ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ| ಟ್ರಂಪ್ ಅವರ ನೀತಿಗಳಿಗೆ ಸಿಕ್ಕ ಹಿನ್ನಡೆ: ಜಾಗತಿಕ ನಾಯಕರ ಪ್ರತಿಕ್ರಿಯೆ

Photo Credit : aljazeera.com
ವಾಶಿಂಗ್ಟನ್: ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟ್ಗಳು ಭರ್ಜರಿ ಜಯ ಗಳಿಸಿದ್ದು, ಇದಕ್ಕೆ ಜಾಗತಿಕ ನಾಯಕರು ಪ್ರತಿಕ್ರಿಯಿಸಿದ್ದಾರೆ. ಈ ಫಲಿತಾಂಶವು ಅಧ್ಯಕ್ಷ ಟ್ರಂಪ್ ಅವರ ನೀತಿಗಳಿಗೆ ಸಿಕ್ಕ ಹಿನ್ನಡೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಒಂದು ಸಂಭಾವ್ಯ ತಿರುವು ಎಂದು ಹಲವರು ಬಣ್ಣಿಸಿದ್ದಾರೆ.
ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಸ್ ಡೆಮಾಕ್ರಟಿಕ್ ಪಕ್ಷದ ವಿಜಯವನ್ನು ಸ್ವಾಗತಿಸಿದ್ದು, ಇದು ಜನರನ್ನು ಬಡತನಕ್ಕೆ ತಳ್ಳುವ ಮತ್ತು ಸಾಮಾಜಿಕ ವಿಭಜನೆಯನ್ನು ಹೆಚ್ಚಿಸುವ ನೀತಿಗಳಿಗೆ ಸಿಕ್ಕ ಹಿನ್ನಡೆ ಎಂದು ಬಣ್ಣಿಸಿದ್ದಾರೆ. ರಶ್ಯವು ಡೆಮಾಕ್ರಟಿಕ್ ಗೆಲುವಿಗೆ ಸಂಯಮದ ಪ್ರತಿಕ್ರಿಯೆ ನೀಡಿದೆ. ಟ್ರಂಪ್ ಇನ್ನು ಕೂಡ ಅಧಿಕಾರದಲ್ಲಿದ್ದಾರೆ ಮತ್ತು ಅವರು ಶಾಂತಿ ಸ್ಥಾಪನೆಯ ತಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತಾರೆ ಎಂದು ಆಶಿಸುತ್ತೇವೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಈ ಫಲಿತಾಂಶ ಅಮೆರಿಕದ ಪ್ರಜಾಪ್ರಭುತ್ವಕ್ಕೆ ಮತ್ತು ಡೆಮಾಕ್ರಟ್ಗಳಿಗೆ ಸಿಕ್ಕ ಬೃಹತ್ ಉತ್ತೇಜನ ಎಂದು ಬ್ರಿಟಿಷ್ ಆರೋಗ್ಯ ಸಚಿವ ಜೇಮ್ಸ್ ಫ್ರಿತ್ ಬಣ್ಣಿಸಿದ್ದಾರೆ. ನಾರ್ವೆ ಪ್ರಧಾನಿ ಜೊನಾಸ್ ಗಹ್ರ್ ಸ್ಟೋರ್ ಡೆಮಾಕ್ರಟಿಕ್ ವಿಜಯವನ್ನು ಅಮೆರಿಕನ್ ಮತದಾರರಲ್ಲಿ ಬದಲಾಗುತ್ತಿರುವ ರಾಜಕೀಯ ಮನಸ್ಥಿತಿಯ ಪ್ರಮುಖ ಸಂಕೇತ ಎಂದು ಬಣ್ಣಿಸಿದ್ದಾರೆ. ಡೆಮಾಕ್ರಟಿಕ್ ವಿಜಯವು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಹೊಸ ಹಂತಕ್ಕೆ ಮುನ್ನುಡಿ ಬರೆಯಬಹುದು. ಈ ಫಲಿತಾಂಶಗಳು ಜಾಗತಿಕ ಸಂಬಂಧಗಳಲ್ಲಿ ಹೊಸ ಯುಗವನ್ನು ಪರಿಚಯಿಸಲಿವೆ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಪ್ರತಿಕ್ರಿಯಿಸಿದ್ದಾರೆ.






