ಗ್ರೀನ್ಲ್ಯಾಂಡ್ ಮಾರಾಟಕ್ಕಿಲ್ಲ: ಟ್ರಂಪ್ ಸ್ವಾಧೀನ ಬೆದರಿಕೆ ವಿರುದ್ಧ ಬೀದಿಗಿಳಿದ ಸಹಸ್ರಾರು ಜನರು

pc: bbc
ನೂಕ್,ಜ.18: ಗ್ರೀನ್ಲ್ಯಾಂಡ್ನ್ನು ವಶಪಡಿಸಿಕೊಳ್ಳುವುದಾಗಿ ಬೆದರಿಕೆಯೊಡ್ಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಶನಿವಾರ ಸಹಸ್ರಾರು ಗ್ರೀನ್ಲ್ಯಾಂಡ್ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಫಲಕಗಳನ್ನು ಹಿಡಿದಿದ್ದ ಅವರು ರಾಷ್ಟ್ರಧ್ವಜವನ್ನು ಬೀಸುತ್ತ ‘ಗ್ರೀನ್ಲ್ಯಾಂಡ್ ಮಾರಾಟಕ್ಕಿಲ್ಲ’ ಎಂಬ ಘೋಷಣೆಯನ್ನು ಕೂಗುತ್ತ ಹಿಮ ಮತ್ತು ಮಂಜುಗಡ್ಡೆಗಳ ನಡುವೆಯೇ ಜಾಥಾ ನಡೆಸಿದರು.
ಗ್ರೀನ್ಲ್ಯಾಂಡ್ ರಾಜಧಾನಿ ನೂಕ್ನ ಹೃದಯಭಾಗದಿಂದ ಅಮೆರಿಕದ ದೂತಾವಾಸದವರೆಗೆ ನಡೆದ ಜಾಥಾ ಅಂತ್ಯಗೊಳ್ಳುತ್ತಿದ್ದಂತೆಯೇ ಟ್ರಂಪ್ ಅವರು ಗ್ರೀನ್ಲ್ಯಾಂಡ್ ಮೇಲೆ ಅಮೆರಿಕದ ನಿಯಂತ್ರಣವನ್ನು ವಿರೋಧಿಸುತ್ತಿರುವ ಎಂಟು ಐರೋಪ್ಯ ದೇಶಗಳ ಮೇಲೆ ಫೆ.1ರಿಂದ ಶೇ.10 ಆಮದು ಸುಂಕವನ್ನು ಹೇರುವುದಾಗಿ ಘೋಷಿಸಿದ ಸುದ್ದಿ ಹೊರಬಿದ್ದಿತ್ತು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಗ್ರೀನ್ಲ್ಯಾಂಡ್ ನಿವಾಸಿ ಮಲಿಕ್ ಡಾಲ್ರೂಪ್-ಶೈಬೆಲ್ (21)‘ ಈ ದಿನವು ಇನ್ನಷ್ಟು ಕೆಟ್ಟದ್ದಾಗುವುದಿಲ್ಲ ಎಂದುಕೊಂಡಿದ್ದೆ, ಆದರೆ ಈಗ ಅದೇ ಸಂಭವಿಸಿದೆ. ಟ್ರಂಪ್ಗೆ ಈಗ ಯಾವುದೇ ಮಾನವೀಯತೆ ಉಳಿದಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ ’ಎಂದು ಹೇಳಿದರು.
ದ್ವೀಪದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಪ್ರತಿಭಟನೆಯಲ್ಲಿ ಗ್ರೀನ್ಲ್ಯಾಂಡ್ ಪ್ರಧಾನಿ ಜೆನ್ಸ್-ಫ್ರೆಡ್ರಿಕ್ ನೀಲ್ಸನ್ ಸೇರಿದಂತೆ ನೂಕ್ನ ಸುಮಾರು ಶೇ.25ರಷ್ಟು ನಿವಾಸಿಗಳು ಪಾಲ್ಗೊಂಡಿದ್ದರು.
ಟ್ರಂಪ್ ಆಡಳಿತವು ಈ ಹುಚ್ಚು ಆಲೋಚನೆಯನ್ನು ಕೈಬಿಡುತ್ತದೆ ಎಂದು ತಾನು ಆಶಿಸಿರುವುದಾಗಿ ಹೇಳಿದ ಗ್ರೀನ್ಲ್ಯಾಂಡ್ ಸಂಸತ್ತಿನ ಮಾಜಿ ಸದಸ್ಯೆ ಟಿಲ್ಲೀ ಮಾರ್ಟಿನಸ್ಸೆನ್, ‘ಅವರು ಆರಂಭದಲ್ಲಿ ತಮ್ಮನ್ನು ನಮ್ಮ ಸ್ನೇಹಿತರು ಎಂದು ಬಣ್ಣಿಸಿಕೊಂಡಿದ್ದರು ಮತ್ತು ಗ್ರೀನ್ಲ್ಯಾಂಡ್ನ್ನು ಡೆನ್ಮಾರ್ಕಿಗರಿಗಿಂತ ಉತ್ತಮವಾಗಿ ಅಭಿವೃದ್ಧಿಗೊಳಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಈಗ ಅವರು ನೇರವಾಗಿ ನಮಗೆ ಬೆದರಿಕೆಯೊಡ್ಡುತ್ತಿದ್ದಾರೆ. ನ್ಯಾಟೊ ಮತ್ತು ಗ್ರೀನ್ಲ್ಯಾಂಡ್ನ ಸ್ವಾಯತ್ತತೆಯ ರಕ್ಷಣೆ ಸುಂಕಕ್ಕಿಂತ ಮುಖ್ಯವಾಗಿದೆ ಎಂದು ಹೇಳಿದರು. ಆದರೆ, ಅದರ ಸಂಭಾವ್ಯ ಆರ್ಥಿಕ ಪರಿಣಾಮವನ್ನು ಅವರು ತಳ್ಳಿಹಾಕಲಿಲ್ಲ.
ಕೋಪನ್ಹೇಗನ್ ಸೇರಿದಂತೆ ಡೆನ್ಮಾರ್ಕ್ ಆಡಳಿತ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಹಾಗೂ ಕೆನಡಾದ ಉತ್ತರ ತುದಿಯಲ್ಲಿಯ ಇನ್ಯೂಟ್ ಆಡಳಿತದ ನುನಾವಟ್ ಪ್ರದೇಶದ ರಾಜಧಾನಿಯಲ್ಲಿಯೂ ಗ್ರೀನ್ಲ್ಯಾಂಡ್ ನಿವಾಸಿಗಳಿಗೆ ಬೆಂಬಲವನ್ನು ಸೂಚಿಸಿ ರ್ಯಾಲಿಗಳು ನಡೆದವು.
ಇದು ಇಡೀ ವಿಶ್ವಕ್ಕೇ ಮಹತ್ವದ್ದಾಗಿದೆ ಎಂದು ಹೇಳಿದ ಕೋಪನ್ ಹೇಗನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲಿಸ್ ರೀಚಿ ಅವರು, ಜಗತ್ತಿನಲ್ಲಿ ಅನೇಕ ಸಣ್ಣ ದೇಶಗಳಿವೆ. ಅವುಗಳಲ್ಲಿ ಯಾವುದೂ ಮಾರಾಟಕ್ಕೆ ಇಲ್ಲ ಎಂದು ಹೇಳಿದರು.







