ಫೆಲಸ್ತೀನ್ ರಾಷ್ಟ್ರಕ್ಕೆ ಬೆಂಬಲ ದೃಢಪಡಿಸಿದ ಜಿಸಿಸಿ

Photo: twitter/arabnews
ರಿಯಾದ್ : ಪೂರ್ವ ಜೆರುಸಲೇಂ ಅನ್ನು ರಾಜಧಾನಿಯಾಗಿ ಹೊಂದಿರುವ ಸ್ವತಂತ್ರ ಫೆಲಸ್ತೀನ್ ರಾಷ್ಟ್ರ ಸ್ಥಾಪನೆಗೆ ಗಲ್ಫ್ ಸಹಕಾರ ಮಂಡಳಿ(ಜಿಸಿಸಿ) ತನ್ನ ಬೆಂಬಲವನ್ನು ಪುನರುಚ್ಚರಿಸಿದೆ.
ಸೌದಿ ಅರೆಬಿಯಾದ ರಾಜಧಾನಿಯಲ್ಲಿ ನಡೆದ ಜಿಸಿಸಿಯ 57ನೇ ಅಧಿವೇಶನದ ಸಮಾರೋಪ ಕಾರ್ಯಕ್ರಮದಲ್ಲಿ ಅಂಗೀಕರಿಸಲಾದ ನಿರ್ಣಯದಲ್ಲಿ ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶದಲ್ಲಿ ಇಸ್ರೇಲ್ನ ವಸಾಹತು ನಿರ್ಮಾಣ ಮುಂದುವರಿದಿರುವುದನ್ನು ಖಂಡಿಸಲಾಗಿದೆ. ಇದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ ಸಂಖ್ಯೆ 2334 ಸೇರಿದಂತೆ ಅಂತರಾಷ್ಟ್ರೀಯ ನ್ಯಾಯಸಮ್ಮತ ನಿರ್ಣಯಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಖಂಡಿಸಿದೆ.
ಆಕ್ರಮಿತ ಫೆಲೆಸ್ತೀನ್ ಪ್ರದೇಶ ಎಂಬ ಪದ ಬಳಸುವುದಾಗಿ ಆಸ್ಟ್ರೇಲಿಯಾ ಸರಕಾರ ಘೋಷಿಸಿರುವುದನ್ನು ಸಮಿತಿ ಸ್ವಾಗತಿಸಿದೆ. ವಸಾಹತು ನಿರ್ಧಾರದಿಂದ ಇಸ್ರೇಲ್ ಹಿಂದೆ ಸರಿಯುವಂತೆ ಮತ್ತು ಸಂಘರ್ಷವನ್ನು ಪರಿಹರಿಸಲು ಫೆಲಸ್ತೀನ್ ಜನರ ಎಲ್ಲಾ ಕಾನೂನುಬದ್ಧ ಹಕ್ಕುಗಳನ್ನು ಪೂರೈಸುವಂತೆ ಇಸ್ರೇಲ್ ಮೇಲೆ ಅಂತರಾಷ್ಟ್ರೀಯ ಸಮುದಾಯ ಒತ್ತಡ ಹೇರಬೇಕು ಎಂದು ಜಿಸಿಸಿ ಆಗ್ರಹಿಸಿದೆ.





