ಹೊಸ ದಾಳಿಗೆ ಗಾಳಿಪಟ ಬಳಸಲು ಹಮಾಸ್ ಯೋಜನೆ : ಇಸ್ರೇಲ್ ಆರೋಪ

Photo Credit : aljazeera.com
ಟೆಲ್ ಅವೀವ್: ಇಸ್ರೇಲ್ ಭೂಪ್ರದೇಶದ ಮೇಲೆ ಮತ್ತೆ ದಾಳಿ ನಡೆಸಲು ಹಮಾಸ್ ಸಂಘಟನೆ ಗಾಳಿಪಟ ಮತ್ತು ಬಲೂನ್ಗಳನ್ನು ಬಳಸಲು ಯೋಜನೆ ರೂಪಿಸುತ್ತಿದೆ ಎಂದು ಇಸ್ರೇಲ್ ಅಧಿಕಾರಿಗಳು ಆರೋಪಿಸಿದ್ದು, ಇವುಗಳ ಬಳಕೆಗೆ ಬುಧವಾರದೊಳಗೆ ತಡೆ ನೀಡದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದೆ.
`ಗಾಝಾದಿಂದ ನೆಗೆವ್ನ ಸಮುದಾಯಗಳ ಕಡೆಗೆ ಗಾಳಿಪಟ ಮತ್ತು ಬಲೂನ್ಗಳನ್ನು ಹಾರಿಸುವುದರ ವಿರುದ್ಧ `ಶೂನ್ಯ ಸಹನೆ' ನೀತಿಯನ್ನು ಅಳವಡಿಸಿಕೊಳ್ಳಲು ಇಸ್ರೇಲ್ ರಕ್ಷಣಾ ಪಡೆಗಳಿಗೆ (ಐಡಿಎಫ್) ಸೂಚಿಸಲಾಗಿದೆ. ಒಂದು ವೇಳೆ ಈ ಹಾರಾಟಗಳು ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸ್ಫೋಟಕಗಳಿರಲಿ ಅಥವಾ ಇಲ್ಲದಿರಲಿ, ಬಲೂನ್ ಅಥವಾ ಗಾಳಿಪಟವನ್ನು ಡ್ರೋನ್ನಂತೆಯೇ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಸ್ರೇಲ್ನ ನೆಗೆವ್ ಪ್ರದೇಶದ ಮೇಲೆ 2023ರ ಅಕ್ಟೋಬರ್ನಲ್ಲಿ ಹಮಾಸ್ ನಡೆಸಿದ್ದ ದಾಳಿ ಭೀಕರ ಯುದ್ಧಕ್ಕೆ ಕಾರಣವಾಗಿತ್ತು. ವಾರಾಂತ್ಯದಲ್ಲಿ ಇಸ್ರೇಲ್ನ ಗಡಿ ಪ್ರದೇಶದಲ್ಲಿ ಯಾವುದೇ ಸ್ಫೋಟಕಗಳಿಲ್ಲದ ಸುಮಾರು 10 ಗಾಳಿಪಟಗಳು ಪತ್ತೆಯಾಗಿದ್ದು, ಈ ಘಟನೆಗಳು ಈ ಹಿಂದೆ ಗಾಝಾದಿಂದ ಉಡಾಯಿಸಲಾಗುತ್ತಿದ್ದ ಬೆಂಕಿ ಹಚ್ಚುವ ಗಾಳಿಪಟಗಳು ಮತ್ತು ಬಲೂನ್ಗಳ ನೆನಪುಗಳನ್ನು ಮರುಕಳಿಸಿವೆ. ಅವು ದಕ್ಷಿಣ ಇಸ್ರೇಲ್ನ ಕೃಷಿ ಭೂಮಿಗಳಲ್ಲಿ ಭಾರಿ ಬೆಂಕಿ ಅವಘಡಗಳಿಗೆ ಕಾರಣವಾಗಿದ್ದವು.
