ಅಮೆರಿಕ ವಾಯುಪಡೆಯ ಪ್ರಮುಖ ಕ್ಲೌಡ್ ನೆಟ್ವರ್ಕ್ ಗೆ ಹ್ಯಾಕರ್ ಗಳ ಕನ್ನ; ವರದಿ

Photo Credit : AP
ವಾಶಿಂಗ್ಟನ್, ನ. 27: ಅಮೆರಿಕ ವಾಯುಪಡೆಯ ಪ್ರಮುಖ ಕ್ಲೌಡ್ ಕಂಪ್ಯೂಟಿಂಗ್ ವೇದಿಕೆಯಾದ ‘ಕ್ಲೌಡ್ ಒನ್’ ಮೇಲೆ ಹ್ಯಾಕರ್ ಗಳು ಸೈಬರ್ ದಾಳಿ ನಡೆಸಿದ್ದು, ಇದು ಸೂಕ್ಷ್ಮ ಸೇನಾ, ಸಿಬ್ಬಂದಿ ಮತ್ತು ಲಾಜಿಸ್ಟಿಕ್ಸ್ (ಸರಕು ಸಾಗಣೆ) ದತ್ತಾಂಶಗಳ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಸಿಸ್ಟಮ್ ಅಪ್ಗ್ರೇಡ್ (ನವೀಕರಣ) ಮಾಡುವ ಸಮಯದಲ್ಲಿ ಈ ಭದ್ರತಾ ಉಲ್ಲಂಘನೆಯು ಪತ್ತೆಯಾಗಿದೆ. ಈ ಘಟನೆಯಿಂದಾಗಿ ವೇದಿಕೆಯಾದ್ಯಂತ ಕಾರ್ಯಾಚರಣೆಗಳಿಗೆ ಅಡ್ಡಿಯಾಗಿದೆ. ಆದರೆ ಹ್ಯಾಕರ್ ಗಳ ಗುರುತು, ದಾಳಿಯ ತೀವ್ರತೆ ಮತ್ತು ಯಾವುದೇ ದತ್ತಾಂಶ ಕಳವಾಗಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ವಾಯುಪಡೆಯ ಮಾಹಿತಿ, ಸಿಸ್ಟಮ್ ಗಳು ಮತ್ತು ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ರಕ್ಷಿಸಲು ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಮೆರಿಕ ವಾಯುಪಡೆ ತಿಳಿಸಿದೆ ಎಂದು ವರದಿಯಾಗಿದೆ.
ವ್ಯಾಪಕ ವ್ಯವಸ್ಥೆಯನ್ನು ನಿರ್ವಹಿಸುವ ಕ್ಲೌಡ್ ಒನ್ನ ‘ಕಂಟ್ರೋಲ್ ಪ್ಲೇನ್’ ಪ್ರವೇಶಿಸಲು ಹ್ಯಾಕರ್ ಗಳು ಸಾಫ್ಟ್ವೇರ್ ದೋಷವೊಂದನ್ನು ಬಳಸಿಕೊಂಡಿದ್ದಾರೆ. ಇಂತಹ ಪ್ರವೇಶವು ಒಳನುಸುಳುಕೋರರಿಗೆ ಸೇನಾ ವಿಮಾನಗಳ ಕಾರ್ಯಾಚರಣೆಯ ಸ್ಥಿತಿಯನ್ನು ಪರಿಶೀಲಿಸಲು ಅಥವಾ ಬಿಡಿಭಾಗಗಳ ಚಲನವಲನವನ್ನು ಪತ್ತೆಹಚ್ಚಲು ಅವಕಾಶ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ಎಚ್ಚರಿಸಿವೆ. ಆದರೆ, ಹ್ಯಾಕರ್ ಗಳು ಅಂತಹ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎಂಬುದಕ್ಕೆ ಯಾವುದೇ ದೃಢೀಕರಣವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
2017ರಲ್ಲಿ ಆರಂಭವಾದ ‘ಕ್ಲೌಡ್ ಒನ್’ ವಾಯುಪಡೆಯ ವ್ಯವಸ್ಥೆಗಳನ್ನು ಬೆಂಬಲಿಸಲು ಮೈಕ್ರೋಸಾಫ್ಟ್, ಅಮೆಜಾನ್, ಒರಾಕಲ್ ಮತ್ತು ಆಲ್ಫಾಬೆಟ್ ಸಂಸ್ಥೆಗಳ ಸೇವೆಗಳನ್ನು ಒಟ್ಟುಗೂಡಿಸುತ್ತದೆ. ಉತ್ತರ ಅಮೆರಿಕದಾದ್ಯಂತ ವಾಯು ರಕ್ಷಣಾ ರಾಡಾರ್ ಡೇಟಾವನ್ನು ಸಂಗ್ರಹಿಸಲು ಮತ್ತು ವಿಶ್ವದಾದ್ಯಂತ 200ಕ್ಕೂ ಹೆಚ್ಚು ಅಮೆರಿಕ ವಾಯುಪಡೆಯ ನೆಲೆಗಳಲ್ಲಿ ಬಾಂಬ್ ಗಳು ಹಾಗೂ ಕ್ಷಿಪಣಿಗಳ ಮೇಲೆ ನಿಗಾ ಇರಿಸಲು ಬಳಸುವ ವ್ಯವಸ್ಥೆಗಳಿಗೂ ಇದು ಬೆಂಬಲ ನೀಡುತ್ತದೆ.






