ಜನಸಾಗರದ ನಡುವೆ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅಂತ್ಯಸಂಸ್ಕಾರ

PC : NDTV
ಬೈರೂತ್: ಇಸ್ರೇಲ್ ನ ದಾಳಿಯಲ್ಲಿ ಹತರಾಗಿದ್ದ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪಿನ ವರಿಷ್ಟ ಹಸನ್ ನಸ್ರಲ್ಲಾ ಹಾಗೂ ಅವರ ಉತ್ತರಾಧಿಕಾರಿ ಹಾಶೆಮ್ ಸಫೀದ್ದೀನ್ ಅವರ ಅಂತ್ಯಕ್ರಿಯೆ ಸುಮಾರು ಐದು ತಿಂಗಳ ಬಳಿಕ ಲೆಬನಾನ್ ರಾಜಧಾನಿ ಬೈರೂತ್ ನ ಹೊರವಲಯದ ಕ್ಯಾಮಿಲ್ಲೆ ಚಮೌನ್ ಸ್ಪೋರ್ಟ್ಸ್ ಸಿಟಿ ಕ್ರೀಡಾಂಗಣದಲ್ಲಿ ರವಿವಾರ ನಡೆದಿದ್ದು ಸಾವಿರಾರು ಮಂದಿ ಅಂತಿಮ ಗೌರವ ಸಲ್ಲಿಸಿದರು.
ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪನ್ನು ದಶಕಗಳ ಕಾಲ ಮುನ್ನಡೆಸಿದ್ದ ನಸ್ರಲ್ಲಾ 2024ರ ಸೆಪ್ಟಂಬರ್ 27ರಂದು ಇಸ್ರೇಲ್ನ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದು ಇದು ಹಿಜ್ಬುಲ್ಲಾಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ. ರವಿವಾರ ಅಂತ್ಯಸಂಸ್ಕಾರ ನಡೆದಿದ್ದ ಸ್ಪೋರ್ಟ್ ಸಿಟಿ ಕ್ರೀಡಾಂಗಣ 55,000 ಆಸನ ಸಾಮರ್ಥ್ಯವನ್ನು ಹೊಂದಿದ್ದು ಬಹುತೇಕ ಆಸನಗಳು ಭರ್ತಿಯಾಗಿದ್ದವು ಎಂದು ವರದಿಯಾಗಿದೆ.
ನಸ್ರಲ್ಲಾ ಅವರ ಫೋಟೋ ಮತ್ತು ಹಿಜ್ಬುಲ್ಲಾ ಧ್ವಜವನ್ನು ಹಿಡಿದಿದ್ದ ಬೆಂಬಲಿಗರು ಕಪ್ಪು ಬಟ್ಟೆ ಧರಿಸಿ ಕ್ರೀಡಾಂಗಣದಲ್ಲಿ ಹಾಜರಿದ್ದರು.
ಇಬ್ಬರು ನಾಯಕರ ಮೃತದೇಹವಿದ್ದ ಶವಪೆಟ್ಟಿಗೆಯನ್ನು ಹೊತ್ತ ಕಪ್ಪು ಬಣ್ಣದ ಟ್ರಕ್ ಗಳು ಜನಸಾಗರದ ನಡುವೆ ಕ್ರೀಡಾಂಗಣದತ್ತ ಮುಂದುವರಿದಾಗ ನಸ್ರಲ್ಲಾ ಅವರ ಭಾಷಣದ ಆಯ್ದ ಭಾಗಗಳನ್ನು ಧ್ವನಿವರ್ಧಕದ ಮೂಲಕ ಪ್ರಸಾರ ಮಾಡಲಾಯಿತು. ಆಗ ಸಾವಿರಾರು ಮಂದಿ ಬೆಂಬಲಿಗರು ತಮ್ಮ ಮುಷ್ಟಿಯನ್ನು ಗಾಳಿಯಲ್ಲಿ ಎತ್ತಿಹಿಡಿದು ` ನಾವು ನಿಮ್ಮ ಸೇವೆಯಲ್ಲಿದ್ದೇವೆ ನಸ್ರಲ್ಲಾ', `ನಾವು ನಸ್ರಲ್ಲಾ ಭರವಸೆಗೆ ನಿಷ್ಠರಾಗಿದ್ದೇವೆ' ಎಂದು ಘೋಷಣೆ ಕೂಗಿದರು ಎಂದು ವರದಿಯಾಗಿದೆ.







