ಎಚ್-1ಬಿ ವೀಸಾ ಶುಲ್ಕ ಹೆಚ್ಚಳ ಹೊಸ ಅರ್ಜಿದಾರರಿಗೆ ಮಾತ್ರ ಅನ್ವಯ : ಶ್ವೇತಭವನ ಸ್ಪಷ್ಟನೆ

ಸಾಂದರ್ಭಿಕ ಚಿತ್ರ | PC : thewire.in
ವಾಷಿಂಗ್ಟನ್, ಸೆ.21: ಎಚ್-1 ಬಿ ವೀಸಾ ಶುಲ್ಕ ಹೆಚ್ಚಳವು ಈಗಾಗಲೇ ವೀಸಾ ಹೊಂದಿರುವವರಿಗೆ ಅನ್ವಯಿಸುವುದಿಲ್ಲ. ಇದು ಹೊಸ ಅರ್ಜಿದಾರರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಶ್ವೇತಭವನ ಸ್ಪಷ್ಟನೆ ನೀಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಹೊಸ ವೀಸಾ ನೀತಿ ರವಿವಾರ(ಸೆಪ್ಟಂಬರ್ 21ರಿಂದ) ಜಾರಿಗೆ ಬಂದಿದೆ. ಹೊಸ ವೀಸಾ ನೀತಿ ಘೋಷಿಸಿದ ಬಳಿಕ ಐಟಿ ಕ್ಷೇತ್ರದಲ್ಲಿ ಆತಂಕ, ಗೊಂದಲ ಮೂಡಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಶ್ವೇತಭವನ `ಶುಲ್ಕವು ಸೆಪ್ಟಂಬರ್ 21ರೊಳಗೆ ಸಲ್ಲಿಸಲಾದ ಎಚ್-1ಬಿ ವೀಸಾ ಅರ್ಜಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ವೀಸಾ ಹೊಂದಿರುವ, ಪ್ರಸ್ತುತ ದೇಶದಿಂದ ಹೊರಗೆ ಇರುವವರು ದೇಶಕ್ಕೆ ಮರುಪ್ರವೇಶಿಸಲು ಶುಲ್ಕವನ್ನು ಪಾವತಿಸಬೇಕಿಲ್ಲ ಎಂದು' ಹೇಳಿಕೆ ನೀಡಿದೆ.
ವೀಸಾ ಶುಲ್ಕ ಹೆಚ್ಚಳವು ಹೊಸ ಅರ್ಜಿದಾರರಿಗೆ ಮಾತ್ರ ಅನ್ವಯಿಸುತ್ತದೆ. `ಒಂದು ಬಾರಿ' ಪಾವತಿ ವ್ಯವಸ್ಥೆಯಾಗಿದ್ದು ವಾರ್ಷಿಕ ಶುಲ್ಕವಲ್ಲ. ನವೀಕರಣ ಅಥವಾ ಈಗಾಗಲೇ ವೀಸಾ ಹೊಂದಿರುವವ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕ್ಯಾರೊಲಿನ್ ಲಿವಿಟ್ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಎಚ್-1ಬಿ ವೀಸಾ ಶುಲ್ಕವನ್ನು ಹೊಸ ಅರ್ಜಿದಾರರು ಮತ್ತು ನವೀಕರಣಗೊಳಿಸುವವರು ವಾರ್ಷಿಕವಾಗಿ ಪಾವತಿಸಬೇಕಾಗುತ್ತದೆ ಎಂದು ಅಮೆರಿಕಾದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಶುಕ್ರವಾರ ನೀಡಿದ ಹೇಳಿಕೆಯ ಬಳಿಕ ಎಚ್-1ಬಿ ವೀಸಾ ಶುಲ್ಕ ಹೆಚ್ಚಳದ ಬಗ್ಗೆ ಭಾರತೀಯರು ಸೇರಿದಂತೆ ವಿವಿಧ ರಾಷ್ಟ್ರಗಳ ನಾಗರಿಕರು ಆತಂಕ ವ್ಯಕ್ತಪಡಿಸಿದ್ದರು. ಇದೀಗ ಶ್ವೇತಭವನದ ಸ್ಪಷ್ಟೀಕರಣದ ಬಳಿಕ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಎಲ್ಲಾ ಎಚ್-1ಬಿ ವೀಸಾ ಅರ್ಜಿಗಳಿಗೆ 1 ಲಕ್ಷ ಡಾಲರ್ ವಾರ್ಷಿಕ ಅರ್ಜಿ ಶುಲ್ಕ ವಿಧಿಸುವ ಹೊಸ ಕಾರ್ಯನಿರ್ವಾಹಕ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದರು. ಅಮೆರಿಕಾದಲ್ಲಿ ಎಚ್-1ಬಿ ಹೊಂದಿರುವವರಲ್ಲಿ 70%ಕ್ಕಿಂತ ಹೆಚ್ಚು ಭಾರತೀಯರಾಗಿದ್ದಾರೆ. ಟ್ರಂಪ್ ಅವರ ಆದೇಶವು ಭಾರತೀಯರಿಗೆ ಹೆಚ್ಚಿನ ಪರಿಣಾಮ ಬೀರಲಿದೆ.
ಟ್ರಂಪ್ ಆದೇಶ ಹೊರಬಿದ್ದ ಬಳಿಕ ಪ್ರಮುಖ ಟೆಕ್ ಸಂಸ್ಥೆಗಳಾದ ಮೈಕ್ರೋಸಾಫ್ಟ್, ಅಮೆಝಾನ್ `ಎಚ್-1ಬಿ ಮತ್ತು ಎಚ್-4 ವೀಸಾ ಹೊಂದಿರುವವರು ಸೆಪ್ಟಂಬರ್ 21ರೊಳಗೆ ಅಮೆರಿಕಾಕ್ಕೆ ಹಿಂತಿರುಗುವಂತೆ' ಸಲಹೆ ನೀಡಿದ್ದವು.







