ಸೆಪ್ಟೆಂಬರ್ ಒಳಗೆ ವಿವಾಹವಾಗಬೇಕು, ಇಲ್ಲದಿದ್ದರೆ ಕೆಲಸದಿಂದ ಕಿತ್ತೊಗೆಯಲಾಗುವುದು : ಅವಿವಾಹಿತರು, ವಿಚ್ಛೇದಿತರಿಗೆ ಗಡುವು ನೀಡಿದ ಚೀನಾ ಕಂಪೆನಿ!

Credit: iStock Photo
ಬೀಜಿಂಗ್: ಜನಸಂಖ್ಯೆ ಪ್ರಮಾಣದಲ್ಲಿ ಇಡೀ ವಿಶ್ವದಲ್ಲೇ ಎರಡನೆ ಸ್ಥಾನದಲ್ಲಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ವೈವಾಹಿಕ ದರದಲ್ಲಿ ಗಂಭೀರ ಸ್ವರೂಪದ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿನ ಕಂಪೆನಿಯೊಂದು ಚೀನಾದ ವಿವಾಹ ದರವನ್ನು ಏರಿಕೆ ಮಾಡಲು ವಿಶಿಷ್ಟ ತಂತ್ರವೊಂದರ ಮೊರೆ ಹೋಗಿ ಸುದ್ದಿಯಾಗಿದೆ.
“ಸೆಪ್ಟೆಂಬರ್ ಒಳಗೆ ವಿವಾಹವಾಗಬೇಕು, ಇಲ್ಲದಿದ್ದರೆ ಕೆಲಸದಿಂದ ಕಿತ್ತೊಗೆಯಲಾಗುವುದು” ಎಂದು ಚೀನಾದ ಶುಂಟಿಯಾನ್ ಕೆಮಿಕಲ್ ಗ್ರೂಪ್ ಕಂಪೆನಿಯು ತನ್ನ ಅವಿವಾಹಿತ ಹಾಗೂ ವಿಚ್ಛೇದಿತ ಉದ್ಯೋಗಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಆದರೆ, ಕೇವಲ ಒಂದೇ ದಿನದಲ್ಲಿ ಈ ನೋಟಿಸ್ ಅನ್ನು ಹಿಂಪಡೆದಿದೆ ಎ಼ಂದು ‘South China Morning Post’ ವರದಿ ಮಾಡಿದೆ.
ಸುಮಾರು 1,200 ಮಂದಿ ಉದ್ಯೋಗಿಗಳನ್ನು ಹೊಂದಿರುವ ಶುಂಟಿಯಾನ್ ಕೆಮಿಕಲ್ ಗ್ರೂಪ್, ತನ್ನ ಸಂಸ್ಥೆಯಲ್ಲಿನ ವೈವಾಹಿಕ ದರವನ್ನು ಏರಿಕೆ ಮಾಡಲು ಜನವರಿ ತಿಂಗಳಲ್ಲಿ ಈ ನೀತಿಯನ್ನು ಪ್ರಕಟಿಸಿತ್ತು. ತನ್ನಲ್ಲಿ ಕೆಲಸ ನಿರ್ವಹಿಸುತ್ತಿರುವ 28 ವರ್ಷದಿಂದ 58 ವರ್ಷಗಳ ನಡುವಿನ ಎಲ್ಲ ಅವಿವಾಹಿತ ಹಾಗೂ ವಿಚ್ಛೇದಿತ ಉದ್ಯೋಗಿಗಳು ಸೆಪ್ಟೆಂಬರ್, 2025ರ ಅಂತ್ಯದೊಳಗೆ ವಿವಾಹವಾಗಬೇಕು ಎಂದು ಕಂಪೆನಿ ಸೂಚಿಸಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಾರ್ಚ್ ಅಂತ್ಯದೊಳಗೆ ವಿವಾಹವಾಗದವರು ಸ್ವಯಂ ದೂಷಣೆಯ ಪತ್ರವನ್ನು ಬರೆದು ಕೊಡಬೇಕು ಎಂದೂ ಕಂಪೆನಿಯು ಸೂಚಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ಜೂನ್ ಅಂತ್ಯದೊಳಗೆ ವಿವಾಹವಾಗದ ಉದ್ಯೋಗಿಗಳ ಮೌಲ್ಯಮಾಪನವನ್ನು ಕಂಪೆನಿ ನಡೆಸಲಿದ್ದು, ಅವರೇನಾದರೂ ಸೆಪ್ಟೆಂಬರ್ ಅಂತ್ಯದಲ್ಲೂ ಅವಿವಾಹಿತರಾಗಿಯೇ ಉಳಿದಿದ್ದರೆ, ಅಂಥವರನ್ನು ಕೆಲಸದಿಂದ ಕಿತ್ತೊಗೆಯಲಾಗುವುದು ಎಂದು ಕಂಪೆನಿ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.
