ಆಹಾರದ ಕೊರತೆಯಿದ್ದರೂ ಪರಮಾಣು ಶಸ್ತ್ರಾಸ್ತ್ರಕ್ಕೆ ಭಾರೀ ವೆಚ್ಚ; ಉತ್ತರ ಕೊರಿಯಾಕ್ಕೆ ವಿಶ್ವಸಂಸ್ಥೆ ಟೀಕೆ

ಸಾಂದರ್ಭಿಕ ಚಿತ್ರ
ಜಿನೆವಾ: ಉತ್ತರ ಕೊರಿಯಾದ ಜನತೆ ಆಹಾರ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದರೂ ಆ ದೇಶದ ಆಡಳಿತ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮಕ್ಕೆ ಭಾರೀ ಮೊತ್ತವನ್ನು ವೆಚ್ಚ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗುರುವಾರ ಟೀಕಿಸಿದೆ.
ಡೆಮೊಕ್ರಾಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ(ಉತ್ತರ ಕೊರಿಯಾ)ದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ವ್ಯಾಪಕ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು ಜನರು ತೀವ್ರವಾದ ರಾಜಕೀಯ ದುರಾಡಳಿತಕ್ಕೆ ಒಳಗಾಗಿದ್ದಾರೆ ಎಂದು ಮಾನವ ಹಕ್ಕುಗಳಿಗಾಗಿನ ವಿಶ್ವಸಂಸ್ಥೆ ಹೈಕಮಿಷನರ್ ವೋಕರ್ ಟರ್ಕ್ ಸಭೆಯಲ್ಲಿ ಹೇಳಿದ್ದಾರೆ. ಇಲ್ಲಿ ಉಲ್ಲೇಖಿಸಿರುವ ಹಲವು ಉಲ್ಲಂಘನೆಗಳು ಉ.ಕೊರಿಯಾದ ಹೆಚ್ಚುತ್ತಿರುವ ಮಿಲಿಟರೀಕರಣದಿಂದ ನೇರವಾಗಿ ಅಥವಾ ಬೆಂಬಲದಿಂದ ನಡೆಯುತ್ತಿವೆ. ದೇಶದ ಮಿಲಿಟರಿ ಸಲಕರಣೆ ಮತ್ತು ಶಸ್ತ್ರಾಸ್ತ್ರ ನಿರ್ಮಾಣ ಕಾರ್ಯದಲ್ಲಿ ಮಕ್ಕಳ ಸಹಿತ ಸ್ಥಳೀಯರನ್ನು ಬಲವಂತದ ದುಡಿಮೆಗೆ ನಿರ್ಬಂಧಿಸಲಾಗುತ್ತಿದೆ ಎಂದು ಟರ್ಕ್ ಹೇಳಿದ್ದಾರೆ.
ಕಳೆದ ವರ್ಷದಿಂದೀಚೆಗೆ ಉತ್ತರ ಕೊರಿಯಾವು ಪರಮಾಣು ಸಿಡಿತಲೆ ಹೊತ್ತೊಯ್ಯುವ ಸಾಮಥ್ರ್ಯದ ಕ್ಷಿಪಣಿಗಳನ್ನು ನಿರಂತರ ಪರೀಕ್ಷೆ ನಡೆಸುತ್ತಿರುವುದು ಪೂರ್ವ ಏಶ್ಯಾದಾದ್ಯಂತ ಉದ್ವಿಗ್ನತೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ, ಉ.ಕೊರಿಯಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯವನ್ನು 6 ವರ್ಷದ ಬಳಿಕ ಮೊದಲ ಬಾರಿಗೆ ಅಮೆರಿಕದ ಕೋರಿಕೆಯಂತೆ ಭದ್ರತಾ ಮಂಡಳಿಯಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗಿದೆ.
ಉತ್ತರ ಕೊರಿಯಾದಲ್ಲಿ ವರದಿಯಾಗಿರುವ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ದೌರ್ಜನ್ಯ ಪ್ರಕರಣಗಳು ಆ ದೇಶ ಅಭಿವೃದ್ಧಿಪಡಿಸಿರುವ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳು ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳಿಗೆ ನೇರವಾಗಿ ಸಂಬಂಧಿಸಿದೆ ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್-ಗ್ರೀನ್ಫೀಲ್ಡ್ ಖಂಡಿಸಿದರು.
