“ಪ್ರಜಾಪ್ರಭುತ್ವ ತತ್ವಕ್ಕೆ ವಿರುದ್ಧ”: ಮೋದಿಗೆ ಪ್ರಶ್ನೆ ಕೇಳಿದ ಪತ್ರಕರ್ತೆಗೆ ಆನ್ಲೈನ್ ಕಿರುಕುಳ ಖಂಡಿಸಿದ ಅಮೆರಿಕಾ

ಸಬ್ರೀನಾ ಸಿದ್ದೀಖಿ- (Photo: Twitter/@SabrinaSiddiqui)
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕಾ ಪ್ರವಾಸದ ವೇಳೆ ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿಗೆ ಪ್ರಶ್ನೆಯೊಂದನ್ನು ಕೇಳಿದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಕರ್ತೆ ಸಬ್ರೀನಾ ಸಿದ್ದೀಖಿ (Sabrina Siddiqui )ಅವರಿಗೆ ನೀಡಲಾಗುತ್ತಿರುವ ಆನ್ಲೈನ್ ಕಿರುಕುಳದ ವಿರುದ್ಧ ಶ್ವೇತಭವನ ಪ್ರತಿಕ್ರಿಯಿಸಿ, ಈ ರೀತಿಯ ಕಿರುಕುಳ ʼ'ಸಂಪೂರ್ಣವಾಗಿ ಅಸ್ವೀಕಾರಾರ್ಹ” ಮತ್ತು “ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ,” ಎಂದು ಹೇಳಿದೆ.
ಭಾರತದಲ್ಲಿ ಮುಸ್ಲಿಮರ ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ಸರಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಸಬ್ರೀನಾ ಸಿದ್ದೀಖಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಪ್ರಧಾನಿ ಮೋದಿ, “ಪ್ರಜಾಪ್ರಭುತ್ವ ನಮ್ಮ ನರನಾಡಿಗಳಲ್ಲಿದೆ, ಜಾತಿ, ಮತ ಅಥವಾ ಧರ್ಮದ ಆಧಾರದಲ್ಲಿ ಬೇಧಭಾವನ್ನೆ ಯಾವುದೇ ಆಸ್ಪದವಿಲ್ಲ,”ಎಂದಿದ್ದರು.
ಸೋಮವಾರ ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ “ಭಾರತದಲ್ಲಿ ಕೆಲ ಜನರಿಂದ ತೀವ್ರ ಆನ್ಲೈನ್ ಕಿರುಕುಳಕ್ಕೆ ಸಬ್ರೀನಾ ಸಿದ್ದೀಖಿ ಒಳಗಾಗಿದ್ದಾರೆ, ಅವರಲ್ಲಿ ಕೆಲವರು ರಾಜಕಾರಣಿಗಳು,” ಎಂದು ಹೇಳಿದ ಪತ್ರಕರ್ತೆ ಕೆಲ್ಲಿ ಒʼಡೊನ್ನೆಲ್ಲ್ ಈ ಕುರಿತು ಅಮೆರಿಕಾ ಸರ್ಕಾರದ ಪ್ರತಿಕ್ರಿಯೆಯನ್ನು ಕೋರಿದ್ದರು.
“ಕಿರುಕುಳದ ಬಗ್ಗೆ ನಮಗೆ ತಿಳಿದಿದೆ, ಇದು ಅಸ್ವೀಕಾರಾರ್ಹ. ಎಲ್ಲಿಯೂ ಯಾವುದೇ ಸಂದರ್ಭದಲ್ಲೂ ಪತ್ರಕರ್ತರಿಗೆ ನೀಡಲಾಗುವ ಕಿರುಕುಳವನ್ನು ನಾವು ಖಂಡಿಸುತ್ತೇವೆ. ಮತ್ತು ಕಳೆದ ವಾರದ ಭೇಟಿ ವೇಳೆ ಕಂಡು ಬಂದಿದ್ದ ಪ್ರಜಾಪ್ರಭುತ್ವದ ತತ್ವಗಳಿಗೇ ಅದು ವಿರುದ್ಧವಾಗಿದೆ,” ಎಂದು ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ನ ಸ್ಟ್ರೆಟಜಿಕ್ ಕಮ್ಯುನಿಕೇಶನ್ಸ್ ಸಮನ್ವಯಕಾರ ಜಾನ್ ಕಿರ್ಬಿ ಹೇಳಿದರು.