ಅಮೆರಿಕದ ಹೌಸ್ ಸ್ಪೀಕರ್ ಹುದ್ದೆಗೆ ಹಕೀಮ್ ಜೆಫ್ರಿಸ್ ನಾಮನಿರ್ದೇಶನ
ಈ ಹುದ್ದೆಗೆ ಪಕ್ಷದ ಅಭ್ಯರ್ಥಿಯಾದ ಮೊದಲ ಕಪ್ಪು ಜನಾಂಗೀಯ ನಾಯಕ; 251 ಸದಸ್ಯರ ಬೆಂಬಲ

Photo Credit : aljazeera.com
ವಾಷಿಂಗ್ಟನ್: ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಸ್ಪೀಕರ್ ಹುದ್ದೆಗೆ ಡೆಮಾಕ್ರಟಿಕ್ ಪಕ್ಷವು ಹಕೀಮ್ ಜೆಫ್ರಿಸ್ ಅವರನ್ನು ಅಧಿಕೃತವಾಗಿ ನಾಮನಿರ್ದೇಶನ ಮಾಡಿದೆ. ಈ ಮೂಲಕ ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಈ ಹುದ್ದೆಗೆ ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡ ಮೊದಲ ಕಪ್ಪು ಜನಾಂಗದ ವ್ಯಕ್ತಿ ಎಂಬ ಹೆಗ್ಗಳಿಕೆಗೆ 56 ವರ್ಷದ ಜೆಫ್ರಿಸ್ ಪಾತ್ರರಾಗಿದ್ದಾರೆ.
ಬುಧವಾರ ನಡೆದ ಪಕ್ಷದ ಆಂತರಿಕ ಮತದಾನದಲ್ಲಿ ನ್ಯೂಯಾರ್ಕ್ ನ ಕಾಂಗ್ರೆಸ್ ಸದಸ್ಯ ಜೆಫ್ರಿಸ್ ಅವರಿಗೆ 251 ಸದಸ್ಯರು ಬೆಂಬಲ ಸೂಚಿಸಿದರು. ಕೇವಲ 11 ಸದಸ್ಯರು ಅವರ ಉಮೇದುವಾರಿಕೆಯನ್ನು ವಿರೋಧಿಸಿದರು. ಇತ್ತೀಚೆಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟ್ ಗಳು ಭರ್ಜರಿ ಗೆಲುವು ದಾಖಲಿಸಿ, ಅಮೆರಿಕದ ಕಾಂಗ್ರೆಸ್ನ ಎರಡೂ ಸದನಗಳ ಮೇಲೆ ಹಿಡಿತ ಸಾಧಿಸಿದ ಕೆಲವೇ ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ.
ಮತದಾನಕ್ಕೂ ಮುನ್ನ ಜೆಫ್ರಿಸ್ ಅವರ ನಾಯಕತ್ವದ ಬಗ್ಗೆ ಪಕ್ಷದ ಎಡಪಂಥೀಯ ನಿಲುವುಳ್ಳ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು.
ಈ ತಿಂಗಳು ನಡೆದ ಚುನಾವಣೆಯಲ್ಲಿ ಗೆದ್ದ ಕೆಲವು ಹೊಸ ಸದಸ್ಯರು ಜೆಫ್ರಿಸ್ ಅವರನ್ನು ಬೆಂಬಲಿಸುವ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಲು ನಿರಾಕರಿಸಿದ್ದರು. ಚುನಾವಣಾ ಪ್ರಚಾರದ ವೇಳೆ ತಾವು ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವ ದಿಟ್ಟ ಹಾಗೂ ಜನಪ್ರಿಯ ನೀತಿಗಳನ್ನು ಬೆಂಬಲಿಸುವ ನಾಯಕನ ಅಗತ್ಯವಿದೆ ಎಂದು ಹಲವರು ಹೇಳಿದ್ದರು.
ಓಹಿಯೊದ ಕಾಂಗ್ರೆಸ್ ಸದಸ್ಯರಾಗಿ ಆಯ್ಕೆಯಾಗಿರುವ ಡಾನ್ ಲಿಯೊನಾರ್ಡ್ ಅವರು ಜೆಫ್ರಿಸ್ ಅವರನ್ನು ಬಹಿರಂಗವಾಗಿ ವಿರೋಧಿಸಿದವರಲ್ಲಿ ಪ್ರಮುಖರು. ಇಸ್ರೇಲ್ ಗೆ ಅಮೆರಿಕ ನೀಡುತ್ತಿರುವ ಸೇನಾ ನೆರವನ್ನು ಸ್ಥಗಿತಗೊಳಿಸುವುದು ಮತ್ತು ಸುಪ್ರೀಂ ಕೋರ್ಟ್ನ ಸಿಟಿಝನ್ಸ್ ಯುನೈಟೆಡ್ ಪ್ರಕರಣದ ತೀರ್ಪಿನಿಂದ ರೂಪುಗೊಂಡಿರುವ ಚುನಾವಣಾ ಪ್ರಚಾರದ ಹಣಕಾಸು ನಿಯಮಗಳಲ್ಲಿ ಸುಧಾರಣೆ ತರುವುದು ಸೇರಿದಂತೆ ಕೆಲವು ಪ್ರಗತಿಪರ ಬೇಡಿಕೆಗಳ ಕುರಿತು ಖಾತರಿ ನೀಡದ ಹೊರತು ಜೆಫ್ರಿಸ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದ್ದರು.
"ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧದ ವಿರುದ್ಧ ಲೀಹಿ ಕಾನೂನಿನಂತಹ ನಮ್ಮ ದೇಶದ ಕಾನೂನುಗಳನ್ನು ಜಾರಿಗೊಳಿಸಲು ಸ್ಪೀಕರ್ ಜೆಫ್ರಿಸ್ ಸಿದ್ಧರಿಲ್ಲದಿದ್ದರೆ ಮತ್ತು ಈ ಬಿಕ್ಕಟ್ಟಿನ ಮೂಲವಾಗಿರುವ ಸಿಟಿಝನ್ಸ್ ಯುನೈಟೆಡ್ ಪ್ರಕರಣದ ಮೂಲಕ ರೂಪುಗೊಂಡ ವ್ಯವಸ್ಥೆಯನ್ನು ಬದಲಾಯಿಸಲು ಮುಂದಾಗದಿದ್ದರೆ ಅವರಿಗೆ ನನ್ನ ಮತವಿರುವುದಿಲ್ಲ" ಎಂದು ಡಾನ್ ಲಿಯೊನಾರ್ಡ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದರು.
ಇಸ್ರೇಲ್ ಕುರಿತ ನಿಲುವಿಗೆ ಟೀಕೆ
ಇಸ್ರೇಲ್ ಕುರಿತ ತಮ್ಮ ನಿಲುವು ಹಾಗೂ ಅಮೆರಿಕ-ಇಸ್ರೇಲ್ ಸಾರ್ವಜನಿಕ ವ್ಯವಹಾರಗಳ ಸಮಿತಿ (AIPAC) ಸೇರಿದಂತೆ ಇಸ್ರೇಲ್ ಪರ ಲಾಬಿ ಸಂಘಟನೆಗಳೊಂದಿಗಿನ ಸಂಬಂಧಗಳ ವಿಚಾರವಾಗಿ ಜೆಫ್ರಿಸ್ ಡೆಮಾಕ್ರಟಿಕ್ ಪಕ್ಷದ ಕೆಲವು ವಲಯಗಳಿಂದ ವಿರೋಧ ಎದುರಿಸಿದ್ದಾರೆ.
ಮಂಗಳವಾರ ದಿ ಅಟ್ಲಾಂಟಿಕ್ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದ ಜೆಫ್ರಿಸ್, ಮಧ್ಯಪ್ರಾಚ್ಯದಲ್ಲಿ ಯಾರೂ ನಿರೀಕ್ಷಿಸಿರದ ಬದಲಾವಣೆ ಆಗಬೇಕು ಮತ್ತು ಎರಡು ರಾಷ್ಟ್ರಗಳ ಪರಿಹಾರ ಜಾರಿಗೆ ಬರಬೇಕು ಎಂದು ಕರೆ ನೀಡಿದ್ದರು.
2023ರಲ್ಲಿ ಆಗಿನ ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿ ಅವರನ್ನು ಅವರದೇ ಪಕ್ಷದ ರಿಪಬ್ಲಿಕನ್ ಸದಸ್ಯರು ಪದಚ್ಯುತಗೊಳಿಸಿದ್ದರು. ಅವರ ಉತ್ತರಾಧಿಕಾರಿಯಾಗಿ ಡೆಮಾಕ್ರಟ್ ಗಳು ಜೆಫ್ರಿಸ್ ಅವರನ್ನು ಕಣಕ್ಕಿಳಿಸಿದ್ದರು. ಆದರೆ, ರಿಪಬ್ಲಿಕನ್ ಸದಸ್ಯರ ಬೆಂಬಲದೊಂದಿಗೆ ಮೈಕ್ ಜಾನ್ಸನ್ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು.
ಇದೀಗ ಜೆಫ್ರಿಸ್ ಅವರನ್ನು ಡೆಮಾಕ್ರಟಿಕ್ ಪಕ್ಷದ ಸದಸ್ಯರು ಅಧಿಕೃತವಾಗಿ ಸ್ಪೀಕರ್ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದ್ದಾರೆ. ಜನವರಿ 3ರಂದು ಹೊಸ ಕಾಂಗ್ರೆಸ್ ನ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಪೂರ್ಣ ಸದನದಲ್ಲಿ ಹೊಸ ಸ್ಪೀಕರ್ ಆಯ್ಕೆಗೆ ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಜೆಫ್ರಿಸ್ ಗೆದ್ದರೆ ಮೈಕ್ ಜಾನ್ಸನ್ ಅವರನ್ನು ಬದಲಿಸಿ ಸ್ಪೀಕರ್ ಹುದ್ದೆ ಅಲಂಕರಿಸಲಿದ್ದಾರೆ.






