ಎಪ್ಸ್ಟೀನ್ ಜೊತೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಏಕಾಂಗಿಯಾಗಿ ಕುಳಿತಿದ್ದ ಫೋಟೊ ಬಿಡುಗಡೆ
10ಕ್ಕೂ ಹೆಚ್ಚು ಚಿತ್ರಗಳು ಪತ್ತೆ; ಪ್ರಶ್ನೆಗೊಳಗಾದ ನಿಯೋಗದ ಭಾಗವಾಗಿ ಭೇಟಿಯಾಗಿದ್ದೆ ಎಂಬ ಸಚಿವರ ಹೇಳಿಕೆ

Photo: The Wire
ಹೊಸದಿಲ್ಲಿ: ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ನನ್ನು ಅಂತರರಾಷ್ಟ್ರೀಯ ಶಾಂತಿ ಸಂಸ್ಥೆ (ಐಪಿಐ) ನಿಯೋಗದ ಭಾಗವಾಗಿ ಭೇಟಿಯಾಗಿದ್ದೆ ಎಂದು ಹೇಳಿದ್ದ ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಹೇಳಿಕೆ ಹಲವು ಪ್ರಶ್ನೆ ಹುಟ್ಟುಹಾಕಿದೆ. ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ಚಿತ್ರದಲ್ಲಿ ಪುರಿ ಅವರು ಎಪ್ಸ್ಟೀನ್ ಎದುರು ಏಕಾಂಗಿಯಾಗಿ ಕುಳಿತಿರುವುದು ಕಂಡುಬಂದಿದೆ. ಚಿತ್ರದಲ್ಲಿ ಬೇರೆ ಯಾರೂ ಕಾಣಿಸದಿರುವುದು ಗಮನ ಸೆಳೆದಿದೆ.
ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಲು ಆರಂಭಿಸಿದ ಈ ಫೊಟೋ ಎಪ್ಸ್ಟೀನ್ ಗೆ ಸಂಬಂಧಿಸಿದ ನ್ಯಾಯಾಂಗ ಇಲಾಖೆಯ ಕಡತಗಳ ಭಾಗವಾಗಿದೆ. ಈ ವರ್ಷದ ಜನವರಿಯಲ್ಲಿ ಬಿಡುಗಡೆ ಮಾಡಲಾದ ಡೇಟಾಸೆಟ್ 9ರಲ್ಲಿ ಇದನ್ನು ಸೇರಿಸಲಾಗಿದೆ.
ಸೂಟ್ ಧರಿಸಿರುವ ಪುರಿ ಅವರು, ಕಪ್ಪು ಟರ್ಟಲ್ನೆಕ್ ಸ್ವೆಟರ್ ಧರಿಸಿರುವಂತೆ ಕಾಣುವ ಎಪ್ಸ್ಟೀನ್ ಎದುರು ಕುಳಿತಿದ್ದಾರೆ. ಇಬ್ಬರೂ ಪ್ರಾಣಿಗಳ ಚಿತ್ರಗಳಿರುವ ಹೊದಿಕೆಯ ತೋಳಿನ ಕುರ್ಚಿಗಳಲ್ಲಿ ಕುಳಿತಿದ್ದು, ಅವರ ನಡುವಿನ ಮೇಜಿನ ಮೇಲೆ ಕಾಗದಗಳು ಹಾಗೂ ಇತರ ವಸ್ತುಗಳು ಕಾಣಿಸುತ್ತವೆ. ಈ ಸಭೆಗೆ ಸಂಬಂಧಿಸಿದ ಕನಿಷ್ಠ 10 ಛಾಯಾಚಿತ್ರಗಳು ಡೇಟಾಸೆಟ್ ನಲ್ಲಿವೆ ಎಂದು 'The wire' ವರದಿ ಮಾಡಿದೆ. ಚಿತ್ರಗಳ ದೃಶ್ಯ ಬಹುತೇಕ ಒಂದೇ ಆಗಿದ್ದು, ಕ್ಯಾಮೆರಾದ ಕೋನದಲ್ಲಿ ಮಾತ್ರ ಸ್ವಲ್ಪ ವ್ಯತ್ಯಾಸವಿದೆ.
