ಎಚ್-1ಬಿ ವೀಸಾ ಶುಲ್ಕಗಳಿಗೆ ವಿನಾಯಿತಿ ಘೋಷಿಸಿದ ಅಮೆರಿಕ

ಸಾಂದರ್ಭಿಕ ಚಿತ್ರ | Photo Credit : freepik.com
ಟ್ರಂಪ್, ಅ.21: ಎಚ್-1ಬಿ ಸ್ಥಾನಮಾನಕ್ಕಾಗಿ ಪ್ರಾಯೋಜಕತ್ವ ಪಡೆದ ಇತ್ತೀಚಿನ ಅಂತಾರಾಷ್ಟ್ರೀಯ ಪದವೀಧರರು ಈಗಾಗಲೇ ದೇಶ(ಅಮೆರಿಕ)ದಲ್ಲಿದ್ದರೆ 1 ಲಕ್ಷ ಡಾಲರ್ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ಟ್ರಂಪ್ ಆಡಳಿತ ಸ್ಪಷ್ಟನೆ ನೀಡಿದ್ದು ಇದರಿಂದ ಅಮೆರಿಕದಲ್ಲಿರುವ ಸಾವಿರಾರು ಭಾರತೀಯ ವೃತ್ತಿಪರರಿಗೆ ಮತ್ತು ವಿದ್ಯಾರ್ಥಿಗಳಿಗೆ `ರಿಲೀಫ್' ಸಿಕ್ಕಿದಂತಾಗಿದೆ.
ಅಸ್ತಿತ್ವದಲ್ಲಿರುವ ಎಚ್-1ಬಿ ವೀಸಾ ಹೊಂದಿರುವವರು ಕಳೆದ ತಿಂಗಳು ಘೋಷಿಸಲಾದ 1 ಲಕ್ಷ ಡಾಲರ್ ಶುಲ್ಕ ಪಾವತಿಸಬೇಕಿಲ್ಲ ಎಂದು ಅಧಿಕಾರಿಗಳು ಈ ಹಿಂದೆಯೇ ಹೇಳಿದ್ದರು. ಕಾನೂನುಬದ್ಧ ವೀಸಾದೊಂದಿಗೆ ಈಗಾಗಲೇ ಅಮೆರಿಕಾದಲ್ಲಿ ಇರುವವರು, ಎಫ್-1 ಸ್ಟೂಡೆಂಟ್ ವೀಸಾ ಹೊಂದಿರುವವರು, ಎಲ್-1 ಅಂತರ್ ಕಂಪೆನಿ ವರ್ಗಾವಣೆಯಡಿ ಬಂದವರು ಹಾಗೂ ಪ್ರಸ್ತುತ ಹೊಂದಿರುವ ಎಚ್-1ಬಿ ವೀಸಾದ ನವೀಕರಣ ಅಥವಾ ವಿಸ್ತರಣೆ ಬಯಸುವವರು 1 ಲಕ್ಷ ಡಾಲರ್ (ಸುಮಾರು 90 ಲಕ್ಷ ರೂ.) ಪಾವತಿಸುವ ಅಗತ್ಯವಿಲ್ಲ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ಇಲಾಖೆ ಹೇಳಿದೆ.





