ಬಿಡುಗಡೆಗೊಂಡ ಫೆಲೆಸ್ತೀನಿಯನ್ ಕೈದಿಗಳನ್ನೂ ಭೇಟಿಯಾಗಿ ಗೌರವಿಸಿ: ಟ್ರಂಪ್ಗೆ ಹಮಾಸ್ ಆಗ್ರಹ

ಡೊನಾಲ್ಡ್ ಟ್ರಂಪ್ | PC : PTI
ಗಾಝಾ ಸಿಟಿ: ಗಾಝಾ ಕದನ ವಿರಾಮ ಒಪ್ಪಂದದ ಪ್ರಕಾರ ಬಿಡುಗಡೆಗೊಂಡ ಇಸ್ರೇಲಿ ಒತ್ತೆಯಾಳುಗಳನ್ನು ಶ್ವೇತಭವನದಲ್ಲಿ ಭೇಟಿಯಾದ ರೀತಿಯಲ್ಲಿಯೇ, ಬಿಡುಗಡೆಗೊಂಡಿರುವ ಫೆಲಸ್ತೀನಿಯನ್ ಕೈದಿಗಳನ್ನೂ ಭೇಟಿ ಮಾಡಿ ಗೌರವ ಸಲ್ಲಿಸುವಂತೆ ಹಮಾಸ್ ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಆಗ್ರಹಿಸಿದೆ.
`ಇಸ್ರೇಲಿ ಒತ್ತೆಯಾಳುಗಳ `ಅಸಹನೀಯ ಸಂಕಷ್ಟಗಳ' ಬಗ್ಗೆ ಮಾತನಾಡಿರುವ ಟ್ರಂಪ್, ಫೆಲಸ್ತೀನಿಯನ್ ಕೈದಿಗಳನ್ನು ಭೇಟಿ ಮಾಡಲು ಸಮಯ ನಿಗದಿಗೊಳಿಸಿ ಕೈದಿಗಳ ಸಂಕಷ್ಟಗಳನ್ನೂ ಆಲಿಸಬೇಕು. ಬಿಡುಗಡೆಗೊಂಡ ಇಸ್ರೇಲಿ ಒತ್ತೆಯಾಳುಗಳಿಗೆ ನೀಡಿರುವ ಗೌರವವನ್ನು ಫೆಲೆಸ್ತೀನಿಯನ್ ಕೈದಿಗಳಿಗೂ ನೀಡಬೇಕು' ಎಂದು ಹಮಾಸ್ನ ಹಿರಿಯ ನಾಯಕ ಬಾಸೆಮ್ ನಯೀಮ್ ಟ್ರಂಪ್ರನ್ನು ಉಲ್ಲೇಖಿಸಿ ಬರೆದಿರುವ ಬಹಿರಂಗ ಪತ್ರದಲ್ಲಿ ಆಗ್ರಹಿಸಿದ್ದಾರೆ. 9,500ಕ್ಕೂ ಅಧಿಕ ಫೆಲೆಸ್ತೀನಿಯನ್ ಕೈದಿಗಳು ಇನ್ನೂ ಇಸ್ರೇಲಿ ಜೈಲುಗಳಲ್ಲಿದ್ದಾರೆ ಎಂದವರು ಹೇಳಿದ್ದಾರೆ.
ಜನವರಿ 19ರಂದು ಜಾರಿಗೆ ಬಂದಿರುವ ಕದನ ವಿರಾಮ ಒಪ್ಪಂದದ ಪ್ರಥಮ ಹಂತದಲ್ಲಿ ಹಮಾಸ್ 33 ಒತ್ತೆಯಾಳುಗಳನ್ನು (8 ಒತ್ತೆಯಾಳುಗಳ ಮೃತದೇಹ) ಬಿಡುಗಡೆಗೊಳಿಸಿದ್ದರೆ ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸುಮಾರು 1,800 ಫೆಲೆಸ್ತೀನಿಯನ್ ಕೈದಿಗಳನ್ನು ಬಿಡುಗಡೆಗೊಳಿಸಿದೆ. ಇನ್ನೂ 58 ಒತ್ತೆಯಾಳುಗಳು ಹಮಾಸ್ ವಶದಲ್ಲಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.