`ದೀರ್ಘಾವಧಿಯಿಂದ ಗಡಿಯನ್ನು ಮುಚ್ಚಿರುವುದು, ಜಾಗತಿಕ ನಿರ್ಬಂಧದ ಪರಿಣಾಮ ಆ ದೇಶದ ಜನತೆ ಆಹಾರದ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸಂಘರ್ಷದ ಪರಿಸ್ಥಿತಿಯಿದೆ ಎಂಬ ಕಾರಣ ನೀಡಿ ಆಡಳಿತವು ತನ್ನ ಮಿಲಿಟರೀಕರಣ ಪ್ರಕ್ರಿಯೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ದೇಶದ ಜನತೆಯ ಮೇಲೆ ಮಾರಕ ಪರಿಣಾಮಕ್ಕೆ ಕಾರಣವಾಗಿದೆ' ಎಂದು ಉತ್ತರ ಕೊರಿಯಾಕ್ಕೆ ಸಂಬಂಧಿಸಿ ವಿಶ್ವಸಂಸ್ಥೆ ಮಾನವ ಹಕ್ಕು ಕಮಿಷನ್ನ ವಿಶೇಷ ಪ್ರತಿನಿಧಿ ಎಲಿಝಬೆತ್ ಸಲ್ಮೋನ್ ಹೇಳಿದರು.
ಉತ್ತರ ಕೊರಿಯಾದ ದೇಶಭ್ರಷ್ಟ ಪ್ರಜೆ ಇಲೆಯೊಕ್ ಕಿಮ್ ಸಭೆಯಲ್ಲಿ ಮಾತನಾಡಿ ` ಸರಕಾರ ನಮ್ಮ ರಕ್ತ ಮತ್ತು ಬೆವರನ್ನು ನಾಯಕತ್ವದ ಐಷಾರಾಮಿ ಜೀವನಕ್ಕೆ, ಕ್ಷಿಪಣಿ ಕಾರ್ಯಕ್ರಮಗಳಿಗೆ ಬಳಸುತ್ತಿದೆ. ನಮ್ಮ ಕಠಿಣ ಪರಿಶ್ರಮವನ್ನು ಆಕಾಶಕ್ಕೆ ಉಡಾಯಿಸಲಾಗುತ್ತಿದೆ. ಕೇವಲ ಒಂದು ಕ್ಷಿಪಣಿಗೆ ವೆಚ್ಚ ಮಾಡುವ ಹಣವು ಅಲ್ಲಿನ ಜನತೆಗೆ ಮೂರು ತಿಂಗಳ ಆಹಾರ ವೆಚ್ಚಕ್ಕೆ ಸಾಕಾಗುತ್ತದೆ' ಎಂದರು.
ಬಹುತೇಕ ಸದಸ್ಯರು ಉತ್ತರ ಕೊರಿಯಾದಲ್ಲಿ ಹದಗೆಡುತ್ತಿರುವ ಜೀವನ ಪರಿಸ್ಥಿತಿ ಹಾಗೂ ಮಾನವ ಹಕ್ಕುಗಳನ್ನು ಖಂಡಿಸಿದರು. ಆದರೆ ಚೀನಾ ಮತ್ತು ರಶ್ಯದ ಪ್ರತಿನಿಧಿಗಳು `ಉತ್ತರ ಕೊರಿಯಾದ ಮಾನವ ಹಕ್ಕುಗಳ ವಿಷಯವನ್ನು ಎತ್ತಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೂಕ್ತ ವೇದಿಕೆಯಲ್ಲ' ಎಂದು ಹೇಳಿದರು. ಭದ್ರತಾ ಮಂಡಳಿ ಸಭೆಯಲ್ಲಿ ಈ ವಿಷಯವನ್ನು ಎತ್ತಿರುವುದು ತಮ್ಮದೇ ಆದ ರಾಜಕೀಯ ರಾಜಕೀಯ ಕಾರ್ಯಸೂಚಿಯನ್ನು ಮುನ್ನಡೆಲು ಅಮೆರಿಕ ಮತ್ತದರ ಮಿತ್ರದೇಶಗಳು ನಡೆಸಿರುವ ಸಿನಿಕತನದ ಕೃತ್ಯವಾಗಿದೆ ಎಂದು ರಶ್ಯದ ರಾಯಭಾರಿ ಡಿಮಿಟ್ರಿ ಪೊಲ್ಯಾಂಸ್ಕಿ ಟೀಕಿಸಿದರು. ಚರ್ಚೆಯು ರಚನಾತ್ಮಕವಾಗಿಲ್ಲ ಮತ್ತು ಪ್ರದೇಶದಲ್ಲಿನ ಕಾರ್ಯತಂತ್ರದ ಉದ್ವಿಗ್ನತೆಯನ್ನು ತಗ್ಗಿಸಲು ಯಾವುದೇ ಪರಿಹಾರವನ್ನು ಸೂಚಿಸಿಲ್ಲ ಎಂದು ಎರಡೂ ದೇಶಗಳ ಪ್ರತಿನಿಧಿಗಳು ಹೇಳಿದ್ದಾರೆ.