ಲನ್ಯಿ ನಗರದಲ್ಲಿರುವ ಈ ಕಂಪೆನಿಯು 2001ರಲ್ಲಿ ಸ್ಥಾಪನೆಗೊಂಡಿದ್ದು, ಚೀನಾದ ಮುಂಚೂಣಿ 50 ಕಂಪೆನಿಗಳ ಪೈಕಿ ಒಂದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕಂಪೆನಿಯ ಈ ನೀತಿಯನ್ನು ಹಲವಾರು ಸಾಮಾಜಿಕ ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದು, ನೀವು ನಿಮ್ಮ ವ್ಯವಹಾರವನ್ನಷ್ಟೇ ನೋಡಿಕೊಂಡು, ಉದ್ಯೋಗಿಗಳ ಖಾಸಗಿ ಬದುಕಿನಿಂದ ದೂರ ಉಳಿಯಿರಿ ಎಂದು ಕಿಡಿ ಕಾರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೆಕಿಂಗ್ ಯೂನಿವರ್ಸಿಟಿ ಲಾ ಸ್ಕೂಲ್ ನ ಸಹ ಪ್ರಾಧ್ಯಾ ಪಕ ಯಾನ್ ತಿಯಾನ್, ಕಂಪೆನಿಯ ನೀತಿಯು ಚೀನಾದ ಕಾರ್ಮಿಕರ ಕಾನೂನು ಹಾಗೂ ಕಾರ್ಮಿಕರ ಗುತ್ತಿಗೆ ಕಾನೂನನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ ಎಂದು ‘South China Morning Post’ ವರದಿ ಮಾಡಿದೆ.
ಚೀನಾದ ಕಾರ್ಮಿಕರ ಕಾನೂನುಗಳ ಪ್ರಕಾರ, ಕಂಪೆನಿಗಳು ಅಭ್ಯರ್ಥಿಗಳ ವಿವಾಹ ಹಾಗೂ ಮಕ್ಕಳ ಕುರಿತು ವಿವರಗಳನ್ನು ಕೇಳುವಂತಿಲ್ಲ. ಆದರೆ, ವಾಸ್ತವವಾಗಿ ಇದಾಗುತ್ತಿಲ್ಲ ಎಂದು ಯಾನ್ ಹೇಳಿದ್ದಾರೆ.
ಈ ನಡುವೆ, ಚೀನಾದಲ್ಲಿನ ವೈವಾಹಿಕ ದರವು ಕಳೆದ ವರ್ಷ ದಾಖಲೆಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 6.1 ದಶಲಕ್ಷ ವಿವಾಹಗಳು ಮಾತ್ರ ಜರುಗಿವೆ. ಇದು 2023ರ 7.68 ದಶಲಕ್ಷ ವಿವಾಹಗಳಿಗೆ ಹೋಲಿಸಿದರೆ, ಶೇ. 20.5ರಷ್ಟು ಇಳಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ, 2023ಕ್ಕೆ ಹೋಲಿಸಿದರೆ, ಕಳೆದ ವರ್ಷ ಚೀನಾದಲ್ಲಿ ನವಜಾತ ಶಿಶುಗಳ ಜನನ ಪ್ರಮಾಣ 9.54 ದಶಲಕ್ಷದಷ್ಟಾಗಿದೆ. 2023ರ ಜನನ ಪ್ರಮಾಣಕ್ಕೆ ಹೋಲಿಸಿದರೆ, ಈ ಸಂಖ್ಯೆ 5.2 ಲಕ್ಷದಷ್ಟು ಅಧಿಕವಾಗಿದೆ. ಅಲ್ಲದೆ, 2017ರಿಂದ ಇದೇ ಪ್ರಥಮ ಬಾರಿಗೆ ಜನನ ಪ್ರಮಾಣದಲ್ಲಿ ಏರಿಕೆ ದಾಖಲಾಗಿದೆ.
ಯುವಜನರಲ್ಲಿ ವಿವಾಹವಾಗುವ ಬಗ್ಗೆ ನಿರಾಸಕ್ತಿ ಮೂಡಿರುವುದರಿಂದ, ಕೆಲ ಸರಕಾರಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದು, ಈ ಪ್ರಕ್ರಿಯೆಗೆ ಪ್ರೋತ್ಸಾಹ ಧನವನ್ನು ಘೋಷಿಸಿವೆ. ಚೀನಾದ ಶಾಂಕ್ಸಿ ಪ್ರಾಂತ್ಯವು 35 ವರ್ಷದೊಳಗಿನ ಮಹಿಳೆಯರು ಹಾಗೂ ಪುರುಷರ ಪ್ರಥಮ ವಿವಾಹಕ್ಕೆ 1,500 ಯುವಾನ್ (200 ಅಮೆರಿಕನ್ ಡಾಲರ್) ಬಹುಮಾನವನ್ನು ಘೋಷಿಸಿದೆ.







