ಅಮೆರಿಕದ ಉದ್ಯೋಗ ಪರವಾನಗಿ ನವೀಕರಿಸಲು ಭಾರತಕ್ಕೆ ಬಂದು ಸಿಕ್ಕಿಹಾಕಿಕೊಂಡ H1B ವೀಸಾದಾರರು

ಸಾಂದರ್ಭಿಕ ಚಿತ್ರ | Photo Credit : freepik
ವಾಶಿಂಗ್ಟನ್, ಡಿ. 22: ತಮ್ಮ ಅಮೆರಿಕನ್ ಉದ್ಯೋಗ ಪರವಾನಿಗೆಗಳನ್ನು ನವೀಕರಿಸಲು ಈ ತಿಂಗಳು ಅಮೆರಿಕದಿಂದ ಸ್ವದೇಶಕ್ಕೆ ಮರಳಿರುವ ಭಾರತೀಯ ಎಚ್-1ಬಿ ವೀಸಾದಾರರು ಈಗ ಭಾರತದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರ ಸಂದರ್ಶನವನ್ನು ಭಾರತದಲ್ಲಿರುವ ಅಮೆರಿಕನ್ ಕೌನ್ಸುಲರ್ ಕಚೇರಿಗಳು ದಿಢೀರನೇ ಮರುನಿಗದಿಪಡಿಸಿವೆ ಎಂದು ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
ಉನ್ನತ ಕೌಶಲದ ಭಾರತೀಯ ಉದ್ಯೋಗಿಗಳ ಡಿಸೆಂಬರ್ 15 ಮತ್ತು 26ರ ನಡುವಿನ ಸಂದರ್ಶನಗಳನ್ನು ರದ್ದುಪಡಿಸಲಾಗಿದೆ ಎಂದು ವಲಸೆ ವಕೀಲರನ್ನು ಉಲ್ಲೇಖಿಸಿ ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ. ಈ ಅವಧಿಯು ಅಮೆರಿಕದ ರಜಾ ಕಾಲವಾಗಿದೆ.
ಟ್ರಂಪ್ ಆಡಳಿತದ ಹೊಸ ಸಾಮಾಜಿಕ ಮಾಧ್ಯಮ ಪರಿಶೀಲನಾ ನೀತಿಯು ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ನಿಮ್ಮ ಸಂದರ್ಶನಗಳು ವಿಳಂಬಗೊಂಡಿವೆ ಎಂಬುದಾಗಿ ಅಮೆರಿಕದ ವಿದೇಶಾಂಗ ಇಲಾಖೆಯು ಎಚ್-1ಬಿ ವೀಸಾದಾರರಿಗೆ ಕಳುಹಿಸಿದ ಇಮೇಲ್ನಲ್ಲಿ ತಿಳಿಸಿದೆ ಎಂದು ಪತ್ರಿಕೆ ಹೇಳಿದೆ.
ಯಾವುದೇ ಅಭ್ಯರ್ಥಿಯು ಅಮೆರಿಕದ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುರಕ್ಷತೆಗೆ ಬೆದರಿಕೆಯಾಗದಂತೆ ನೋಡಿಕೊಳ್ಳುವುದಕ್ಕಾಗಿ ನೂತನ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
‘‘ಅಮೆರಿಕವು ತನ್ನ ಸಾಮಾಜಿಕ ಮಾಧ್ಯಮ ಮತ್ತು ಆನ್ಲೈನ್ ಉಪಸ್ಥಿತಿ ಪರಿಶೀಲನೆ ನಿಯಮವನ್ನು ಎಚ್-1ಬಿ ವೀಸಾದಾರರು ಮತ್ತು ಅವರ ಎಚ್-4 ಅವಲಂಬಿತರಿಗೂ ವಿಸ್ತರಿಸಲು ನಿರ್ಧರಿಸಿದೆ’’ ಎಂದು ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ಡಿಸೆಂಬರ್ 10ರಂದು ಹೇಳಿತ್ತು.
ತನ್ನ ಕನಿಷ್ಠ 100 ಕಕ್ಷಿಗಾರರು ಭಾರತದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹ್ಯೂಸ್ಟನ್ನ ವಲಸೆ ಸಂಸ್ಥೆ ರೆಡ್ಡಿ ನ್ಯೂಮನ್ ಬ್ರೌನ್ ಪಿಸಿಯ ಪಾಲುದಾರೆ ಎಮಿಲಿ ನ್ಯೂಮನ್ ಹೇಳಿದ್ದಾರೆ. ತಮ್ಮ ಹತ್ತಕ್ಕೂ ಅಧಿಕ ಕಕ್ಷಿಗಾರರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಭಾರತದ ವಲಸೆ ವಕೀಲೆ ವೀಣಾ ವಿಜಯ ಅನಂತ್ ಮತ್ತು ಅಟ್ಲಾಂಟದಲ್ಲಿ ವಲಸೆ ವಿಷಯಲ್ಲಿ ವಕೀಲ ವೃತ್ತಿ ಮಾಡುತ್ತಿರುವ ಚಾರ್ಲ್ಸ್ ಕಕ್ ಹೇಳಿದ್ದಾರೆ.







