ಗ್ರೀನ್ ಕಾರ್ಡ್ ಬೇಕಾದವರು ಸ್ವದೇಶಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು: ಅಮೆರಿಕ ಹೊಸ ನಿಯಮ

ಸಾಂದರ್ಭಿಕ ಚಿತ್ರ | Photo Credit : magnific.com
ವಾಶಿಂಗ್ಟನ್, ಮೇ 23: ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆ(ಯುಎಸ್ಸಿಐಎಸ್) ಶುಕ್ರವಾರ ಪ್ರಮುಖ ನೀತಿ ಬದಲಾವಣೆಯನ್ನು ಜಾರಿಗೊಳಿಸಿದ್ದು ತಾತ್ಕಾಲಿಕ ವೀಸಾದಡಿ ಅಮೆರಿಕಲ್ಲಿ ಉಳಿದಿರುವ ವಿದೇಶಿ ಪ್ರಜೆಗಳು ಕಾಯಂ ನಿವಾಸಿ ಸ್ಥಾನಮಾನಕ್ಕೆ ಅರ್ಜಿ ಸಲ್ಲಿಸುವುದನ್ನು ನಿರ್ಬಂಧಿಸಿದೆ.
ಪರಿಷ್ಕೃತ ನೀತಿಯಡಿ, ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಪ್ರವಾಸಿ ವೀಸಾದ ಅರ್ಜಿದಾರರು ಗ್ರೀನ್ಕಾರ್ಡ್ಗೆ ಅರ್ಜಿ ಸಲ್ಲಿಸಬೇಕಾದರೆ ತಮ್ಮ ದೇಶಕ್ಕೆ ಮರಳಬೇಕಾಗುತ್ತದೆ ಮತ್ತು ಅಮೆರಿಕದ ರಾಯಭಾರಿ ಕಚೇರಿ ಅಥವಾ ಕಾನ್ಸುಲೇಟ್ ಮೂಲಕ ಗ್ರೀನ್ಕಾರ್ಡ್ಗೆ ಅರ್ಜಿ ಸಲ್ಲಿಸಬೇಕು. ಈ ಹಿಂದಿನ ಕ್ರಮದಡಿ, ಅನೇಕ ಅರ್ಹ ಅಭ್ಯರ್ಥಿಗಳು ಅಮೆರಿಕದಲ್ಲಿ ಇದ್ದುಕೊಂಡೇ ಸ್ಟೇಟಸ್ ಪ್ರಕ್ರಿಯೆಯ ಹೊಂದಾಣಿಕೆಯ ಮೂಲಕ ಖಾಯಂ ನಿವಾಸಿ ಸ್ಥಾನಮಾನಕ್ಕೆ ಅರ್ಜಿ ಸಲ್ಲಿಸಬಹುದಾಗಿತ್ತು.
ಹೊಸ ನಿಯಮದ ಬಗ್ಗೆ ಗೊಂದಲ, ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಯುಎಸ್ಸಿಐಎಸ್ ಬಳಿಕ `ಆರ್ಥಿಕ ಲಾಭ' ಮತ್ತು `ರಾಷ್ಟ್ರೀಯ ಹಿತಾಸಕ್ತಿ' ಎಂಬ ಎರಡು ಪ್ರಮುಖ ವಿನಾಯಿತಿಗಳನ್ನು ಪರಿಚಯಿಸಿದೆ. ಅರ್ಜಿದಾರರ ಉಪಸ್ಥಿತಿಯು ಅಮೆರಿಕಕ್ಕೆ ಆರ್ಥಿಕ ಮೌಲ್ಯವನ್ನು ನೀಡಿದರೆ ಅಥವಾ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕ ಎಂದು ಕಂಡುಬಂದರೆ ಅವರು ಅಮೆರಿಕದಲ್ಲಿ ಇದ್ದುಕೊಂಡೇ ಗ್ರೀನ್ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು ಎಂದು ಯುಎಸ್ಸಿಐಎಸ್ ವಕ್ತಾರ ಜಾಕ್ ಕಹ್ಲರ್ ಹೇಳಿದ್ದಾರೆ.
ಈ ಬದಲಾವಣೆಯು ಅಮೆರಿಕದಲ್ಲಿ ಎಚ್-1ಬಿ ವೀಸಾದಡಿ ಕೆಲಸ ಮಾಡುತ್ತಿರುವ ಹಲವು ಭಾರತೀಯ ವೃತ್ತಿಪರರಲ್ಲಿ ಕಳವಳಕ್ಕೆ ಕಾರಣವಾಗಿದೆ. ಈ ಹಿಂದಿನ ನಿಯಮದಡಿ ಅರ್ಜಿದಾರರು ಹೆಚ್ಚಿನ ಸಂದರ್ಭದಲ್ಲಿ ಗ್ರೀನ್ಕಾರ್ಡ್ಗೆ (ಅಮೆರಿಕದಲ್ಲಿ ಇದ್ದುಕೊಂಡೇ) 10ರಿಂದ 15 ವರ್ಷ ಕಾಯಲು ಅವಕಾಶವಿತ್ತು. ಹೊಸ ನಿಯಮದಡಿ ಇಂತಹ ಅರ್ಜಿದಾರರು ತಕ್ಷಣ ಅಮೆರಿಕದಿಂದ ಭಾರತಕ್ಕೆ ಮರಳಿ ಕಾನ್ಸುಲರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಈ ಮಧ್ಯೆ, ಕೆಲವು ನುರಿತ ಕೆಲಸಗಾರರು, ಟೆಕ್ ವೃತ್ತಿಪರರು, ಸಂಶೋಧಕರು ಅಥವಾ ಕಾರ್ಯತಂತ್ರದ ಪ್ರಮುಖ ಕೆಲಸಗಾರರು ಅಮೆರಿಕಾದಲ್ಲೇ ಉಳಿಯಬಹುದು ಮತ್ತು ಸ್ಟೇಟಸ್ ಹೊಂದಾಣಿಕೆಯ ಪ್ರಕ್ರಿಯೆಯನ್ನು ಮುಂದುವರಿಸಬಹುದು ಎಂದು ನವೀಕೃತ ಸ್ಪಷ್ಟನೆ ತಿಳಿಸಿದೆ.






