Nvidia ಮಾಜಿ ಸಿಇಒ ಹುವಾಂಗ್ ಗೆ ಮತ್ತೊಂದು ಅವಕಾಶ ನೀಡಿ: ಮತ್ತೆ ನೇಮಕಕ್ಕೆ ಟ್ರಂಪ್ ಆಗ್ರಹ

Photo: x.com/NDTVProfit
ವಾಶಿಂಗ್ಟನ್: Nvidia ಸಂಸ್ಥೆಯ ಮಾಜಿ ಸಿಇಒ ಜೆನ್ಸನ್ ಹುವಾಂಗ್ ಅವರನ್ನು ಮತ್ತೆ ನೇಮಿಸಿಕೊಳ್ಳುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಸ್ಥೆಗೆ ಆಗ್ರಹಿಸಿದ್ದಾರೆ. ವಿವಾಹೇತರ ಸಂಬಂಧಗಳ ಆರೋಪ ಹಾಗೂ ಚೀನಾದ ಗೂಢಚಾರಿಣಿ ಎಂದು ಶಂಕಿಸಲಾದ ಮಹಿಳೆಯೊಂದಿಗೆನ ಸಂಬಂಧದ ವಿವಾದದ ಹಿನ್ನೆಲೆಯಲ್ಲಿ ಹುವಾಂಗ್ ರಾಜೀನಾಮೆ ನೀಡಿದ್ದರು.
‘ಅವರು ಮತ್ತೆ ಮರಳಿ ಬರುವುದನ್ನು ನೋಡಲು ನಾನು ಬಯಸುತ್ತೇನೆ. ಅವರು ಜಗತ್ತಿನ ಅತ್ಯಂತ ಪ್ರತಿಭಾವಂತ ವ್ಯಕ್ತಿಗಳಲ್ಲಿ ಒಬ್ಬರು. ಹಾಗಾದರೆ ಅವರು ಇನ್ನೆಲ್ಲಿಗೆ ಹೋಗುತ್ತಾರೆ?’ ಎಂದು ಟ್ರಂಪ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ಜೆನ್ಸನ್ ಗೆ ಮತ್ತೊಂದು ಅವಕಾಶ ನೀಡಿದರೆ ಚೆನ್ನಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದೂ ಹೇಳಿದರು.
ಕೃತಕ ಬುದ್ಧಿಮತ್ತೆ (AI) ಕ್ಷೇತ್ರದ ಪ್ರಮುಖ ಕಂಪೆನಿಯಾಗಿರುವ Nvidiaಯ ಮುಖ್ಯಸ್ಥರಾಗಿದ್ದ ಹುವಾಂಗ್, ಚೀನಾದ ಗೂಢಚಾರಿಣಿ ಎಂದು ಶಂಕಿಸಲಾದ ಮಹಿಳೆಯೊಂದಿಗಿನ ಸಂಬಂಧದ ಆರೋಪ ಬಹಿರಂಗವಾದ ಬಳಿಕ ಕಳೆದ ವಾರ ರಾಜೀನಾಮೆ ನೀಡಿದ್ದರು. ಈ ವ್ಯಕ್ತಿಯು ನಿರ್ಬಂಧಿತ ಚಿಪ್ ಗಳನ್ನು ಚೀನಾಕ್ಕೆ ಸಾಗಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಆರಂಭಿಕ ವರದಿಯ ಬಳಿಕ ಹುವಾಂಗ್ ಅವರ ಇನ್ನೂ ಕನಿಷ್ಠ ಎರಡು ಸಂಬಂಧಗಳ ಕುರಿತು ವರದಿಗಳು ಪ್ರಕಟವಾಗಿವೆ. ಚೀನಾದ ಗೂಢಚರ್ಯೆಯ ಸಾಧ್ಯತೆಯ ಬಗ್ಗೆ ಅಮೆರಿಕದ ಗುಪ್ತಚರ ಸಂಸ್ಥೆಗಳಿಗೆ ಮೊದಲೇ ಮಾಹಿತಿ ಇತ್ತು ಎಂದೂ ವರದಿಯಾಗಿದೆ.
ಹುವಾಂಗ್ ಅವರನ್ನು ಸಮರ್ಥಿಸಿಕೊಂಡ ಟ್ರಂಪ್, ‘ಅವರು ಒಳ್ಳೆಯ ಮನುಷ್ಯ. ಆದರೆ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ’ ಎಂದು ಹೇಳಿದರು.
