ಇಸ್ರೇಲ್ ನ ಕದನ ವಿರಾಮ ಪ್ರಸ್ತಾಪ ತಿರಸ್ಕರಿಸಿದ ಹಮಾಸ್
ಯುದ್ಧ ಅಂತ್ಯಗೊಳಿಸುವ ಸಮಗ್ರ ಒಪ್ಪಂದಕ್ಕೆ ಆಗ್ರಹ

ಸಾಂದರ್ಭಿಕ ಚಿತ್ರ | PC : NDTV
ಕೈರೋ: ಗಾಝಾದಲ್ಲಿ ಮಧ್ಯಂತರ ಕದನ ವಿರಾಮದ ಕುರಿತು ಇಸ್ರೇಲ್ ಮುಂದಿರಿಸಿದ ಪ್ರಸ್ತಾಪವನ್ನು ಹಮಾಸ್ ತಿರಸ್ಕರಿಸಿದ್ದು ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಸಮಗ್ರ ಒಪ್ಪಂದವನ್ನು ಬಯಸಿರುವುದಾಗಿ ಸ್ಪಷ್ಟಪಡಿಸಿದೆ.
ಗಾಝಾ ಯುದ್ಧವನ್ನು ಕೊನೆಗೊಳಿಸುವ, ಇಸ್ರೇಲಿ ಒತ್ತೆಯಾಳುಗಳನ್ನು ಫೆಲೆಸ್ತೀನೀಯನ್ ಕೈದಿಗಳ ಜತೆ ವಿನಿಮಯ ಮಾಡಿಕೊಳ್ಳುವ ಸಮಗ್ರ ಒಪ್ಪಂದಕ್ಕೆ ತಾವು ಸಿದ್ಧವಿರುವುದಾಗಿ ಹಮಾಸ್ನ ಗಾಝಾ ಮುಖ್ಯಸ್ಥ ಖಲೀಲ್ ಅಲ್-ಹಯಾ ಹೇಳಿದ್ದಾರೆ.
ಹಮಾಸ್ನ ನಿಲುವನ್ನು ಇಸ್ರೇಲ್ ಒಪ್ಪಿಕೊಳ್ಳುವ ಸಾಧ್ಯತೆ ಕ್ಷೀಣವಾಗಿರುವುದರಿಂದ ಇತ್ತೀಚಿನ ವಾರಗಳಲ್ಲಿ ಗಾಝಾದ ಮೇಲೆ ನಡೆಯುತ್ತಿರುವ ಇಸ್ರೇಲ್ನ ಮಾರಣಾಂತಿಕ ದಾಳಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗಾಝಾದಲ್ಲಿ ಕದನ ವಿರಾಮ ಒಪ್ಪಂದದ ಕುರಿತು ಈಜಿಪ್ಟ್ನ ಕೈರೋದಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಖಲೀಲ್ ಅಲ್-ಹಯಾ ಅವರು ಹಮಾಸ್ ನಿಯೋಗದ ನೇತೃತ್ವ ವಹಿಸಿದ್ದಾರೆ.
`ಗಾಝಾದಲ್ಲಿ ವಿನಾಶದ ಮತ್ತು ಹಸಿವಿನಿಂದ ಬಳಲುವಂತೆ ಮಾಡುವ ಯುದ್ಧವನ್ನು ಮುಂದುವರಿಸುವ ತಮ್ಮ ಗುಪ್ತ ರಾಜಕೀಯ ಅಜೆಂಡಾದ ಭಾಗವಾಗಿ ನೆತನ್ಯಾಹು ಮತ್ತವರ ತಂಡವು ಆಂಶಿಕ ಒಪ್ಪಂದವನ್ನು ಬಳಸುತ್ತಿದೆ. ಇದಕ್ಕಾಗಿ ಅವರು ಗಾಝಾದಲ್ಲಿರುವ ತಮ್ಮ ಒತ್ತೆಯಾಳುಗಳನ್ನು ಬಲಿಕೊಡಲೂ ಹೇಸುವುದಿಲ್ಲ' ಎಂದು ಅವರು ಟೀಕಿಸಿದ್ದಾರೆ.
ಕೆಲವು ಒತ್ತೆಯಾಳುಗಳನ್ನು ಫೆಲೆಸ್ತೀನಿಯನ್ ಕೈದಿಗಳ ಜೊತೆ ವಿನಿಮಯ ಮಾಡಿಕೊಳ್ಳುವುದು ಮತ್ತು ಕದನ ವಿರಾಮದ ಎರಡನೇ ಹಂತ ಆರಂಭದ ಬಗ್ಗೆ ಮಾತುಕತೆ ನಡೆಸಲು ಮಧ್ಯಸ್ಥಿಕೆದಾರರಾದ ಖತರ್ ಮತ್ತು ಈಜಿಪ್ಟ್ ಮುಂದಿರಿಸಿದ ಪ್ರಸ್ತಾಪವನ್ನು ಹಮಾಸ್ ಒಪ್ಪಿದೆ. ಆದರೆ ಇಸ್ರೇಲ್ ಕೆಲವು ಅಸಾಧ್ಯವಾದ ಷರತ್ತುಗಳನ್ನು ಮುಂದಿರಿಸಿರುವುದು ಮಾತುಕತೆಯ ಪ್ರಗತಿಗೆ ಅಡ್ಡಿಯಾಗುತ್ತಿದೆ ಎಂದವರು ಆರೋಪಿಸಿದ್ದಾರೆ.
