ಗಾಝಾ ನೆರವು ಹಡಗನ್ನು ತಡೆದು ಗ್ರೆಟಾ ಥನ್ಬರ್ಗ್ ಸೇರಿದಂತೆ ಸಾಮಾಜಿಕ ಹೋರಾಟಗಾರರನ್ನು ವಶಕ್ಕೆ ಪಡೆದ ಇಸ್ರೇಲ್ : ವರದಿ

Photo | REUTERS
ಟೆಲ್ ಅವೀವ್/ಗಾಝಾ: ಗಾಝಾಗೆ ನೆರವು ಸಾಗಿಸುತ್ತಿದ್ದ ಹಡಗನ್ನು ತಡೆದು ಗ್ರೆಟಾ ಥನ್ಬರ್ಗ್ ಸೇರಿದಂತೆ ಸಾಮಾಜಿಕ ಹೋರಾಟಗಾರರನ್ನು ಇಸ್ರೇಲ್ ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಇಸ್ರೇಲ್ ನೌಕಾ ಪಡೆಗಳು ಬುಧವಾರ ಗಾಝಾಗೆ ನೆರವು ಸಾಗಿಸುತ್ತಿದ್ದ ಗ್ರೆಟಾ ಥನ್ಬರ್ಗ್ ಅವರಿದ್ದ ಹಡಗನ್ನು ತಡೆದಿದೆ. ಯುದ್ಧ ಪೀಡಿತ ಫೆಲೆಸ್ತೀನ್ ಪ್ರದೇಶದ ಮೇಲೆ ಹೇರಲಾಗಿರುವ ಇಸ್ರೇಲ್ನ ದಿಗ್ಬಂಧನವನ್ನು ತಡೆಯಲು ನೆರವು ಸಾಮಗ್ರಿಗಳನ್ನು ಹೊತ್ತು ಹಡಗುಗಳು ಸಾಗುತ್ತಿತ್ತು.
ಹಡಗುಗಳ ಮೇಲಿನ ದಾಳಿಯನ್ನು ಇಸ್ರೇಲ್ ವಿದೇಶಾಂಗ ಸಚಿವಾಲಯವು ದೃಢಪಡಿಸಿದೆ.
ಸುಮಾರು 45 ಹಡಗುಗಳನ್ನು ಒಳಗೊಂಡಿದ್ದ “ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ” ಸ್ಪೇನ್ನಿಂದ ಕಳೆದ ತಿಂಗಳು ಹೊರಟಿತ್ತು. ಸ್ವೀಡನ್ನ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ರಾಜಕಾರಣಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಯಾತ್ರೆಯಲ್ಲಿ ಭಾಗವಹಿಸಿದ್ದರು.
“ಗಾಝಾ ಸಮಯ ರಾತ್ರಿ 8.30ರ ಸುಮಾರಿಗೆ (1730 GMT), ಅಲ್ಮಾ, ಸಿರಿಯಸ್ ಹಾಗೂ ಅದಾರ ಹಡಗುಗಳನ್ನು ಒಳಗೊಂಡಂತೆ ನಮ್ಮ ಫ್ಲೋಟಿಲ್ಲಾದ ಹಲವು ಹಡಗುಗಳನ್ನು ಇಸ್ರೇಲ್ ನೌಕಾ ಪಡೆಗಳು ಅಂತಾರಾಷ್ಟ್ರೀಯ ಸಮುದ್ರದಲ್ಲಿ ಅಕ್ರಮವಾಗಿ ತಡೆದು ದಾಳಿ ಮಾಡಿವೆ,” ಎಂದು ಫ್ಲೋಟಿಲ್ಲಾ ಪ್ರಕಟಣೆಯಲ್ಲಿ ತಿಳಿಸಿದೆ.
ಘಟನೆಯ ನಂತರ, ಗ್ರೆಟಾ ಥನ್ಬರ್ಗ್ ಅವರು ಸುರಕ್ಷಿತವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.







