ಕೆನಡಾ ಅಮೆರಿಕದೊಂದಿಗೆ ಸೇರ್ಪಡೆಗೊಂಡರೆ `ಗೋಲ್ಡನ್ ಡೋಮ್' ಉಚಿತ: ಟ್ರಂಪ್

ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್: ಕೆನಡಾವು ಅಮೆರಿಕದ ಭಾಗವಾದರೆ ತನ್ನ ಉದ್ದೇಶಿತ `ಗೋಲ್ಡನ್ ಡೋಮ್' ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಉಚಿತವಾಗಿ ಸೇರ್ಪಡೆಗೊಳ್ಳಬಹುದು. ಇಲ್ಲದಿದ್ದರೆ ವ್ಯವಸ್ಥೆಯ ಭಾಗವಾಗಲು ಕೆನಡಾಕ್ಕೆ 61 ಶತಕೋಟಿ ಡಾಲರ್ ವೆಚ್ಚವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.
ಉತ್ತರದಲ್ಲಿರುವ ನೆರೆದೇಶ ಕೆನಡಾವು ಅಮೆರಿಕದ 51ನೇ ರಾಜ್ಯವಾಗಬೇಕು ಎಂದು ಟ್ರಂಪ್ ಪದೇ ಪದೇ ಹೇಳುತ್ತಿದ್ದಾರೆ. ಕೆನಡಾ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಸೇರ್ಪಡೆಗೊಳ್ಳಲು ಆಸಕ್ತಿ ವ್ಯಕ್ತಪಡಿಸಿದೆ. `ನಮ್ಮ ಅಸಾಧಾರಣ ಗೋಲ್ಡನ್ ಡೋಮ್ ವ್ಯವಸ್ಥೆಯ ಭಾಗವಾಗಲು ತುಂಬಾ ಬಯಸುತ್ತಿರುವ ಕೆನಡಾಕ್ಕೆ ನಾನು ಒಂದು ಕಿವಿಮಾತು ಹೇಳಿದ್ದೇನೆ. ಪ್ರತ್ಯೇಕ ರಾಷ್ಟ್ರವಾಗಿ ಉಳಿದರೆ 61 ಶತಕೋಟಿ ಡಾಲರ್ ವೆಚ್ಚವಾಗುತ್ತದೆ. ನಮ್ಮ 51ನೇ ಆತ್ಮೀಯ ರಾಜ್ಯವಾದರೆ ಶೂನ್ಯ ಡಾಲರ್ ವೆಚ್ಚವಾಗುತ್ತದೆ. ಅವರು ನನ್ನ ಪ್ರಸ್ತಾಪವನ್ನು ಪರಿಗಣಿಸುತ್ತಿದ್ದಾರೆ' ಎಂದು ತನ್ನ ಸಾಮಾಜಿಕ ಮಾಧ್ಯಮ ವೇದಿಕೆ `ಟ್ರುಥ್ ಸೋಷಿಯಲ್'ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದಾರೆ.





