ಮರಣದಂಡನೆ ಭೀತಿ ನಡುವೆಯೇ ತಾಯ್ನಾಡಿಗೆ ಮರಳಲು ಹಸೀನಾ ಸಿದ್ಧತೆ; ಭಾರತದ ಷರತ್ತುಗಳೇನು?
ಢಾಕಾದಿಂದ ಸುರಕ್ಷತೆ, ನ್ಯಾಯಯುತ ವಿಚಾರಣೆಗೆ ಖಾತರಿ ಬಯಸಿದ ಭಾರತ

ಶೇಖ್ ಹಸೀನಾ (Photo: PTI)
ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಮರಣದಂಡನೆ ಶಿಕ್ಷೆ ಎದುರಿಸುತ್ತಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಡಿಸೆಂಬರ್ ನಲ್ಲಿ ತಾಯ್ನಾಡಿಗೆ ಮರಳಲು ಸಿದ್ಧತೆ ನಡೆಸಿದ್ದಾರೆ. ಅವರ ವಾಪಸಾತಿಗೆ ಭಾರತವೂ ಒಲವು ತೋರಿದೆ. ಆದರೆ, ಹಸೀನಾ ಅವರ ಸುರಕ್ಷತೆ ಮತ್ತು ನ್ಯಾಯಯುತ ವಿಚಾರಣೆಗೆ ಬಾಂಗ್ಲಾದೇಶ ಸರಕಾರ ಖಾತರಿ ನೀಡಬೇಕು ಎಂಬ ಷರತ್ತನ್ನು ಭಾರತ ಮುಂದಿಟ್ಟಿದೆ ಎಂದು BBC ಬಾಂಗ್ಲಾ ವರದಿ ಮಾಡಿದೆ.
ಎರಡು ವರ್ಷಗಳ ಹಿಂದೆ ಬಾಂಗ್ಲಾದೇಶದ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡಿದ್ದ ಹಸೀನಾ, ಢಾಕಾದಲ್ಲಿನ ತಮ್ಮ ನಿವಾಸದ ಮೇಲೆ ಉದ್ರಿಕ್ತ ಗುಂಪು ದಾಳಿ ನಡೆಸಿದ ಬಳಿಕ ಬಾಂಗ್ಲಾದೇಶದ ಸೇನಾ ವಿಮಾನದಲ್ಲಿ ಭಾರತಕ್ಕೆ ಬಂದಿದ್ದರು. ಇದೀಗ ಅವರನ್ನು ಮತ್ತೆ ತಾಯ್ನಾಡಿಗೆ ಕಳುಹಿಸಲು ಸೂಕ್ತ ಮಾರ್ಗ ರೂಪಿಸುವ ಪ್ರಯತ್ನವನ್ನು ಭಾರತ ಕಳೆದ ಕೆಲವು ಸಮಯದಿಂದ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ಸೇನಾ ಮೂಲಗಳನ್ನು ಉಲ್ಲೇಖಿಸಿ ಗುರುವಾರ (ನ. 12) BBC ಬಾಂಗ್ಲಾ ವರದಿ ಪ್ರಕಟಿಸಿದೆ. ಇದನ್ನು ಬಾಂಗ್ಲಾದೇಶದ ಹನ್ನೆರಡಕ್ಕೂ ಹೆಚ್ಚು ಮಾಧ್ಯಮಗಳು ಉಲ್ಲೇಖಿಸಿವೆ. ಅವಾಮಿ ಲೀಗ್ ಮುಖ್ಯಸ್ಥೆ ಹಸೀನಾ ಅವರ ಸುರಕ್ಷತೆಯನ್ನು ಖಚಿತಪಡಿಸುವುದರ ಜತೆಗೆ, ಅವರಿಗೆ ನ್ಯಾಯಯುತ ವಿಚಾರಣೆಯ ಅವಕಾಶ ಕಲ್ಪಿಸುವುದು ಭಾರತದ ಪ್ರಮುಖ ಷರತ್ತು ಎನ್ನಲಾಗಿದೆ.
ಆದರೆ, ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ಸರಕಾರ ಈ ವರದಿಯನ್ನು ದೃಢಪಡಿಸಿಲ್ಲ. ಈ ಕುರಿತು ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.
ಮರಣದಂಡನೆ ವಿರುದ್ಧ ಮೇಲ್ಮನವಿಗೆ ಅವಕಾಶ ಕೋರಿದ ಭಾರತ?