ನೆನಪಿಲ್ಲ ಎಂದ ಪುರಿ ಕಚೇರಿ
ಫೋಟೋ ಯಾವ ಭೇಟಿಗೆ ಸಂಬಂಧಿಸಿದೆ ಹಾಗೂ ಚಿತ್ರ ತೆಗೆಯುವ ಮೊದಲು ಅಥವಾ ಬಳಿಕ ಇತರರು ಹಾಜರಿದ್ದರೇ ಎಂಬುದನ್ನು ಪುರಿ ಅವರಿಗೆ ನೆನಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು 'ದಿ ವೈರ್' ಕೇಳಿದ ಪ್ರಶ್ನೆಗಳಿಗೆ ಅವರ ಕಚೇರಿ ಉತ್ತರಿಸಿದೆ. ಎಪ್ಸ್ಟೀನ್ ನನ್ನು ಎಂದಿಗೂ ಒಬ್ಬರೇ ಭೇಟಿಯಾಗಿರಲಿಲ್ಲ ಎಂದು ಪುರಿ ಹೇಳಿಕೊಂಡಿಲ್ಲ ಎಂದೂ ಸ್ಪಷ್ಟಪಡಿಸಿದೆ.
"ಫೆಬ್ರವರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಪ್ಸ್ಟೀನ್ ನ ಪರಿಚಯವಾಗಿದ್ದು ಹೇಗೆ ಎಂಬುದನ್ನು ಪುರಿ ವಿವರಿಸಿದ್ದರು. ಐಪಿಐನಲ್ಲಿ ಅವರ ಆಗಿನ ಮುಖ್ಯಸ್ಥರಾಗಿದ್ದ ಹಿರಿಯ ನಾರ್ವೆಯ ರಾಜತಾಂತ್ರಿಕ ಟೆರ್ಜೆ ರೋಡ್-ಲಾರ್ಸೆನ್ ಅವರಿಗೆ ಎಪ್ಸ್ಟೀನ್ ಪರಿಚಯವಿತ್ತು. ಪುರಿ ಅವರ ಮೊದಲ ಭೇಟಿ ರೋಡ್-ಲಾರ್ಸೆನ್ ನೇತೃತ್ವದ ಐಪಿಐ ನಿಯೋಗದ ಭಾಗವಾಗಿ ನಡೆದಿತ್ತು. ಅವರು ವಿವರಿಸಿದ್ದು ಆ ಸಂದರ್ಭವನ್ನು. ಎಪ್ಸ್ಟೀನ್ ನನ್ನು ಒಬ್ಬರೇ ಭೇಟಿಯಾಗಿರಲಿಲ್ಲ ಎಂದು ಅವರು ಹೇಳಿರಲಿಲ್ಲ" ಎಂದು ಕಚೇರಿ ತಿಳಿಸಿದೆ.
ಸುಮಾರು ಒಂದು ದಶಕದ ಬಳಿಕ, ಈ ಫೋಟೊ ಯಾವ ಭೇಟಿಗೆ ಸಂಬಂಧಿಸಿವೆ ಅಥವಾ ಅವುಗಳನ್ನು ತೆಗೆಯುವ ಮೊದಲು ಇಲ್ಲವೇ ಬಳಿಕ ಇತರರು ಹಾಜರಿದ್ದರೇ ಎಂಬುದು ಪುರಿ ಅವರಿಗೆ ನೆನಪಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಚಿತ್ರಗಳು ತಮ್ಮ ಸಂಪರ್ಕದ ಬಗ್ಗೆ ಪುರಿ ನೀಡಿರುವ ವಿವರಣೆಯನ್ನೇ ಪುಷ್ಟೀಕರಿಸುತ್ತವೆ ಎಂದು ಕಚೇರಿ ವಾದಿಸಿದೆ. "ಈ ಛಾಯಾಚಿತ್ರಗಳು ಹೊಸದೇನನ್ನೂ ಬಹಿರಂಗಪಡಿಸುವುದಿಲ್ಲ. ಬದಲಿಗೆ, ಮೊದಲಿನಿಂದಲೂ ಅವರು ಹೇಳುತ್ತಾ ಬಂದಿರುವುದನ್ನೇ ದೃಢಪಡಿಸುತ್ತವೆ. ಸೂಕ್ತ ಉಡುಪು ಧರಿಸಿ, ಮೇಜಿನ ಸುತ್ತ ಕುಳಿತು, ಟಿಪ್ಪಣಿಗಳು ಮತ್ತು ದಾಖಲೆಗಳೊಂದಿಗೆ ವೃತ್ತಿಪರ ವಾತಾವರಣದಲ್ಲಿ ನಡೆದ ಕೆಲಸದ ಸಭೆಗಳಿವು" ಎಂದು ಹೇಳಿದೆ.