‘ಜೆನ್ಸನ್ ಬಹಿರಂಗವಾಗಿ ಕ್ಷಮೆಯಾಚಿಸಿ ಮತ್ತೆ ಕೆಲಸಕ್ಕೆ ಮರಳಲಿ ಎಂದು ನಾನು ಬಯಸುತ್ತೇನೆ. ಏಕೆಂದರೆ ಅವರು ಬ್ಲ್ಯಾಕ್ವೆಲ್ (Blackwell) ಅನ್ನು ಸೃಷ್ಟಿಸಿದ್ದಾರೆ’ ಎಂದು ಟ್ರಂಪ್ ಹೇಳಿದರು. ಬ್ಲ್ಯಾಕ್ವೆಲ್ Nvidia ವಿನ್ಯಾಸಗೊಳಿಸಿರುವ ಅತ್ಯಾಧುನಿಕ ಚಿಪ್ ಗಳ ಸರಣಿಯಾಗಿದೆ.
ಈ ವಾರದ ಆರಂಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಹುವಾಂಗ್ ವಿಚಾರವಾಗಿ ಚರ್ಚಿಸಿದ್ದಾಗಿ ಟ್ರಂಪ್ ಹೇಳಿದ್ದಾರೆ. ‘ನಾನು ಅಧ್ಯಕ್ಷ ಕ್ಸಿ ಅವರೊಂದಿಗೆ ಈ ವಿಷಯ ಚರ್ಚಿಸಿದೆ. ಅವರು, “ಅವರು ಅದ್ಭುತ ವ್ಯಕ್ತಿ” ಎಂದು ಹೇಳಿದರು’ ಎಂದು ಟ್ರಂಪ್ ತಿಳಿಸಿದರು.
ಆದರೆ, ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಈ ವಾರದ ಆರಂಭದಲ್ಲಿ ನಡೆದ ಸಭೆಯಲ್ಲಿ ಟ್ರಂಪ್ ಅವರು ಹುವಾಂಗ್ ವಿಚಾರವನ್ನು ಕ್ಸಿ ಅವರೊಂದಿಗೆ ಚರ್ಚಿಸಿರಲಿಲ್ಲ ಎಂದು ಬೆಸೆಂಟ್ ಹೇಳಿದ್ದಾರೆ.
‘Nvidia ಬುದ್ಧಿವಂತಿಕೆಯಿಂದ ನಡೆದುಕೊಂಡರೆ’ ಹುವಾಂಗ್ ಅವರನ್ನು ಮತ್ತೆ ಸಿಇಒ ಆಗಿ ನೇಮಿಸಿಕೊಳ್ಳಬೇಕು ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಸಂಸ್ಥೆಯ ಮಂಡಳಿಯು ಈ ಪ್ರಸ್ತಾಪವನ್ನು ತಿರಸ್ಕರಿಸಿದೆ ಎನ್ನಲಾಗಿದೆ. ಆದರೂ ಹುವಾಂಗ್ ಕಂಪೆನಿಗೆ ಮರಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಆದರೆ, ಮಂಡಳಿಯ ಅಧ್ಯಕ್ಷ ಹಾರ್ವೆ ಜೋನ್ಸ್, ‘Nvidia ಮಂಡಳಿಯು ಅವರ ರಾಜೀನಾಮೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಜೆನ್ಸನ್ ಅವರನ್ನು ಸಿಇಒ ಆಗಿ ಮರುಸ್ಥಾಪಿಸುವ ಉದ್ದೇಶ ಮಂಡಳಿಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮೊದಲು ಅಮೆರಿಕದ ಮಾಧ್ಯಮ CNBCಗೆ ನೀಡಿದ ಸಂದರ್ಶನದಲ್ಲಿ ಬೆಸೆಂಟ್, ಚೀನಾದೊಂದಿಗಿನ AI ಸ್ಪರ್ಧೆ ಕುರಿತು ಮಾತನಾಡಿದ್ದರು.