ಶುಕ್ರವಾರ (ನ.13) ಪತ್ರಕರ್ತರು ಈ ಕುರಿತು ಪ್ರಶ್ನಿಸಿದಾಗ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಲು ನಿರಾಕರಿಸಿದರು.
"ಶೇಖ್ ಹಸೀನಾ ಅವರನ್ನು ಹೊಸದಿಲ್ಲಿಯಿಂದ ಕರೆತರಲು ಬಾಂಗ್ಲಾದೇಶವು ಸೇನಾ ವಿಮಾನ ಕಳುಹಿಸಬೇಕೆಂದು ಭಾರತ ಬಯಸುತ್ತಿದೆ ಎಂದು ಕೆಲವು ವರದಿಗಳು ಹೇಳುತ್ತಿವೆ. ಅಲ್ಲದೆ, ಮರಣದಂಡನೆ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಮತ್ತು 2024ರ ದಮನಕಾರಿ ಕ್ರಮಗಳಿಗೆ ಸಂಬಂಧಿಸಿದಂತೆ ಹೊಸದಾಗಿ ವಿಚಾರಣೆ ಎದುರಿಸಲು ಹಸೀನಾ ಅವರಿಗೆ ಅವಕಾಶ ನೀಡಬೇಕು ಎಂದು ಭಾರತ ಭರವಸೆ ಕೋರಿದೆ ಎನ್ನಲಾಗಿದೆ. ಈ ಕುರಿತು ಏನಾದರೂ ದೃಢೀಕರಣವಿದೆಯೇ ಅಥವಾ ಯಾವುದೇ ಸಂವಹನ ನಡೆದಿದೆಯೇ?" ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಜೈಸ್ವಾಲ್, "ಈ ಬಗ್ಗೆ ನನಗೆ ಏನೂ ಹೇಳಲು ಇಲ್ಲ" ಎಂದರು.
ಹಸೀನಾ ಅವರಿಗೆ ಆಶ್ರಯ ನೀಡಲು ರಾಷ್ಟ್ರಗಳ ಹಿಂದೇಟು
ಬಾಂಗ್ಲಾದೇಶದ ಪ್ರಧಾನಿಯವರ ಸಹಾಯಕ ಪತ್ರಿಕಾ ಕಾರ್ಯದರ್ಶಿ ಕೆ.ಎಂ. ನಜ್ಮುಲ್ ಹಕ್ ಅವರು ಶುಕ್ರವಾರ ಫೇಸ್ಬುಕ್ ಪೋಸ್ಟ್ ಪ್ರಕಟಿಸಿ, ಹಸೀನಾ ಅವರಿಗೆ ತಮ್ಮ ದೇಶದಲ್ಲಿ ಆಶ್ರಯ ನೀಡಲು ಯಾವುದೇ ರಾಷ್ಟ್ರ ಮುಂದೆ ಬಂದಿಲ್ಲ ಎಂದು ಹೇಳಿದ್ದಾರೆ.
BBC ಬಾಂಗ್ಲಾ ವರದಿ ಪ್ರಕಟವಾದ ಬೆನ್ನಲ್ಲೇ ಅವರು ಈ ಪೋಸ್ಟ್ ಮಾಡಿದ್ದಾರೆ. "ಯುಕೆ, ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯ, ಫಿನ್ಲ್ಯಾಂಡ್, ಅಮೆರಿಕ, ಬೆಲಾರಸ್, ಖತರ್ ಸೇರಿದಂತೆ ಆಫ್ರಿಕಾದ ಒಂದೇ ಒಂದು ದೇಶವೂ ನರಮೇಧ ನಡೆಸಿದ ವ್ಯಕ್ತಿಗೆ ಆಶ್ರಯ ನೀಡಲು ಸಿದ್ಧವಿಲ್ಲ" ಎಂದು ನಜ್ಮುಲ್ ಬರೆದಿದ್ದಾರೆ.
