H1B ವೀಸಾ ಸಂದರ್ಶನ ಮುಂದೂಡಿಕೆ | ಅಮೆರಿಕಕ್ಕೆ ಮರಳಲಾಗದೆ ಅನೇಕ ಅರ್ಜಿದಾರರು ಸಂಕಷ್ಟದಲ್ಲಿ: ಭಾರತ ಕಳವಳ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಡಿ.26: ಭಾರೀ ಸಂಖ್ಯೆಯ ಭಾರತೀಯ ಅರ್ಜಿದಾರರ ಎಚ್1ಬಿ ವೀಸಾ ಸಂದರ್ಶನಗಳನ್ನು ಅಮೆರಿಕವು ರದ್ದುಪಡಿಸಿರುವ ಬಗ್ಗೆ ಭಾರತವು ಶುಕ್ರವಾರ ತನ್ನ ಕಳವಳ ವ್ಯಕ್ತಪಡಿಸಿದೆ. ಈ ವಿಷಯವಾಗಿ ಉಭಯದೇಶಗಳೂ ಮಾತುಕತೆಯನ್ನು ನಡೆಸುತ್ತಿವೆ ಎಂದು ಅದು ಹೇಳಿದೆ.
ತಮ್ಮ ಎಚ್-1ಬಿ ವೀಸಾ ಸಂದರ್ಶಗಳ ದಿನಾಂಕವನ್ನು ಮುಂದೂಡಿಕೆಯಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವ ಆನೇಕ ಮಂದಿ ಭಾರತೀಯ ಪ್ರಜೆಗಳಿಂದ ಭಾರತ ಸರಕಾರಕ್ಕೆ ಅಹವಾಲುಗಳು ಬಂದಿವೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತನ್ನ ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೀಸಾ ಸಂಬಂಧಿತ ವಿಚಾರಗಳು ಆಯಾ ದೇಶದ ಸಾರ್ವಭೌಮ ಅಧಿಕಾರವ್ಯಾಪ್ತಿಗೆ ಸೇರಿದ್ದಾಗಿದೆ. ಆದಾಗ್ಯೂ ಈ ವಿಚಾರವಾಗಿ ಭಾರತವು ತನ್ನ ಕಳವಳವನ್ನು ಹೊಸದಿಲ್ಲಿ ಹಾಗೂ ವಾಶಿಂಗ್ಟನ್ ನಲ್ಲಿರುವ ಸಂಬಂಧಪಟ್ಟ ಅಮೆರಿಕನ್ ರಾಜತಾಂತ್ರಿಕರಿಗೆ ತಿಳಿಸಿದೆ ಎಂದರು.
ಎಚ್-1ಬಿ ವೀಸಾ ಸಂದರ್ಶನ ಮುಂದೂಡಿಕೆಯಿಂದಾಗಿ ಹಲವಾರು ಭಾರತೀಯರು ಅಮೆರಿಕಕ್ಕೆ ವಾಪಸ್ ಹೋಗಲಾಗದೆ, ಅವರು ಭಾರತದಲ್ಲೇ ತಮ್ಮ ವಾಸ್ತವ್ಯದ ಅವಧಿಯನ್ನು ವಿಸ್ತರಿಸಬೇಕಾಗಿ ಬಂದಿದೆ. ಇದರಿಂದಾಗಿ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಸಾಕಷ್ಟು ಸಂಕಷ್ಟ ಉಂಟಾಗಿದೆ ಎಂದು ಜೈಸ್ವಾಲ್ ತಿಳಿಸಿದರು.
ನಮ್ಮ ಪ್ರಜೆಗಳಿಗೆ ಉಂಟಾಗಿರುವ ಅಡಚಣೆಗಳನ್ನು ಕನಿಷ್ಠಗೊಳಿಸಲು ಭಾರ ಸರಕಾರವು ಅಮೆರಿಕದೊಂದಿಗೆ ಮಾತುಕತೆಯಲ್ಲಿ ನಿರತವಾಗಿದೆ ಎಂದು ಜೈಸ್ವಾಲ್ ತಿಳಿಸಿದರು..
ಭಾರತದಲ್ಲಿ ಈ ತಿಂಗಳ ಮಧ್ಯಾವಧಿಯಲ್ಲಿ ನಿಗದಿಯಾಗಿದ್ದ ಸಾವಿರಾರು ಎಚ್-1ಬಿ ವೀಸಾ ಅರ್ಜಿ ಸಂದರ್ಶನಗಳನ್ನು ಹಲವಾರು ತಿಂಗಳುಗಳ ಕಾಲ ಅಮೆರಿಕವು ದಿಢೀರನೇ ಮುಂದೂಡಿತ್ತು. ಅರ್ಜಿದಾರರು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪೋಸ್ಟ್ ಗಳನ್ನು ಹಾಗೂ ಅವರ ಆನ್ ಲೈನ್ ಪ್ರೊಫೈಲ್ಗಳ ಪರಿಶೋಧನೆ ನಡೆಸುವುದಕ್ಕಾಗಿ ತಾನು ಈ ಕ್ರಮವನ್ನು ಕೈಗೊಂಡಿರುವುದಾಗಿ ಅಮೆರಿಕ ಹೇಳಿದೆ. ಇದರಿಂದಾಗಿ ಎಚ್1ಬಿ ವೀಸಾ ಅರ್ಜಿದಾರರಿಗೆ ಅಮೆರಿಕಕ್ಕೆ ಹಿಂತಿರುಗಲು ವಿಳಂಬವುಂಟಾಗಿದೆ.