ಪುರಿ ಅವರು ಎಪ್ಸ್ಟೀನ್ ನ ದ್ವೀಪಕ್ಕೆ ಎಂದಿಗೂ ಭೇಟಿ ನೀಡಿರಲಿಲ್ಲ ಹಾಗೂ ಇಬ್ಬರ ನಡುವಿನ ಸಂಪರ್ಕ ವೃತ್ತಿಪರ ಸ್ವರೂಪದ್ದಾಗಿತ್ತು ಎಂದೂ ಕಚೇರಿ ಪುನರುಚ್ಚರಿಸಿದೆ. "ಇಮೇಲ್ ಗಳೇ ಇಬ್ಬರ ನಡುವಿನ ಸಂವಹನದ ಉದ್ದೇಶವನ್ನು ಸ್ಪಷ್ಟಪಡಿಸುತ್ತವೆ. ಭಾರತದ ಆರ್ಥಿಕತೆ ಮತ್ತು ಡಿಜಿಟಲ್ ಸಾಮರ್ಥ್ಯದ ಬಗ್ಗೆ ಹೂಡಿಕೆದಾರರು ಹಾಗೂ ತಂತ್ರಜ್ಞಾನ ಕ್ಷೇತ್ರದ ನಾಯಕರಲ್ಲಿ ಆಸಕ್ತಿ ಮೂಡಿಸುವುದೇ ಇದರ ಉದ್ದೇಶವಾಗಿತ್ತು" ಎಂದು ತಿಳಿಸಿದೆ.
ಮೂರು ಅಥವಾ ನಾಲ್ಕು ಬಾರಿ ಭೇಟಿಯಾಗಿದ್ದೆ ಎಂದಿದ್ದ ಪುರಿ
ಫೆಬ್ರವರಿ 11ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪುರಿ ಅವರು, 2009ರಲ್ಲಿ ನ್ಯೂಯಾರ್ಕ್ನ ವಿಶ್ವಸಂಸ್ಥೆಯಲ್ಲಿನ ಭಾರತದ ರಾಜತಾಂತ್ರಿಕ ನಿಯೋಗಕ್ಕೆ ಸೇರಿದ ಸಮಯದಿಂದ 2017ರಲ್ಲಿ ಸಚಿವರಾಗುವವರೆಗಿನ ಎಂಟು ವರ್ಷಗಳ ಅವಧಿಯಲ್ಲಿ ಎಪ್ಸ್ಟೀನ್ ನನ್ನು ಮೂರು ಅಥವಾ ಗರಿಷ್ಠ ನಾಲ್ಕು ಬಾರಿ ಭೇಟಿಯಾಗಿದ್ದಾಗಿ ಹೇಳಿದ್ದರು.
ಐಪಿಐಗೆ ಸೇರಿದ ಬಳಿಕ ಎಪ್ಸ್ಟೀನ್ ನನ್ನು ಮೊದಲ ಬಾರಿಗೆ ಭೇಟಿಯಾಗಿದ್ದಾಗಿ ತಿಳಿಸಿದ್ದ ಅವರು, ಆಗ ತಮ್ಮ ಮೇಲಧಿಕಾರಿಯಾಗಿದ್ದ ರೋಡ್-ಲಾರ್ಸೆನ್ ಅವರಿಗೆ ಎಪ್ಸ್ಟೀನ್ ಪರಿಚಯವಿತ್ತು ಎಂದಿದ್ದರು.
"ಐಪಿಐನಲ್ಲಿ ನನ್ನ ಮೇಲಧಿಕಾರಿಯಾಗಿದ್ದ ಟೆರ್ಜೆ ರೋಡ್-ಲಾರ್ಸೆನ್ ಅವರಿಗೆ ಕುಖ್ಯಾತ ವ್ಯಕ್ತಿ ಎಪ್ಸ್ಟೀನ್ ಪರಿಚಯವಿತ್ತು. ಐಪಿಐ ಅಥವಾ ಐಸಿಎಂ (ICM) ನಿಯೋಗದ ಭಾಗವಾಗಿ ನಾನು ಎಪ್ಸ್ಟೀನ್ ನನ್ನು ಕೆಲವು ಬಾರಿ, ಅಂದರೆ ಮೂರು ಅಥವಾ ಗರಿಷ್ಠ ನಾಲ್ಕು ಬಾರಿ ಭೇಟಿಯಾಗಿದ್ದೆ" ಎಂದು ಪುರಿ ಹೇಳಿದ್ದರು.