"ಬೇರೆ ರೀತಿಯಲ್ಲಿ ಹೇಳುವುದಾದರೆ, ಹಸೀನಾ ಅವರಿಗೆ ಒಂದರ ಹಿಂದೆ ಒಂದರಂತೆ ಎಲ್ಲ ದಾರಿಗಳೂ ಮುಚ್ಚಿಕೊಳ್ಳುತ್ತಿವೆ" ಎಂದು ಹೇಳಿರುವ ಅವರು, ಅವಾಮಿ ಲೀಗ್ ನ ತಳಮಟ್ಟದ ಕಾರ್ಯಕರ್ತರು ಮತ್ತು ಬೆಂಬಲಿಗರ ರಕ್ತದ ಮೇಲೆ ಅವಲಂಬಿತರಾಗಿ, ಕೊನೆಯ ಆಯ್ಕೆಯಾಗಿ ಹಸೀನಾ ಬಾಂಗ್ಲಾದೇಶಕ್ಕೆ ಮರಳಲು ಬಯಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪಾಸ್ಪೋರ್ಟ್ ಅರ್ಜಿ ಮೂಲಕ ಢಾಕಾದೊಂದಿಗೆ ಮೊದಲ ಸಂಪರ್ಕ
ನ. 9ರಂದು ಹೊಸ ಪಾಸ್ಪೋರ್ಟ್ ಮತ್ತು ಪ್ರಯಾಣ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸುವ ಮೂಲಕ ಹಸೀನಾ ಅವರು ದೇಶ ತೊರೆದ ಬಳಿಕ ಮೊದಲ ಬಾರಿಗೆ ಬಾಂಗ್ಲಾದೇಶ ಸರ್ಕಾರದೊಂದಿಗೆ ಅಧಿಕೃತ ಸಂಪರ್ಕ ಸಾಧಿಸಿದ್ದಾರೆ. ಆದರೆ, ಢಾಕಾದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಬದಲಾಗಿ, ಅವರನ್ನು ಭಾರತ ಹಸ್ತಾಂತರಿಸಬೇಕೆಂದು ಬಾಂಗ್ಲಾದೇಶದ ಕೆಲವು ನಾಯಕರು ಒತ್ತಾಯಿಸುತ್ತಿದ್ದಾರೆ.
ಭಾರತದ ಮಾಜಿ ರಾಜತಾಂತ್ರಿಕ ವೀಣಾ ಸಿಕ್ರಿ ಅವರ ಪ್ರಕಾರ, ಹಸೀನಾ ಅವರ ಪಾಸ್ಪೋರ್ಟ್ ಕೋರಿಕೆ ವಿಚಾರದಲ್ಲಿ ಬಾಂಗ್ಲಾದೇಶ ಸರಕಾರ ಅತಿಯಾದ ಕಠಿಣ ನಿಲುವು ತಳೆದಿದೆ. ಅಲ್ಲದೆ, ಅಸಮಂಜಸವಾಗಿ ವರ್ತಿಸುತ್ತಿದೆ.
ಢಾಕಾದ ಹಿರಿಯ ಪತ್ರಕರ್ತ ಸ್ವದೇಶ್ ರಾಯ್ ಅವರ ಅಭಿಪ್ರಾಯದಂತೆ, ಪಾಸ್ಪೋರ್ಟ್ ನೀಡುವಂತೆ ಕೋರಿ ಬಾಂಗ್ಲಾದೇಶ ಸರಕಾರವನ್ನು ಸಂಪರ್ಕಿಸುವ ಮೂಲಕ ಹಸೀನಾ ಅವರು ಮೊದಲ ರಾಜಕೀಯ ನಡೆಯನ್ನು ಢಾಕಾದ ಅಂಗಳಕ್ಕೆ ಬಿಟ್ಟಿದ್ದಾರೆ.
ಬಾಂಗ್ಲಾದೇಶದ ನ್ಯಾಯಾಲಯವೊಂದು ಹಸೀನಾ ಅವರಿಗೆ ಮರಣದಂಡನೆ ವಿಧಿಸಿದೆ. ಅವರನ್ನು ಹಸ್ತಾಂತರಿಸುವಂತೆ ಢಾಕಾ ಪದೇ ಪದೇ ಒತ್ತಾಯಿಸುತ್ತಿದ್ದರೂ ಭಾರತ ಈವರೆಗೆ ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಮಾಜಿ ಪ್ರಧಾನಿ ಭಾರತದಲ್ಲಿಯೇ ಉಳಿಯಲು ಸಾಧ್ಯವಾಗಿದೆ.
ಈ ನಡುವೆ, ಡಿಸೆಂಬರ್ ನಲ್ಲಿ ಬಾಂಗ್ಲಾದೇಶಕ್ಕೆ ಮರಳುವ ಬಯಕೆಯನ್ನು ಹಸೀನಾ ವ್ಯಕ್ತಪಡಿಸಿದ್ದಾರೆ. ಈ ಘೋಷಣೆಯ ಹಿಂದೆ ಭಾರತದ ಮೌನ ಸಮ್ಮತಿ ಇದೆ ಎಂದು BBC ಬಾಂಗ್ಲಾ ವರದಿ ಹೇಳಿದೆ.






