1971ರ ಯುದ್ಧದಲ್ಲಿ ನೆರವಾಗಿದ್ದ ಇರಾನ್ ‘ಋಣ’ ತೀರಿಸಿದ ಪಾಕಿಸ್ತಾನ?

Photo : x.com/CNNnews18
ವಾಷಿಂಗ್ಟನ್, ಮೇ 13: ಅಮೆರಿಕ–ಇರಾನ್ ಸಂಘರ್ಷ ಶಮನಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ, ಇರಾನ್ನ ವಿಮಾನಗಳಿಗೆ ತನ್ನ ವಾಯುನೆಲೆಯಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಟ್ಟಿದೆ ಎಂಬ ವರದಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
1971ರ ಭಾರತ–ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಇರಾನ್ ನೀಡಿದ್ದ ನೆರವಿನ ಪ್ರತಿಯಾಗಿ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಇರಾನ್ನ ವಿಮಾನಗಳಿಗೆ ಪಾಕಿಸ್ತಾನ ಆಶ್ರಯ ನೀಡಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿತ್ತು. ಆದರೆ ಈ ವರದಿಯನ್ನು ಪಾಕಿಸ್ತಾನ ತಳ್ಳಿಹಾಕಿದೆ. ನೂರ್ಖಾನ್ ವಾಯುನೆಲೆ ನಗರ ಮಧ್ಯಭಾಗದಲ್ಲಿರುವುದರಿಂದ ಯಾವುದೇ ವಿಮಾನವನ್ನು ರಹಸ್ಯವಾಗಿ ಬಚ್ಚಿಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಹೇಳಿದೆ. ಇದೇ ವೇಳೆ, ಪಾಕಿಸ್ತಾನದ ಕ್ರಮದ ಬಗ್ಗೆ ಅಮೆರಿಕ ಆಡಳಿತವೂ ಬಹಿರಂಗ ಟೀಕೆ ಮಾಡುವುದನ್ನು ತಪ್ಪಿಸಿದೆ ಎನ್ನಲಾಗಿದೆ.
ಇರಾನ್ ತನ್ನ ಕೆಲವು ನಾಗರಿಕ ವಿಮಾನಗಳನ್ನು ನೆರೆಯ ಅಫ್ಘಾನಿಸ್ತಾನಕ್ಕೂ ಕಳುಹಿಸಿಕೊಟ್ಟಿದೆ ಎಂದು ವರದಿಯಾಗಿದೆ. ಅಮೆರಿಕ–ಇರಾನ್–ಇಸ್ರೇಲ್ ನಡುವಿನ ಸಂಘರ್ಷ ಉಲ್ಬಣಗೊಳ್ಳುವ ಮುನ್ನ ‘ಮಹಾನ್ ಏರ್’ ಸಂಸ್ಥೆಯ ವಿಮಾನಗಳು ಕಾಬೂಲ್ಗೆ ಆಗಮಿಸಿದ್ದವು ಎಂದು ಅಫ್ಘಾನಿಸ್ತಾನದ ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಪಾಕಿಸ್ತಾನ ಅಫ್ಘಾನ್ ಭೂಪ್ರದೇಶದ ಮೇಲೆ ದಾಳಿ ನಡೆಸಿದ ನಂತರ ಆ ವಿಮಾನಗಳನ್ನು ಹೆರಾತ್ಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
1971ರ ಭಾರತ–ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಶಾ ಮೊಹಮ್ಮದ್ ರೇಝಾ ಪಹಲ್ವಿ ನೇತೃತ್ವದ ಇರಾನ್, ಪಾಕಿಸ್ತಾನಕ್ಕೆ ಬಹಿರಂಗ ಬೆಂಬಲ ನೀಡಿತ್ತು. ಪಾಕಿಸ್ತಾನಕ್ಕೆ ಹೆಲಿಕಾಪ್ಟರ್ಗಳು, ಇಂಧನ, ಶಸ್ತ್ರಾಸ್ತ್ರಗಳು ಹಾಗೂ ಬಿಡಿಭಾಗಗಳನ್ನು ಪೂರೈಸಿದ್ದಲ್ಲದೆ, ಭಾರತದ ಹಸ್ತಕ್ಷೇಪವನ್ನೂ ವಿರೋಧಿಸಿತ್ತು. ಕೆಲವು ಪಾಕಿಸ್ತಾನಿ ಯುದ್ಧವಿಮಾನಗಳಿಗೆ ಇರಾನ್ ಆಶ್ರಯ ನೀಡಿದ್ದುದಾಗಿ ವರದಿಗಳು ತಿಳಿಸಿವೆ.
ಅಮೆರಿಕದ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಆಡಳಿತಾವಧಿಯ ರಹಸ್ಯ ದಾಖಲೆಗಳಲ್ಲಿಯೂ ಇರಾನ್ಗೆ ನೀಡಲಾದ ಬೆಂಬಲದ ಉಲ್ಲೇಖಗಳಿವೆ. ಪಾಕಿಸ್ತಾನ ಸಂಪೂರ್ಣವಾಗಿ ದುರ್ಬಲಗೊಳ್ಳುವುದನ್ನು ತಡೆಯಲು ಅಮೆರಿಕ ಮತ್ತು ಚೀನಾ ಪರೋಕ್ಷವಾಗಿ ನೆರವಾಗಿದ್ದವು ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.