ಇಮೇಲ್ ಗಳಲ್ಲಿ ಭೇಟಿಗಳ ವಿವರ
ಈ ವರ್ಷದ ಆರಂಭದಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಇಮೇಲ್ಗಳು ಪುರಿ ಮತ್ತು ಎಪ್ಸ್ಟೀನ್ ನಡುವೆ ಹಲವು ಬಾರಿ ಭೇಟಿಗಳು ನಿಗದಿಯಾಗಿದ್ದುದನ್ನು ದಾಖಲಿಸಿವೆ. ಫೆಬ್ರವರಿ 1ರಂದು 'ದಿ ವೈರ್' ಪ್ರಕಟಿಸಿದ ವರದಿಯ ಪ್ರಕಾರ, ಜೂನ್ 2014ರಿಂದ ಜೂನ್ 2017ರವರೆಗಿನ ಇಬ್ಬರ ಇಮೇಲ್ ಸಂವಹನದಲ್ಲಿ ಎಪ್ಸ್ಟೀನ್ ಅವರ ಮ್ಯಾನ್ ಹ್ಯಾಟನ್ ನಿವಾಸದಲ್ಲಿ ಕನಿಷ್ಠ ಮೂರು ಸಭೆಗಳು ನಿಗದಿಯಾಗಿದ್ದವು.
2015ರ ಫೆಬ್ರವರಿ 4, 2016ರ ಜನವರಿ 6 ಮತ್ತು 2017ರ ಮೇ 19ರಂದು ನ್ಯೂಯಾರ್ಕ್ನ 9 ಈಸ್ಟ್ 71ನೇ ಸ್ಟ್ರೀಟ್ ನಲ್ಲಿರುವ ಎಪ್ಸ್ಟೀನ್ ಅವರ ನಿವಾಸದಲ್ಲಿ ಸಭೆಗಳನ್ನು ನಿಗದಿಪಡಿಸಲಾಗಿತ್ತು. ಎಪ್ಸ್ಟೀನ್ ಅವರ ಸಹಾಯಕಿ ಲೆಸ್ಲಿ ಗ್ರಾಫ್ ಈ ಸಭೆಗಳನ್ನು ಏರ್ಪಡಿಸಿದ್ದರು. 2015ರ ಜನವರಿ 9ರಂದು ನಿಗದಿಯಾಗಿದ್ದ ಮತ್ತೊಂದು ಸಭೆಯನ್ನು ಎಪ್ಸ್ಟೀನ್ ನ್ಯೂಯಾರ್ಕ್ ನಲ್ಲಿ ಇಲ್ಲದ ಕಾರಣ ರದ್ದುಗೊಳಿಸಲಾಗಿತ್ತು.
2014ರ ಸೆಪ್ಟೆಂಬರ್ ನಲ್ಲಿ ಎಪ್ಸ್ಟೀನ್, ಪುರಿ ಅವರನ್ನು ಲಿಂಕ್ಡ್ ಇನ್ ಸಹ-ಸ್ಥಾಪಕ ರೀಡ್ ಹಾಫ್ಮನ್ ಅವರಿಗೆ ಪರಿಚಯಿಸಿದ್ದರು. ಬಳಿಕ ಪುರಿ ಅವರು ಹಾಫ್ಮನ್ ಜೊತೆ ಸಂದೇಶ ವಿನಿಮಯ ಮಾಡಿಕೊಂಡಿದ್ದರು. ನವೆಂಬರ್ 13ರಂದು ಕಳುಹಿಸಿದ ಇಮೇಲ್ನಲ್ಲಿ ಭಾರತದ ಡಿಜಿಟಲ್ ಇಂಡಿಯಾ ಉಪಕ್ರಮಗಳು ಹಾಗೂ ದೇಶದಲ್ಲಿ ತಂತ್ರಜ್ಞಾನ ಕಂಪೆನಿಗಳು ವಿಸ್ತರಿಸಲು ಇರುವ ಅವಕಾಶಗಳನ್ನು ಉಲ್ಲೇಖಿಸಿ, ಭಾರತದ ಇಂಟರ್ನೆಟ್ ಆರ್ಥಿಕತೆಯಲ್ಲಿನ ಹೂಡಿಕೆ ಸಾಧ್ಯತೆಗಳ ಬಗ್ಗೆ ಪುರಿ ವಿವರಿಸಿದ್ದರು.