ಈ ಗಾಳಿಪಟಗಳ ಹಿಂದೆ ಹಮಾಸ್ ಹಸ್ತವಿದೆ ಎಂದು ಇಸ್ರೇಲ್ ಸೇನೆ ಶಂಕಿಸಿದೆ. ಇವುಗಳಲ್ಲಿ ಯಾವುದೇ ಸ್ಫೋಟಕಗಳಿರಲಿಲ್ಲ, ಹಾಗೂ ಇಸ್ರೇಲ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಪರೀಕ್ಷಿಸಲು ಇವುಗಳನ್ನು ಬಳಸಿರಬಹುದು ಎಂದು ಭಾವಿಸಲಾಗಿದೆ.
ಇಸ್ರೇಲ್ ಕಡೆಗೆ ಉಡಾವಣೆ ಮಾಡುವುದನ್ನು ತಕ್ಷಣವೇ ನಿಲ್ಲಿಸದಿದ್ದರೆ, ಇದಕ್ಕೆ ಕಾರಣರಾದವರ ವಿರುದ್ಧ ಸೇನೆಯು ತನ್ನ ಕಾರ್ಯಾಚರಣೆಗಳನ್ನು ತೀವ್ರಗೊಳಿಸುತ್ತದೆ ಮತ್ತು ಗಾಳಿಪಟ, ಡ್ರೋನ್ ಹಾಗೂ ಬಲೂನ್ಗಳನ್ನು ಉಡಾವಣೆ ಮಾಡುವ ಪ್ರದೇಶಗಳಿಂದ ಜನರನ್ನು ತೆರವುಗೊಳಿಸುತ್ತದೆ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್ ರವಿವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಮಾಸ್ ನಿರಾಕರಣೆ
ಹೊಸ ದಾಳಿಯ ಯೋಜನೆಯನ್ನು ಹಮಾಸ್ ನಿರಾಕರಿಸಿದೆ. `ಗಾಳಿಪಟ ಹಾರಿಸುವುದನ್ನು ನಿಲ್ಲಿಸಲು ಇಸ್ರೇಲ್ ಹಮಾಸ್ಗೆ ಮೂರು ದಿನಗಳ ಗಡುವು ನೀಡಿದೆ, ಇಲ್ಲದಿದ್ದರೆ ಬೃಹತ್ ವೈಮಾನಿಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಭಗ್ನಾವಶೇಷಗಳ ನಡುವೆ ತಮ್ಮ ಬಾಲ್ಯವನ್ನು ಹುಡುಕುತ್ತಿರುವ ಮಗು ಹಾರಿಸಿದ ಕಾಗದದ ವಿಮಾನಗಳನ್ನು ಇಸ್ರೇಲ್ ಅತ್ಯಂತ ಕಠಿಣವಾಗಿ ಎದುರಿಸಲು ಹೊರಟಿದೆ' ಎಂದು ಹಮಾಸ್ ಮುಖಂಡ ಬಾಸಿಮ್ ನಯೀಮ್ ಕಿಡಿಕಾರಿದ್ದಾರೆ.
ಅತಿರೇಕದ ಕ್ರಮ: ವಿಶ್ವಸಂಸ್ಥೆ ಖಂಡನೆ
ಗಾಝಾದಿಂದ ಗಾಳಿಪಟಗಳು, ಡ್ರೋನ್ಗಳು ಮತ್ತು ಬಲೂನ್ಗಳನ್ನು ಉಡಾವಣೆ ಮಾಡುವ ಪ್ರದೇಶಗಳಿಂದ ಜನರನ್ನು ಹೊರಹಾಕುವುದಾಗಿ ಇಸ್ರೇಲ್ ನೀಡಿದ ಬೆದರಿಕೆಯನ್ನು ವಿಶ್ವಸಂಸ್ಥೆಯು ಮಂಗಳವಾರ ತೀವ್ರವಾಗಿ ಖಂಡಿಸಿದೆ.
ಮಕ್ಕಳ ಗಾಳಿಪಟ ಹಾರಾಟದ ಕಾರಣಕ್ಕಾಗಿ ಜನರನ್ನು ಹೊರಹಾಕುವ ಬೆದರಿಕೆಯು ನಿಜಕ್ಕೂ ಅತಿರೇಕದ ನಡೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ ' ಎಂದು ಜಿನೆವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯ ವಕ್ತಾರೆ ರವಿನಾ ಶಮ್ದಾಸಾನಿ ಹೇಳಿದ್ದಾರೆ.






