ಘಾನಾ: ಚಿನ್ನದ ಗಣಿಯಲ್ಲಿ ಸೇನೆಯ ಕಾರ್ಯಾಚರಣೆ ; 9 ಮಂದಿ ಮೃತ್ಯು

PC : Reuters
ಅಕ್ರಾ: ಪಶ್ಚಿಮ ಆಫ್ರಿಕಾದ ಘಾನಾ ದೇಶದ ಅಶಾಂಟಿ ಪ್ರಾಂತದಲ್ಲಿರುವ ಒಬುವಾಸಿ ಚಿನ್ನದ ಗಣಿಗಾರಿಕೆ ಪ್ರದೇಶದಲ್ಲಿ ಸೇನೆಯು ನಡೆಸಿದ ಕಾರ್ಯಾಚರಣೆಯಲ್ಲಿ 9 ಮಂದಿ ಸಾವನ್ನಪ್ಪಿದ್ದು ಇತರ 14 ಮಂದಿ ಗಾಯಗೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಗಣಿಗಾರಿಕೆ ಪ್ರದೇಶದಲ್ಲಿ ನಿರಾಯುಧ ಜನರ ಮೇಲೆ ಸೇನೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು ಕನಿಷ್ಠ 9 ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ಘಾನಾದ `ನ್ಯಾಷನಲ್ ಅಸೋಸಿಯೇಷನ್ ಆಫ್ ಸ್ಮಾಲ್ಸ್ಕೇಲ್ ಮೈನರ್ಸ್'ನ ಅಧ್ಯಕ್ಷ ಕೋಫಿ ಆಡಮ್ಸ್ ಆರೋಪಿಸಿದ್ದಾರೆ. ಸ್ಥಳೀಯ ನಿರ್ಮಿತ ರೈಫಲ್ಸ್ಗಳನ್ನು ಹೊಂದಿದ್ದ ಸುಮಾರು 60 ಮಂದಿ ಅಕ್ರಮ ಗಣಿಗಾರಿಕೆ ನಡೆಸಲು ಗಣಿಯ ತಡೆಬೇಲಿಯನ್ನು ಮುರಿದು ಒಳನುಗ್ಗಿ ಅಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯತ್ತ ಗುಂಡು ಹಾರಿಸಿದರು. ಭದ್ರತಾ ಸಿಬ್ಬಂದಿ ನಡೆಸಿದ ಪ್ರತಿದಾಳಿಯಲ್ಲಿ ಅಕ್ರಮ ಪ್ರವೇಶ ಮಾಡಿದ್ದ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಘಾನಾದ ಸಶಸ್ತ್ರ ಪಡೆ ಹೇಳಿದೆ. ಇದೊಂದು ದುರಂತ ಘಟನೆ ಎಂದು ಘಾನಾ ಅಧ್ಯಕ್ಷ ಜಾನ್ ಡ್ರಮಾನಿ ಮಹಾಮಾ ಹೇಳಿದ್ದು ಘಟನೆಯ ಬಗ್ಗೆ ತಕ್ಷಣ ತನಿಖೆಗೆ ಆದೇಶಿಸಿದ್ದಾರೆ. ಜತೆಗೆ, ಮೃತಪಟ್ಟವರು ಹಾಗೂ ಗಾಯಗೊಂಡವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಗಣಿಗಾರಿಕೆ ಸಂಸ್ಥೆಗೆ ಸೂಚಿಸಿರುವುದಾಗಿ ವರದಿಯಾಗಿದೆ.