ಆದರೆ, ಇಬ್ಬರ ನಡುವಿನ ಸಂಪರ್ಕವು ಹಾಫ್ಮನ್ ಅವರಿಗೆ ಪರಿಚಯಿಸುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ಎಂಬುದನ್ನು ಇತರ ಸಂವಹನಗಳು ಸೂಚಿಸುತ್ತವೆ.
2014ರ ಅಕ್ಟೋಬರ್ 24ರಂದು ಎಪ್ಸ್ಟೀನ್ ಅವರು ಭಾರತದಲ್ಲಿ ನಡೆಯಲಿದ್ದ ಮದುವೆಯೊಂದರಲ್ಲಿ ಭಾಗವಹಿಸಲು ತಮ್ಮ ಸಹಾಯಕನಿಗೆ ಭಾರತೀಯ ವೀಸಾ ಪಡೆಯಲು ನೆರವಾಗುವಂತೆ ಪುರಿ ಅವರನ್ನು ಕೋರಿದ್ದರು. ಪುರಿ ಈ ಮನವಿಯನ್ನು ಭಾರತದ ಮಾಜಿ ರಾಜತಾಂತ್ರಿಕ ಪ್ರಮೋದ್ ಬಜಾಜ್ ಅವರಿಗೆ ರವಾನಿಸಿ, ಈ ಕೆಲಸವನ್ನು "ಆದ್ಯತೆಯ ಮೇರೆಗೆ" ಪೂರ್ಣಗೊಳಿಸುವಂತೆ ಕೇಳಿಕೊಂಡಿದ್ದರು.
ಅದೇ ವರ್ಷದ ಡಿಸೆಂಬರ್ ನಲ್ಲಿ ಪುರಿ ಅವರು ಎಪ್ಸ್ಟೀನ್ಗೆ ಇಮೇಲ್ ಕಳುಹಿಸಿ, ತಮ್ಮ "ವಿಶಿಷ್ಟ ದ್ವೀಪ" ಪ್ರವಾಸದಿಂದ ಯಾವಾಗ ಹಿಂದಿರುಗುತ್ತಾರೆ ಎಂದು ತಿಳಿಸುವಂತೆ ಕೇಳಿದ್ದರು. ಅಲ್ಲದೆ, ಅವರೊಂದಿಗೆ ಮಾತುಕತೆ ನಡೆಸಲು ಹಾಗೂ "ಭಾರತದ ಬಗ್ಗೆ ಆಸಕ್ತಿ ಮೂಡಿಸುವ" ಪುಸ್ತಕಗಳನ್ನು ನೀಡಲು ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದರು.
ಬಳಿಕ ಕಳುಹಿಸಿದ ಸಂದೇಶವೊಂದರಲ್ಲಿ ಪುರಿ, "ನಿಜಕ್ಕೂ, ಇದೊಂದು ರೀತಿಯ ಟೆಲಿಪತಿ (ಮನಸ್ಸಿನ ಭಾವನೆಗಳ ವಿನಿಮಯ)! ನೀವು ಹಿಂತಿರುಗಿದಾಗ ನನಗೆ ತಿಳಿಸಿ. ಚೆನ್ನಾಗಿ ಆನಂದಿಸಿ. ಹಾಗೆ ಮಾಡಲು ನಿಮಗೆ ಬೇರೆಯವರ ಪ್ರೋತ್ಸಾಹವೇನೂ ಬೇಕಿಲ್ಲ ಬಿಡಿ!" ಎಂದು ಬರೆದಿದ್ದರು.
ಲೈಂಗಿಕ ಅಪರಾಧ ಪ್ರಕರಣದಲ್ಲಿ ಬಂಧನ
2008ರಲ್ಲಿ ಅಮೆರಿಕದ ಫ್ಲೋರಿಡಾದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡ ಆರೋಪವನ್ನು ಎಪ್ಸ್ಟೀನ್ ಒಪ್ಪಿಕೊಂಡಿದ್ದ. 2019ರ ಜುಲೈನಲ್ಲಿ ಆತನ ವಿರುದ್ಧ ಫೆಡರಲ್ ಮಟ್ಟದ ಲೈಂಗಿಕ ಕಳ್ಳಸಾಗಣೆ ಆರೋಪಗಳನ್ನು ದಾಖಲಿಸಿ ಮತ್ತೆ ಬಂಧಿಸಲಾಗಿತ್ತು. ಬಳಿಕ ಅವರು ಬಂಧನದಲ್ಲಿದ್ದಾಗಲೇ ಮೃತಪಟ್ಟಿದ್ದರು.
ಸೌಜನ್ಯ: thewire.in






