ಈ ಮಧ್ಯೆ, ಗಾಝಾ ಯುದ್ಧ ಇತರ ಪ್ರದೇಶಗಳಿಗೆ ಹರಡದಂತೆ ತಡೆಯುವ ಪ್ರಯತ್ನವಾಗಿ ಅಮೆರಿಕವು ಈ ವಲಯದಲ್ಲಿ ತನ್ನ ಪರಮಾಣು ಕ್ಷಿಪಣಿ ಜಲಾಂತರ್ಗಾಮಿ ನೌಕೆಯನ್ನು ನಿಯೋಜಿಸಿರುವುದನ್ನು ಸ್ವಾಗತಿಸುವುದಾಗಿ ಇಸ್ರೇಲ್ ಹೇಳಿದೆ. ಅಮೆರಿಕ ಇನ್ನಷ್ಟು ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸುತ್ತಿರುವುದು ನಿಜವಾಗಿಯೂ ಒಳ್ಳೆಯ ಸುದ್ಧಿ. ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ತಡೆಯುವ ಕ್ರಮ ಇದಾಗಿದೆ ಎಂದು ಇಸ್ರೇಲ್ ಮಿಲಿಟರಿಯ ವಕ್ತಾರ ಲೆ|ಕ| ರಿಚರ್ಡ್ ಹೆಚೆಟ್ ಪ್ರತಿಕ್ರಿಯಿಸಿದ್ದಾರೆ.
ಗಾಝಾ ಪಟ್ಟಿಯಲ್ಲಿ ಜೋರ್ಡನ್ 2009ರಿಂದ ನಿರ್ವಹಿಸುತ್ತಿರುವ ಆಸ್ಪತ್ರೆಗೆ ತುರ್ತು ಔಷಧಗಳನ್ನು ವಿಮಾನದ ಮೂಲಕ ಜೋರ್ಡಾನ್ ಒದಗಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು ಇದನ್ನು ಇಸ್ರೇಲ್ ಸೇನೆ ದೃಢಪಡಿಸಿದೆ. ರವಿವಾರ ವಿಶ್ವಸಂಸ್ಥೆಯ 18 ಏಜೆನ್ಸಿಗಳು ಮತ್ತು ಸರಕಾರೇತರ ಸಂಘಟನೆ(ಎನ್ಜಿಒ) ಮುಖ್ಯಸ್ಥರು ಗಾಝಾದ ಮೇಲಿನ ಮುತ್ತಿಗೆಯನ್ನು ಖಂಡಿಸುವ ಅಪರೂಪದ ಜಂಟಿ ಹೇಳಿಕೆ ಬಿಡುಗಡೆಗೊಳಿಸಿದ್ದು ಗಾಝಾ ಪಟ್ಟಿಗೆ ಅಗತ್ಯದ ನೆರವನ್ನು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ತಲುಪಿಸುವಂತೆ ಆಗ್ರಹಿಸಿವೆ ಎಂದು ವರದಿಯಾಗಿದೆ.







