Nepal | ಭಾರೀ ಮಳೆ, ಭೂಕುಸಿತಕ್ಕೆ 5 ದಿನಗಳಲ್ಲಿ 27 ಮಂದಿ ಮೃತ್ಯು

Photo Credit : PTI
ಕಠ್ಮಂಡು, ಸೆ. 29: ನೇಪಾಳದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಂಭವಿಸಿದ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಸೆಪ್ಟೆಂಬರ್ 24ರಿಂದ ಕನಿಷ್ಠ 27 ಮಂದಿ ಮೃತಪಟ್ಟಿದ್ದಾರೆ ಹಾಗೂ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ 24ರಿಂದ 27ರವರೆಗೆ 542 ವಿಪತ್ತು ಘಟನೆಗಳು ಸಂಭವಿಸಿದ್ದು, ಅವುಗಳಲ್ಲಿ ಭೂಕುಸಿತ, ಪ್ರವಾಹ ಹಾಗೂ ಭಾರೀ ಮಳೆಯಿಂದ ಉಂಟಾದ ಇತರ ಅವಘಡಗಳು ಸೇರಿವೆ ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆಯಿಂದಾಗಿ 304 ಭೂಕುಸಿತದ ಘಟನೆಗಳಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 87 ಪ್ರವಾಹ ಸಂಬಂಧಿತ ದುರಂತಗಳಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಭಾರೀ ಮಳೆಯಿಂದಾಗಿ ಸಂಭವಿಸಿದ 151 ಅವಘಡಗಳಲ್ಲಿ ಮೂವರು ಅಸುನೀಗಿದ್ದಾರೆ ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ಶಮನ ಹಾಗೂ ನಿರ್ವಹಣಾ ಪ್ರಾಧಿಕಾರ (ಎನ್ಡಿಆರ್ಆರ್ಎಂಎ) ತಿಳಿಸಿದೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ 227 ಮನೆಗಳು ನಾಶಗೊಂಡಿದ್ದು, ನೆರೆ ಹಾಗೂ ಭೂಕುಸಿತದ ಘಟನೆಗಳಲ್ಲಿ 31 ಸೇತುವೆಗಳಿಗೆ ಹಾನಿಯಾಗಿವೆ ಎಂದು ಪ್ರಾಧಿಕಾರ ತಿಳಿಸಿದೆ.




