ಎಚ್-1ಬಿ ವೀಸಾ ಕಾರ್ಯಕ್ರಮ ಅಂತ್ಯಗೊಳಿಸುವ ಮಸೂದೆ ಮಂಡನೆಗೆ ಅಮೆರಿಕ ಯೋಜನೆ: ವರದಿ

ಸಾಂದರ್ಭಿಕ ಚಿತ್ರ | Photo Credit : freepik.com
ವಾಷಿಂಗ್ಟನ್, ನ.14: ಅಮೆರಿಕದ ಎಚ್-1ಬಿ ವೀಸಾ ಕಾರ್ಯಕ್ರಮವನ್ನು ಹಂತಹಂತವಾಗಿ ರದ್ದುಗೊಳಿಸುವ ಉದ್ದೇಶದ ಮಸೂದೆಯನ್ನು ಶೀಘ್ರವೇ ಮಂಡಿಸುವ ಯೋಜನೆಯಿದೆ ಎಂದು ರಿಪಬ್ಲಿಕನ್ ಪಕ್ಷದ ಸಂಸದೆ ಟೇಲರ್ ಗ್ರೀನ್ ಘೋಷಿಸಿದ್ದಾರೆ.
ಈ ಕ್ರಮವು ಎಚ್-1ಬಿ ವೀಸಾ ಕಾರ್ಯಕ್ರಮದ ದೊಡ್ಡ ಫಲಾನುಭವಿಗಳಾದ ಭಾರತೀಯ ವೃತ್ತಿಪರರಿಗೆ ಗಮನಾರ್ಹ ಪರಿಣಾಮಗಳನ್ನು ಉಂಟು ಮಾಡಬಹುದು. `ಬೃಹತ್ ತಂತ್ರಜ್ಞಾನ ಸಂಸ್ಥೆಗಳು, ಕೃತಕ ಬುದ್ಧಿಮತ್ತೆ(ಎಐ) ಕಂಪೆನಿಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ಅಮೆರಿಕದ ಪ್ರಮುಖ ಉದ್ಯಮಗಳು ಸ್ಥಳೀಯ ಕಾರ್ಮಿಕರಿಗೆ ಹಾನಿಯಾಗುವ ರೀತಿಯಲ್ಲಿ ಎಚ್-1ಬಿ ವೀಸಾ ಕಾರ್ಯಕ್ರಮವನ್ನು ದುರುಪಯೋಗ ಪಡಿಸಿಕೊಂಡಿವೆ' ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉದ್ದೇಶಿತ ಮಸೂದೆಯು `ಅಮೆರಿಕನ್ನರು ಮೊದಲು ಎಂಬ ಪರಿಕಲ್ಪನೆಯನ್ನು ಮುಂದುವರಿಸುತ್ತದೆ. ತನಗೆ ಅಮೆರಿಕನ್ ಜನರ ಬಗ್ಗೆ ಪೂರ್ಣ ವಿಶ್ವಾಸವಿದೆ ಮತ್ತು ಎಲ್ಲಾ ಕ್ಷೇತ್ರಗಳಲ್ಲೂ ಅಮೆರಿಕದ ಕಾರ್ಮಿಕರಿಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. ಮುಂದಿನ ಪೀಳಿಗೆಗೆ ಅಮೆರಿಕನ್ ಕನಸನ್ನು ರಕ್ಷಿಸಲು ಈ ಮಸೂದೆ ಅಗತ್ಯವಾಗಿದೆ. ಆದರೆ ವೈದ್ಯರು ಮತ್ತು ನರ್ಸ್ಗಳಿಗೆ ವಾರ್ಷಿಕ 10,000 ವೀಸಾ ನೀಡುವುದನ್ನು ಸದ್ಯಕ್ಕೆ ಮುಂದುವರಿಸಲಾಗುವುದು ಮತ್ತು ಮುಂದಿನ 10 ವರ್ಷಗಳಲ್ಲಿ ಹಂತಹಂತವಾಗಿ ರದ್ದುಗೊಳಿಸಲಾಗುವುದು ಎಂದು ಗ್ರೀನ್ ಹೇಳಿದ್ದಾರೆ.







