ಕೆನಡಾದ ಗುರುದ್ವಾರದ ಗೋಡೆಯಲ್ಲಿ ಭಾರತ ವಿರೋಧಿ ಬರಹ

Photo : KDS/X
ಒಟ್ಟಾವ: ಕೆನಡಾದ ವ್ಯಾಂಕೋವರ್ನಲ್ಲಿರುವ ಪ್ರಸಿದ್ಧ ಗುರುದ್ವಾರದ ಗೋಡೆಯಲ್ಲಿ ಖಾಲಿಸ್ತಾನ್ ಪರ ಮತ್ತು ಭಾರತ ವಿರೋಧಿ ಗೀಚುಬರಹ ಬರೆದು ಅಪವಿತ್ರಗೊಳಿಸಿದ ಘಟನೆ ವರದಿಯಾಗಿದ್ದು ಇದು ಖಾಲಿಸ್ತಾನ್ ಪ್ರತ್ಯೇಕತಾವಾದಿಗಳ ಕೃತ್ಯ ಎಂದು ಗುರುದ್ವಾರದ ಆಡಳಿತ ಮಂಡಳಿ ಖಂಡಿಸಿದೆ.
ಖಾಲ್ಸ ದಿವಾನ್ ಸೊಸೈಟಿ (ಕೆಡಿಎಸ್) ಗುರುದ್ವಾರ ಅಥವಾ ರೋಸ್ ಸ್ಟ್ರೀಟ್ ಗುರುದ್ವಾರ ಎಂದು ಜನಪ್ರಿಯಗೊಂಡಿರುವ ವ್ಯಾಂಕೋವರ್ನ ಗುರುದ್ವಾರದಲ್ಲಿ ಶನಿವಾರ ಬೆಳಿಗ್ಗೆ ಈ ಘಟನೆ ನಡೆದಿದೆ.
ಶನಿವಾರ ಬೆಳಿಗ್ಗೆ 3 ಗಂಟೆ ವೇಳೆಗೆ ಟ್ರಕ್ ನಲ್ಲಿ ಆಗಮಿಸಿದ ಗುರುತಿಸಲಾಗದ ವ್ಯಕ್ತಿಗಳು ಗುರುದ್ವಾರದ ಗೇಟ್ ಹಾಗೂ ಹೊರಗಿನ ಗೋಡೆಯಲ್ಲಿ ಭಾರತ ವಿರೋಧಿ ಗೀಚುಬರಹದ ಜೊತೆ ಖಾಲಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಯನ್ನೂ ಬರೆದಿದ್ದಾರೆ.
'ಖಾಲಿಸ್ತಾನ್ ಪ್ರತಿಪಾದಕರಾದ ಸಿಖ್ ಪ್ರತ್ಯೇಕತಾವಾದಿಗಳ ಸಣ್ಣ ಗುಂಪೊಂದು ಈ ಕೃತ್ಯ ಎಸಗಿದ್ದು ಇದು ಕೆನಡಾದ ಸಿಖ್ ಸಮುದಾಯದಲ್ಲಿ ಭಯ ಮತ್ತು ವಿಭಜನೆಯನ್ನು ಹುಟ್ಟುಹಾಕಲು ಪ್ರಯತ್ನಿಸುವ ಉಗ್ರಗಾಮಿ ಗುಂಪು ನಡೆಸುತ್ತಿರುವ ಅಭಿಯಾನದ ಒಂದು ಭಾಗವಾಗಿದೆ. ಈ ಬಗ್ಗೆ ಕೆನಡಾ ಪೊಲೀಸರಿಗೆ ದೂರು ನೀಡಲಾಗಿದೆ' ಎಂದು ಗುರುದ್ವಾರ ಆಡಳಿತ ಮಂಡಳಿ ಹೇಳಿದೆ.





