ಇಲ್ಲಿಗೆ ವಾರ್ತಾ ಪ್ರಸಾರ ಮುಗಿಯಿತು | 200 ಅಡಿ ಎತ್ತರದ ರೇಡಿಯೊ ಗೋಪುರವನ್ನು ಕದ್ದೊಯ್ದ ಕಳ್ಳರು

Photo :indiatoday.in
ಅಲಬಾಮಾ (ಅಮೆರಿಕಾ): ಅಚ್ಚರಿಯ ಘಟನೆಯೊಂದರಲ್ಲಿ ಅಮೆರಿಕಾದ ಅಲಬಾಮಾದಲ್ಲಿನ ರೇಡಿಯೊ ಪ್ರಸರಣ ಕೇಂದ್ರದಿಂದ 200 ಎತ್ತರದ ರೇಡಿಯೊ ಗೋಪುರ ಹಾಗೂ ಟ್ರಾನ್ಸ್ ಮಿಟರ್ ಅನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಡೆದಿದೆ. ಇದರಿಂದ ರೇಡಿಯೊ ವಾಹಿನಿಯು ತನ್ನ ಪ್ರಸಾರ ಕಾರ್ಯವನ್ನು ಸ್ಥಗಿತಗೊಳಿಸಿದೆ ಎಂದು indiatoday.in ವರದಿ ಮಾಡಿದೆ.
ಈ ಘಟನೆಯು ಫೆಬ್ರವರಿ 2ರಂದು ಅಲಬಾಮಾದ ಜಸ್ಪರ್ ನಲ್ಲಿ ನಡೆದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರೇಡಿಯೊ ಪ್ರಸರಣ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಬ್ರೆಟ್ ಎಲ್ಮೋರ್, ಜಸ್ಪರ್ ಸಮುದಾಯಕ್ಕೆ ರೇಡಿಯೊ ಸೇವೆಯೇ ಸುದ್ದಿ ಹಾಗೂ ಮಾಹಿತಿಯ ಪ್ರಮುಖ ಮೂಲವಾಗಿತ್ತು. ರೇಡಿಯೊ ಗೋಪುರವನ್ನು ಕದ್ದೊಯ್ದಿರುವುದರಿಂದ ಜಸ್ಪರ್ ಸಮುದಾಯವು ತನ್ನ ಧ್ವನಿಯನ್ನೇ ಕಳೆದುಕೊಂಡಂತಾಗಿದೆ ಎಂದು AP ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಫೆಬ್ರವರಿ 2ರಂದು ನಿರ್ವಹಣಾ ಸಿಬ್ಬಂದಿಗಳು ಸ್ಥಳಕ್ಕೆ ತಲುಪಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಸಮೀಪದ ಕಟ್ಟಡವೊಂದರಲ್ಲಿ ನಿಯೋಜಿಸಲಾಗಿದ್ದ ಗೋಪುರ ಮತ್ತು ಎಲ್ಲ ಪ್ರಸರಣ ಸಾಧನಗಳು ಕಳವಾಗಿರುವುದು ಆಗಷ್ಟೇ ಅವರ ಗಮನಕ್ಕೆ ಬಂದಿದೆ. ಈ ರೇಡಿಯೊ ಗೋಪುರವು 1950ರಿಂದ ಕಾರ್ಯನಿರ್ವಹಿಸುತ್ತಿದೆ.
ಕಳ್ಳರು ಸೂಕ್ಷ್ಮ ಸಾಧನಗಳನ್ನು ಬಳಸಿ, ಗೋಪುರವನ್ನು ಸಣ್ಣ ತುಂಡಗಳನ್ನಾಗಿ ಬೇರ್ಪಡಿಸುವ ಮೂಲಕ ಅದನ್ನು ಕದ್ದೊಯ್ದಿದ್ದಾರೆ ಎಂದು ರೇಡಿಯೊ ಪ್ರಸರಣ ಕೇಂದ್ರದ ಅಧಿಕಾರಿಗಳು ಶಂಕಿಸಿದ್ದಾರೆ.
ರೇಡಿಯೊ ಪ್ರಸರಣ ಕೇಂದ್ರದ ಗೋಪುರಕ್ಕಾಗಲಿ, ಅಥವಾ ಸಾಧನಗಳಿಗಾಗಿ ಯಾವುದೇ ವಿಮೆ ಮಾಡಿಸಿರಲಿಲ್ಲ ಎಂದು ಹೇಳಲಾಗಿದೆ. ರೇಡಿಯೊ ಗೋಪುರವನ್ನು ಪುನರ್ ನಿರ್ಮಾಣ ಮಾಡಲು ಸುಮಾರು 60,000-1,00,000 ಡಾಲರ್ (ಅಂದಾಜು ರೂ. 83 ಲಕ್ಷ) ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ರೇಡಿಯೊ ಗೋಪುರವನ್ನು ಪುನರ್ ನಿರ್ಮಾಣ ಮಾಡಲು ‘GoFundMe’ ಪುಟವು ನಿಧಿ ಸಂಗ್ರಹಕ್ಕೆ ಚಾಲನೆ ನೀಡಿದ್ದು, ಸ್ಥಳೀಯ ಸಮುದಾಯಗಳೂ ರೇಡಿಯೊ ಗೋಪುರವನ್ನು ಪುನರ್ ನಿರ್ಮಾಣ ಮಾಡಲು ನೆರವು ನೀಡಲಿದ್ದಾರೆ ಎಂಬ ಆಶಾವಾದದಲ್ಲಿ ರೇಡಿಯೊ ಪ್ರಸರಣ ಕೇಂದ್ರದ ವ್ಯವಸ್ಥಾಪಕರಲ್ಲಿದೆ.