ಹಮಾಸ್ ಸಮಗ್ರ ಪ್ಯಾಕೇಜ್ ಕುರಿತ ಮಾತುಕತೆಯಲ್ಲಿ ತಕ್ಷಣ ಪಾಲ್ಗೊಳ್ಳಲು ಸಿದ್ಧವಿದೆ. ಗಾಝಾದಲ್ಲಿರುವ ಇಸ್ರೇಲಿ ಒತ್ತೆಯಾಳುಗಳನ್ನು ಇಸ್ರೇಲ್ ವಶದಲ್ಲಿರುವ ಫೆಲೆಸ್ತೀನಿಯನ್ ಕೈದಿಗಳ ಜತೆ ವಿನಿಮಯ ಮಾಡಿಕೊಳ್ಳುವುದು, ಗಾಝಾ ಯುದ್ಧವನ್ನು ಕೊನೆಗೊಳಿಸುವುದು ಮತ್ತು ಗಾಝಾದ ಮರುನಿರ್ಮಾಣ ಸಮಗ್ರ ಒಪ್ಪಂದದ ಅಂಶಗಳಾಗಿವೆ ಎಂದು ಹಮಾಸ್ ವರಿಷ್ಠರನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.
ಗಾಝಾದಲ್ಲಿನ ಯುದ್ಧವನ್ನು ಸ್ಥಗಿತಗೊಳಿಸಿದ ಜನವರಿ ಕದನ ವಿರಾಮ ಒಪ್ಪಂದವನ್ನು ಮರುಸ್ಥಾಪಿಸಲು ಈಜಿಪ್ಟ್ ಮತ್ತು ಖತರ್ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯುತ್ತಿದೆ. ಆದರೆ ಇಸ್ರೇಲ್ ಮತ್ತು ಹಮಾಸ್ ಪರಸ್ಪರರನ್ನು ದೂಷಿಸುತ್ತಿರುವುದರಿಂದ ಮಾತುಕತೆಯಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.
`ಹಮಾಸ್ನ ಹೇಳಿಕೆಯು ಅವರು ಶಾಂತಿಯ ಬಗ್ಗೆ ಅಲ್ಲ, ಶಾಶ್ವತ ಹಿಂಸಾಚಾರದ ಬಗ್ಗೆ ಆಸಕ್ತಿ ಹೊಂದಿರುವುದನ್ನು ತೋರಿಸುತ್ತದೆ. ಟ್ರಂಪ್ ಆಡಳಿತ ನೀಡಿದ್ದ ಹೇಳಿಕೆಗಳು ಬದಲಾಗಿಲ್ಲ. ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಅಥವಾ ನರಕವನ್ನು ಎದುರಿಸಿ' ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜೇಮ್ಸ್ ಹೆವಿಟ್ ಪ್ರತಿಕ್ರಿಯೆ ನೀಡಿದ್ದಾರೆ.
* ಇಸ್ರೇಲ್ ನ ಪ್ರಸ್ತಾಪ
ಒತ್ತೆಯಾಳುಗಳ ಬಿಡುಗಡೆಗೆ ಅವಕಾಶ ಮಾಡಿಕೊಡಲು ಮತ್ತು ಯುದ್ಧ ಅಂತ್ಯಗೊಳಿಸುವ ನಿಟ್ಟಿನಲ್ಲಿ ಪರೋಕ್ಷ ಮಾತುಕತೆ ಆರಂಭಿಸಲು ಗಾಝಾದಲ್ಲಿ 45 ದಿನಗಳ ಮಧ್ಯಂತರ ಕದನ ವಿರಾಮ ಜಾರಿಗೊಳ್ಳಬೇಕು ಎಂಬ ಪ್ರಸ್ತಾಪವನ್ನು ಇಸ್ರೇಲ್ ಮುಂದಿರಿಸಿದೆ. ಹಮಾಸ್ ಶಸ್ತ್ರಾಸ್ತ್ರ ಕೆಳಗಿಳಿಸಬೇಕು ಎಂಬ ಷರತ್ತನ್ನು ಹಮಾಸ್ ಈಗಾಗಲೇ ತಿರಸ್ಕರಿಸಿದೆ.







