ಇಂಗ್ಲೆಂಡ್: ವೈಮಾನಿಕ ತರಬೇತಿ ವೇಳೆ ಹೆಲಿಕಾಪ್ಟರ್ ಪತನ; ಮೂವರು ಮೃತ್ಯು

PC: x.com/standardnews
ಲಂಡನ್: ಇಂಗ್ಲೆಂಡ್ ನ ದಕ್ಷಿಣ ಕರಾವಳಿ ಪ್ರದೇಶದ ಇಸ್ಲೆ ಆಫ್ ವೈಟ್ ನಲ್ಲಿ ವೈಮಾನಿಕ ತರಬೇತಿ ವೇಳೆ ಹೆಲಿಕಾಪ್ಟರ್ ಪತನಗೊಂಡು ಸಂಭವಿಸಿದ ದುರಂತದಲ್ಲಿ ಮೂವರು ಮೃತಪಟ್ಟು ಒಬ್ಬರು ತೀವ್ರ ಗಾಯಗೊಂಡಿದ್ದಾರೆ.
ನಾರ್ತುಂಬ್ರಿಯಾ ಹೆಲಿಕಾಪ್ಟರ್ಸ್ ಸಂಸ್ಥೆ ನಿರ್ವಹಿಸುತ್ತಿದ್ದ ರಿಬಿನ್ಸನ್ ಆರ್44 2 ಹೆಲಿಕಾಪ್ಟರ್, ಸ್ಯಾಂಡೌನ್ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಟೇಕಾಫ್ ಆಗಿದ್ದು, ಮೂವರು ಇದರಲ್ಲಿ ಸಂಚರಿಸುತ್ತಿದ್ದರು. 9.30ರ ಸುಮಾರಿಗೆ ಶಂಕ್ಲೀನ್ ಸಮೀಪದ ಹೊಲದಲ್ಲಿ ಇದು ಉರುಳಿ ಬಿದ್ದಿದೆ ಎಂದು ಎಪಿ ವರದಿ ಮಾಡಿದೆ.
ತೀವ್ರ ಗಾಯಗೊಂಡ ವ್ಯಕ್ತಿಯನ್ನು ಸೌತ್ಹ್ಯಾಂಪ್ಟನ್ ಟ್ರಾಮಾ ಸೆಂಟರ್ ಗೆ ವಿಮಾನದ ಮೂಲಕ ಸಾಗಿಸಲಾಗಿದೆ ಎಂದು ಹ್ಯಾಂಪ್ಶೈರ್ ಮತ್ತು ಇಸ್ಲೆ ಆಫ್ ವೈಟ್ ಕಾನ್ಸ್ಟೇಬಲರಿ ದೃಢಪಡಿಸಿದ್ದಾರೆ.
ಹೆಲಿಕಾಪ್ಟರ್ ಸುರಳಿಯಾಕಾರದಲ್ಲಿ ಸುತ್ತುತ್ತಾ ಪತನಗೊಂಡಿದ್ದನ್ನು ತಾವು ವೀಕ್ಷಿಸಿದ್ದಾಗಿ ಪ್ರತ್ಯಕ್ಷದರ್ಶಿ ಲೀಗ್ ಗೋಲ್ಡ್ ಸ್ಮಿತ್ ಇಸ್ಲೆ ಆಫ್ ವೈಟ್ಕೌಂಟಿ ಪ್ರೆಸ್ಗೆ ತಿಳಿಸಿದ್ದಾರೆ.
ನಗರದ ಹೊರಭಾಗದಲ್ಲಿ ಹೆಲಿಕಾಪ್ಟರ್ ಪತನಗೊಂಡ ಮಾಹಿತಿಯಿಂದ ತೀವ್ರ ಆಘಾತವಾಗಿದೆ ಎಂದು ಶಂಕ್ಲೀನ್ ಟೌನ್ಕೌನ್ಸಿಲ್ ಹೇಳಿಕೆ ನೀಡಿದೆ. ಘಟನಾ ಸ್ಥಳಕ್ಕೆ ಬ್ರಿಟನ್ನ ವೈಮಾನಿಕ ಅಪಘಾತ ತನಿಖಾ ತಂಡ ಆಗಮಿಸಿದ್ದು, ಕಾರಣವನ್ನು ಪತ್ತೆ ಮಾಡಲು ಪುರಾವೆಗಳನ್ನು ಸಂಗ್ರಹಿಸುತ್ತಿದೆ ಎಂದು ಮೂಲಗಳು ಹೇಳಿವೆ.







