ಇರಾನ್ನಲ್ಲಿನ ರಾಯಭಾರಿ ಕಚೇರಿ ಸಿಬ್ಬಂದಿಗಳನ್ನು ಸ್ಥಳಾಂತರಿಸಿದ ಜರ್ಮನಿ

PC : PTI
ಟೆಹರಾನ್ : ಇರಾನ್ನಲ್ಲಿನ ಜರ್ಮನಿ ರಾಯಭಾರಿ ಕಚೇರಿ ಸಿಬ್ಬಂದಿಯನ್ನು ಜರ್ಮನಿ ನೆರೆಯ ದೇಶಕ್ಕೆ ಸ್ಥಳಾಂತರಿಸಿದೆ ಎಂದು ವರದಿಯಾಗಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತು ಪ್ರಸ್ತುತ ಬೆದರಿಕೆ ಪರಿಸ್ಥಿತಿಯಿಂದಾಗಿ ಜರ್ಮನಿಯು ಟೆಹರಾನ್ನಲ್ಲಿರುವ ರಾಯಭಾರಿ ಕಚೇರಿಯ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ವಿದೇಶಕ್ಕೆ ಸ್ಥಳಾಂತರಿಸಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಜರ್ಮನ್ ರಾಯಭಾರಿ ಕಚೇರಿಯ ಸಿಬ್ಬಂದಿಗಳನ್ನು ಯಾವ ದೇಶಕ್ಕೆ ಸ್ಥಳಾಂತರಿಸಿದೆ ಎಂಬುದನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ರಾಯಭಾರಿ ಕಚೇರಿ ಕಾರ್ಯನಿರ್ವಹಿಸುತ್ತಿದೆ ಮತ್ತು ಇರಾನ್ನಲ್ಲಿರುವ ಜರ್ಮನ್ ಪ್ರಜೆಗಳು ಫೋನ್ ಮೂಲಕ ಸಂಪರ್ಕಿಸಬಹುದು. ಭೂ ಮಾರ್ಗದ ಮೂಲಕ ದೇಶವನ್ನು ತೊರೆಯುವ ಸಂಭಾವ್ಯ ಆಯ್ಕೆಗಳ ಕುರಿತು ಸಲಹೆ ನೀಡುವುದನ್ನು ಮುಂದುವರಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ಇರಾನ್ ಕುರಿತು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದನ್ನು ಇರಾನ್ ಖಂಡಿಸಿತ್ತು. ಇರಾನ್ ನಲ್ಲಿರುವ ಜರ್ಮನಿಯ ರಾಯಭಾರಿಗೆ ಸಮನ್ಸ್ ನೀಡಿತ್ತು.
ಇರಾನ್ ವಿರುದ್ಧ ಇಸ್ರೇಲ್ನ ಅಪ್ರಚೋದಿತ ದಾಳಿಗಳು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತದೆ ಎಂಬ ಕಾನೂನು ವಿದ್ವಾಂಸರ ಬಲವಾದ ಒಮ್ಮತದ ಹೊರತಾಗಿಯೂ, ಇರಾನ್ ವಿರುದ್ಧ ದಾಳಿ ನಡೆಸುವ ನಿರ್ಧಾರಕ್ಕಾಗಿ ಇಸ್ರೇಲ್ ಸೈನ್ಯ ಮತ್ತು ನಾಯಕತ್ವದ “ಧೈರ್ಯ”ವನ್ನು ಫ್ರೆಡ್ರಿಕ್ ಮೆರ್ಜ್ ಶ್ಲಾಘಿಸಿದ್ದರು.







