ಹವಾಯಿ: ಭೀಕರ ಕಾಡ್ಗಿಚ್ಚಿಗೆ ಕನಿಷ್ಠ 36 ಮಂದಿ ಬಲಿ

Photo : AP
ವೈಲುಕು: ಅಮೆರಿಕದ ದ್ವೀಪರಾಜ್ಯವಾದ ಹವಾಯಿಯಲ್ಲಿ ಬುಧವಾರ ಸಂಭವಿಸಿದ ಭೀಕರ ಕಾಡ್ಗಿಚ್ಚಿಗೆ ಕನಿಷ್ಠ 36 ಮಂದಿ ಸಾವನ್ನಪ್ಪಿದ್ದಾರೆ. ಹವಾಯಿ ದಕ್ಷಿಣ ಭಾಗದಿಂದ ಹಾದುಹೋದ ಪ್ರಬಲವಾದ ಡೋರಾ ಸುಂಟರಗಾಳಿಯಿಂದಾಗಿ ವೇಗವಾಗಿ ಹರಡಿದ ಕಾಡ್ಗಿಚ್ಚು. ದಿಢೀರನೇ ಮಾವುಯಿ ದ್ವೀಪವನ್ನು ಆವರಿದೆ. ಕಾಡ್ಗಿಚ್ಚಿನಿಂದಾಗಿ ಹಲವಾರು ಕಾರುಗಳ ಟಯರುಗಳು ಹೊತ್ತಿಕೊಂಡಿವೆ ಹಾಗೂ ಹಲವಾರು ಐತಿಹಾಸಿಕ ಕಟ್ಟಡಗಳು ಬೆಂಕಿಗಾಹುತಿಯಾಗಿವೆ. ಕಾಡ್ಗಿಚ್ಚಿನ ಭೀಕರ ಜ್ವಾಲೆಗಳು ರಾತ್ರಿಯಿಡೀ ತಾಂಡವವಾಡಿದ್ದು, ಮಕ್ಕಳು ಸೇರಿದಂತೆ ಹಲವಾರು ಮಂದಿ ಸುರಕ್ಷತೆಗಾಗಿ ಸಮುದ್ರಕ್ಕೆ ಜಿಗಿದಿದ್ದಾರೆ.
ಕಾಡ್ಗಿಚ್ಚಿನ ಆರ್ಭಟಕ್ಕೆ 271 ಕಟ್ಟಡಗಳು ಹಾನಿಗೀಡಾಗಿವೆ ಅಥವಾ ನಾಶವಾಗಿವೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ಕಾಡ್ಗಿಚ್ಚಿನಿಂದಾಗಿ ಕನಿಷ್ಠ 396ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.
ದ್ವೀಪದ ವಿವಿಧೆಡೆ ಹಬ್ಬಿರುವ ಕಾಡ್ಗಿಚ್ಚನ್ನು ನಂದಿಸಲು ರಕ್ಷಣಾಪಡೆಗಳು, ಅಗ್ನಿಶಾಮಕದಳ ಅಹೋರಾತ್ರಿ ಪ್ರಯತ್ನಿಸುತ್ತಿವೆ.ಕಾಡ್ಗಿಚ್ಚಿನ ಹಾವಳಿ ಭಯಾನಕವಾಗಿರುವ ಹಿನ್ನೆಲೆಯಲ್ಲಿ ಮಾವುಯಿ ದ್ವೀಪದಿಂದ ದೂರವಿರುವಂತೆ ಪ್ರವಾಸಿಗರಿಗೆ ಹವಾಯಿ ಸರಕಾರ ಸೂಚಿಸಿದೆ.
ತೀವ್ರ ತಾಪಮಾನದಿಂದಾಗಿ ಈ ವರ್ಷದ ಬೇಸಿಗೆ ಋತುವಿನಲ್ಲಿ ಜಗತ್ತಿನ ವಿವಿಧೆಡೆ ಕಾಡ್ಗಿಚ್ಚು ಹಾವಳಿಯುಂಟಾಗಿದೆ. ಹವಾಮಾನ ಬದಲಾವಣೆಯು ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆಯನ್ನು ಹೆಚ್ಚಿಸಿವೆ.
ಮಾವುಯಿ ದ್ವೀಪದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಾಡ್ಗಿಚ್ಚನ್ನು ನಿಯಂತ್ರಿಸಲು ಲಭ್ಯವಿರುವ ಎಲ್ಲಾ ರೀತಿ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತೆ ತಾನು ಆದೇಶ ನೀಡಿರುವುದಾಗಿ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.
ಹವಾಯಿಯಲ್ಲೇ ಜನಿಸಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡಾ ಈ ಬಗ್ಗೆ ಹೇಳಿಕೆ ನೀಡಿದ್ದು, ಹಲವಾರು ಮಂದಿಗೆ ವಿಶಿಷ್ಟವಾಗಿರುವ ಆ ಸ್ಥಳದಿಂದ ಬರುತ್ತಿರುವ ಛಾಯಾಚಿತ್ರಗಳನ್ನು ನೋಡಲು ಕಷ್ಟವೆನಿಸುತ್ತದೆ ಎಂದು ಹೇಳಿದ್ದಾರೆ.