ದೇಶೀಯ AI ಕ್ಷೇತ್ರಕ್ಕೆ ಟ್ರಂಪ್ ಆಡಳಿತದ ಬೆಂಬಲದ ಕುರಿತು ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಅಮೆರಿಕ ಚೀನಾಕ್ಕಿಂತ ಮುಂದಿರಬೇಕು ಎಂದು ಒತ್ತಿ ಹೇಳಿದರು.
‘ವಿದೇಶಿ AI ಮತ್ತು ವಿದೇಶಿ ವ್ಯಕ್ತಿಗಳ ದುರುಪಯೋಗದ ವಿರುದ್ಧ ನಮ್ಮ ಅತ್ಯುತ್ತಮ ರಕ್ಷಣೆಯೆಂದರೆ, ನಮ್ಮ ಸಂಶೋಧನಾ ಪ್ರಯೋಗಾಲಯಗಳು ಗಣನೀಯ ಮುನ್ನಡೆಯನ್ನು ಕಾಯ್ದುಕೊಳ್ಳುವುದು. ವಾಸ್ತವವಾಗಿ, ಅವು AI ವಿರುದ್ಧ ನಮ್ಮ ರಕ್ಷಾಕವಚವಾಗಿವೆ’ ಎಂದು ಸರ್ಕಾರದ ಆದ್ಯತೆಯ ಸೂಪರ್ ಇಂಟೆಲಿಜೆನ್ಸ್ (Super Intelligence) ಕುರಿತು ಅವರು ಹೇಳಿದರು.
‘ನಾವು ಹಿಂದೆ ಸರಿಯುವ ಅಗತ್ಯವಿಲ್ಲ. ನಿರಂತರ ಆವಿಷ್ಕಾರ, ಅತ್ಯುತ್ತಮ ಚಿಪ್ ಗಳ ಲಭ್ಯತೆ ಮತ್ತು ಸ್ಮಾರ್ಟ್ ನೀತಿಗಳ ಮೂಲಕ ನಮ್ಮ ಸಂಶೋಧನಾ ಪ್ರಯೋಗಾಲಯಗಳು ಮುನ್ನಡೆಯನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಬೆಸೆಂಟ್ ಅಭಿಪ್ರಾಯಪಟ್ಟರು.
ಮಿಲಿಟರಿ ಕ್ಷೇತ್ರದಲ್ಲಿ AI ಬಳಕೆಗೆ ಸಂಬಂಧಿಸಿದ ಕೆಲವು ನಿಯಂತ್ರಣ ಕ್ರಮಗಳ ಕುರಿತು ಟ್ರಂಪ್ ಮತ್ತು ಕ್ಸಿ ಒಪ್ಪಿಕೊಂಡಿದ್ದಾರೆ ಎಂದೂ ಬೆಸೆಂಟ್ ಹೇಳಿದರು.
‘AI ಯಾವುದೇ ಮಿಲಿಟರಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮಾನವರು ಯಾವಾಗಲೂ ಭಾಗಿಯಾಗಿರಬೇಕು ಹಾಗೂ ಪ್ರಮುಖ ಮಿಲಿಟರಿ ಕ್ರಮಗಳಿಗೆ AI ಸ್ವಾಯತ್ತವಾಗಿ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಬಾರದು ಎಂಬುದಕ್ಕೆ ಅಧ್ಯಕ್ಷ ಟ್ರಂಪ್ ಮತ್ತು ಅಧ್ಯಕ್ಷ ಕ್ಸಿ ಒಪ್ಪಿಕೊಂಡಿದ್ದಾರೆ’ ಎಂದು ಅವರು ತಿಳಿಸಿದರು.
AI ಆಧಾರಿತ ಸೈಬರ್ ದಾಳಿಗಳ ಬೆದರಿಕೆಯ ಕುರಿತು ಮಾತನಾಡಿದ ಬೆಸೆಂಟ್, ಅಮೆರಿಕದ AI ಕಂಪೆನಿಗಳು ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳುವುದು ಮತ್ತು ಇತರ AI ಮಾದರಿಗಳ ವಿರುದ್ಧ ಉತ್ತಮ ರಕ್ಷಣೆ ಒದಗಿಸುವುದು ಅತ್ಯಂತ ಪರಿಣಾಮಕಾರಿ ರಕ್ಷಣಾ ಕ್ರಮವಾಗಿದೆ ಎಂದು ಪುನರುಚ್ಚರಿಸಿದರು.







