ಗಾಝಾದಲ್ಲಿ ಜನಾಂಗಿಯ ನರಮೇಧ ನಡೆಯುತ್ತಿದೆ : ಹಾಲಿವುಡ್ ನಟಿ ಜೆನಿಫರ್ ಲಾರೆನ್ಸ್ ಕಳವಳ

ಜೆನಿಫರ್ ಲಾರೆನ್ಸ್ | PC : yahoo.com
ವಾಶಿಂಗ್ಟನ್,ಸೆ.27 : ಅಮೆರಿಕದ ಖ್ಯಾತ ಹಾಲಿವುಡ್ ನಟಿ ಜೆನಿಫರ್ ಲಾರೆನ್ಸ್ ಅವರು ಫೆಲೆಸ್ತೀನ್ ಹೋರಾಟಕ್ಕೆ ಬಹಿರಂಗ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಗಾಝಾದಲ್ಲಿ ಇಸ್ರೇಲ್ ಎಸಗಿದ ಕೃತ್ಯಗಳು ಜನಾಂಗೀಯ ನರಮೇಧಕ್ಕಿಂತ ಕಡಿಮೆಯೇನಲ್ಲ ಎಂದು ಆಸ್ಕರ್ ಪುರಸ್ಕೃತ ನಟಿ ಹೇಳಿದ್ದಾರೆ.
ಸ್ಪೇನ್ನ ಸ್ಯಾನ್ಸೆಬಾಸ್ಟಿಯನ್ನಲ್ಲಿ ನಡೆಯುತ್ತಿರುವ ಚಲನಚಿತ್ರೋತ್ಸವದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಚಲನಚಿತ್ರೋತ್ಸವದ ನಿರೂಪಕರು ಜೆನಿಫರ್ ಅವರನ್ನು ತಡೆಯಲು ಯತ್ನಿಸಿದರಾದರೂ ಗಾಝಾದಲ್ಲಿ ಇಸ್ರೇಲ್ ಆಕ್ರಮಣದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಆಕೆ ನೇರವಾಗಿ ಉತ್ತರಿಸಿದರು.
‘‘ಗಾಝಾ ಹತ್ಯಾಕಾಂಡವನ್ನು ಕಂಡು ಭಯಭೀತಳಾಗಿದ್ದೇನೆ. ಇದು ಹೃದಯವಿದ್ರಾವಕವಾಗಿದೆ. ಗಾಝಾದಲ್ಲಿ ನಡೆದಿರುವುದು ಜನಾಂಗಿಯ ನರಮೇಧಕ್ಕಿಂತ ಕಡಿಮೆಯಾದುದೇನಲ್ಲ. ಇದನ್ನು ಒಪ್ಪಲು ಸಾಧ್ಯವಿಲ್ಲ. ನನ್ನ ಮಕ್ಕಳು ಹಾಗೂ ಜಗತ್ತಿನಾದ್ಯಂತದ ಎಲ್ಲಾ ಮಕ್ಕಳ ಬಗ್ಗೆಯೂ ನಾನು ಭಯಗ್ರಸ್ತಳಾಗಿದ್ದಾನೆ’ ಎಂದು ಆಕೆ ಹೇಳಿದರು.
ಗಾಝಾ ನರಮೇಧದ ಬಗ್ಗೆ ಮೌನತಾಳಿರುವ ಅಮೆರಿಕದ ರಾಜಕೀಯ ನಿಲುವನ್ನು ಜೆನಿಫರ್ ಟೀಕಿಸಿದರು. ರಾಜಕೀಯದಲ್ಲಿ ಪ್ರಾಮಾಣಿಕತೆಯಿಲ್ಲವೆಂಬ ಭಾವನೆ ಇಂದಿನ ಯುವಜನತೆಗೆ ಮೂಡಿದೆ ಎಂದರು.
‘‘ರಾಜಕಾರಣಿಗಳು ಕಳ್ಳರು, ಅವರಿಗೆ ಕರುಣೆಯೆಂಬುದೇ ಇಲ್ಲ. ಜಗತ್ತಿನ ಒಂದು ಭಾಗದಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ನಿರ್ಲಕ್ಷಿಸಿದಲ್ಲಿ, ಅದು ನಿಮ್ಮ ಕಡೆಗೆ ಬರಲು ಹೆಚ್ಚು ಸಮಯ ಹಿಡಿಯುವುದಿಲ್ಲ’’ ಎಂದು ಜೆನ್ನಿಫರ್ ಎಚ್ಚರಿಕೆ ನೀಡಿದರು.
ಗಾಝಾ ನರಮೇಧಕ್ಕೆ ಪ್ರತಿಭಟನೆಯಾಗಿ ಇಸ್ರೇಲ್ ಚಲನಚಿತ್ರ ಸ್ಟುಡಿಯೋಗಳಿಗೆ ಬಹಿಷ್ಕಾರವನ್ನು ಘೋಷಿಸುವ ಪತ್ರಕ್ಕೆ ಹಾಲಿವುಡ್ನ ನೂರಾರು ನಟರು, ನಿರ್ದೇಶಕರು ಸಹಿ ಹಾಕಿದ್ದಾರೆ.
ಹಾಲಿವುಡ್ ತಾರೆಯರಾದ ಮಾರ್ಕ್ ಬಫೆಲ್, ಎಮ್ಮಾ ಸ್ಟೋನ್, ಜೊವಾಕ್ವಿನ್ ಫೀನಿಕ್ಸ್, ಒಲಿವಿಯಾ ಕೊಲ್ಮಾನ್ ಸಹಿ ಹಾಕಿದವರಲ್ಲಿ ಸೇರಿದ್ದಾರೆ.







