ಅಮೆರಿಕ | ಸಾರ್ವಜನಿಕವಾಗಿ ಮೂತ್ರ ವಿಸರ್ಜನೆಗೆ ಆಕ್ಷೇಪಿಸಿದ ಹರ್ಯಾಣ ಮೂಲದ ಯುವಕನ ಗುಂಡಿಕ್ಕಿ ಹತ್ಯೆ

ಸಾಂದರ್ಭಿಕ ಚಿತ್ರ
ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದ ವ್ಯಕ್ತಿಯೋರ್ವನಿಗೆ ಆಕ್ಷೇಪಿಸಿದ್ದಕ್ಕೆ ಹರ್ಯಾಣ ಮೂಲದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಹರ್ಯಾಣದ ಜಿಂದ್ ಜಿಲ್ಲೆಯ ಕಪಿಲ್(26) ಹತ್ಯೆಯಾದ ಯುವಕ. ಈತ ಅಮೆರಿಕದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ.
“ ಕಪಿಲ್ ಅಮೆರಿಕದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಶನಿವಾರ, ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಗೆ ಆಕ್ಷೇಪ ವ್ಯಕ್ತಪಡಿಸಿದಾಗ ಕಪಿಲ್ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ” ಎಂದು ಕಪಿಲ್ ಅವರ ಗ್ರಾಮದ ಸರಪಂಚ್ ಸುರೇಶ್ ಕುಮಾರ್ ಗೌತಮ್ ತಿಳಿಸಿದ್ದಾರೆ.
ಕಪಿಲ್ ಹರ್ಯಾಣದ ಬರಾಹ್ ಕಲಾನ್ ಗ್ರಾಮದ ಈಶ್ವರ್ ಎಂಬವರ ಪುತ್ರನಾಗಿದ್ದು, ಅವರಿಗೆ ಇಬ್ಬರು ಸಹೋದರಿಯರಿದ್ದಾರೆ. ಅವರು 2022ರಲ್ಲಿ ಅಮೆರಿಕಕ್ಕೆ ಹೋಗಿದ್ದರು.
ಅಮೆರಿಕದಲ್ಲಿ ವಾಸಿಸುವ ಸಂಬಂಧಿಕರೋರ್ವರು ಕಪಿಲ್ ಹತ್ಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.





